ADVERTISEMENT

ವಿಜಯಪುರ| ಎಸ್‌.ಆರ್‌.ಪಾಟೀಲ ಸ್ಪರ್ಧೆ; ರಾಜಕೀಯ ಸಂಚಲನ

ದೇವರಹಿಪ್ಪರಗಿ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳಿಗೆ ನಿರಾಸೆ; ಭಿನ್ನಮತ ಸ್ಪೋಟ

ಬಸವರಾಜ ಸಂಪಳ್ಳಿ
Published 19 ಮಾರ್ಚ್ 2023, 14:27 IST
Last Updated 19 ಮಾರ್ಚ್ 2023, 14:27 IST
ಎಸ್.ಆರ್.ಪಾಟೀಲ
ಎಸ್.ಆರ್.ಪಾಟೀಲ   

ವಿಜಯಪುರ: ವಿಧಾನ ಪರಿಷತ್‌ ವಿರೋಧ ಪಕ್ಷದ ಮಾಜಿ ನಾಯಕ ಎಸ್‌.ಆರ್‌.ಪಾಟೀಲ ಅವರು ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ಹೈಕಮಾಂಡ್‌ ‘ಗ್ರೀನ್‌ ಸಿಗ್ನಲ್‌’ ನೀಡಿದೆ ಎಂಬ ಸುದ್ದಿ ಹರಿದಾಡತೊಡಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ, ಅದರಲ್ಲೂ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ.

ದೇವರ ಹಿಪ್ಪರಗಿ ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟು ಐದಾರು ತಿಂಗಳಿಂದ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್‌ನ ಒಂಬತ್ತು ಜನ ಟಿಕೆಟ್‌ ಆಕಾಂಕ್ಷಿಗಳಲ್ಲಿ ಭಾರೀ ನಿರಾಸೆ ಮೂಡಿಸಿರುವ ಜೊತೆಗೆ ಭಿನ್ನಮತವೂ ಸ್ಪೋಟವಾಗಿದೆ.

‘ಎಸ್‌.ಆರ್‌.ಪಾಟೀಲ ಜಿಲ್ಲೆಯವರಲ್ಲ, ಹೊರಗಿನವರು, ಅವರಿಗೆ ದೇವರಹಿಪ್ಪರಗಿ ಟಿಕೆಟ್‌ ನೀಡಬಾರದು’ ಎಂದು ಟಿಕೆಟ್‌ ಆಕಾಂಕ್ಷಿಗಳು ಇತ್ತೀಚೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ವಿರೋಧ ದಾಖಲಿಸಿದ್ದಾರೆ.

ADVERTISEMENT

ಎಸ್‌.ಆರ್‌.ಪಾಟೀಲ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿಯೂ ಪಕ್ಷದ ವರಿಷ್ಠರಿಗೂ ಸಂದೇಶ ರವಾನಿಸಿದ್ದಾರೆ. ಆದರೆ, ದೇವರಹಿಪ್ಪರಗಿ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವವರಲ್ಲೇ ಒಂದಿಬ್ಬರನ್ನು ಹೊರತು ಪಡಿಸಿ, ಇನ್ನುಳಿದವರು ಎಸ್‌.ಆರ್‌.ಪಾಟೀಲ ಸ್ಪರ್ಧೆಗೆ ಯಾವುದೇ ಅಭ್ಯಂತರ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಮ್ಮಕ್ಕಿನಿಂದ ವಿರೋಧ:

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಸ್‌.ಆರ್‌.ಪಾಟೀಲ, ‘ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ನಾನು ಅರ್ಜಿ ಸಲ್ಲಿಸಿರುವು ನಿಜ. ಆದರೆ, ಯಾವ ಕ್ಷೇತ್ರ ಎಂದು ಎಲ್ಲಿಯೂ ನಮೂದಿಸಿಲ್ಲ. ಬೀಳಗಿ, ಬಾಗಲಕೋಟೆ ಅಥವಾ ದೇವರ ಹಿಪ್ಪರಗಿ ಸೇರಿದಂತೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ಹೈಕಮಾಂಡ್‌ ಸೂಚಿಸಿದರೆ ಅಲ್ಲಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ’ ಎಂದು ಹೇಳಿದರು.

‘ದೇವರ ಹಿಪ್ಪರಗಿಯಿಂದ ನನಗೆ ಟಿಕೆಟ್‌ ನೀಡಬಾರದು ಎಂದವರೆಲ್ಲರೂ ನನ್ನ ಹಿತೈಷಿಗಳೇ. ಈ ಬಗ್ಗೆ ನನಗೆ ನೋವಿಲ್ಲ, ಅವರಿಗೂ ಟಿಕೆಟ್‌ ಕೇಳುವ ಹಕ್ಕಿದೆ, ವರಿಷ್ಠರು ಹೇಳಿದರೆ ಮಾತ್ರ ನಾನು ಅಲ್ಲಿಂದ ಸ್ಪರ್ಧಿಸುತ್ತೇನೆ, ಇಲ್ಲವಾದರೆ ಪಕ್ಷ ಯಾರಿಗೆ ಟಿಕೆಟ್‌ ನೀಡುತ್ತದೆಯೋ ಅವರಿಗೆ ಬೆಂಬಲಿಸುತ್ತೇನೆ’ ಎಂದರು.

‘ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ನನಗೇ ಇನ್ನೂ ಪಕ್ಷದಿಂದ ಯಾವುದೇ ಖಚಿತ ಭರವಸೆ, ಸೂಚನೆ ಬಂದಿಲ್ಲ. ಅಷ್ಟರಲ್ಲೇ ನನ್ನ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿರುವುದನ್ನು ಗಮನಿಸಿದರೆ ಯಾರೋ ಕುಮ್ಮಕ್ಕು ನೀಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ’ ಎಂದು ಹೇಳಿದರು.

‘ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ನಾಲ್ಕು ಬಾರಿ ಆಯ್ಕೆಯಾಗಿದ್ದೇನೆ. ಮಾತ್ರವಲ್ಲ, ಅವಿಭಜಿತ ವಿಜಯಪುರ ಜಿಲ್ಲಾ ಪರಿಷತ್‌ ಸದಸ್ಯನಾಗಿ, ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸಿದ್ದೇನೆ. ಜಿಲ್ಲೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇನೆ. ಜಿಲ್ಲೆಯ ಸಾಕಷ್ಟು ಯೋಜನೆಗಳಿಗೆ ಅನುದಾನ ನೀಡಿದ್ದೇನೆ. ಹೀಗಾಗಿ ನನ್ನನ್ನು ಹೊರಗಿನವರು ಎಂಬ ಆರೋಪಕ್ಕೆ ಅರ್ಥವಿಲ್ಲ’ ಎಂದರು.

****

ಕಾಂಗ್ರೆಸ್‌ ಗುಂಪುಗಾರಿಕೆಗೆ ಬಲ

ದೇವರಹಿಪ್ಪರಗಿಯಿಂದ ಎಸ್‌.ಆರ್‌.ಪಾಟೀಲ ಸ್ಪರ್ಧಿಸುವುದು ಖಚಿತವಾದರೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮತ್ತೊಂದು ಶಕ್ತಿ ಕೇಂದ್ರ ಉದ್ಭವವಾಗುವುದು ನಿಶ್ಚಿತ. ಕಾಂಗ್ರೆಸ್‌ನಲ್ಲಿ ಈಗಾಗಲೇ ಇರುವ ಗುಂಪುಗಾರಿಕೆ ಮತ್ತಷ್ಟು ಪ್ರಬಲವಾಗುವ ಸಾಧ್ಯತೆ ದಟ್ಟವಾಗಲಿದೆ.

ಅಲ್ಲದೇ, ಜಿಲ್ಲೆಯ ಪ್ರಭಾವಿ ನಾಯಕರೊಬ್ಬರು ಎಸ್‌.ಆರ್‌.ಪಾಟೀಲ ಅವರಿಗೆ ಟಿಕೆಟ್‌ ತಪ್ಪಿಸಲು ತಮ್ಮ ಬೆಂಬಲಿಗರ ಮೂಲಕ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ತಂತ್ರ ರೂಪಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಜೊತೆಗೆ ಎಸ್‌ಆರ್‌ಪಿಗೆ ಚುನಾವಣೆಯಲ್ಲಿ ಅಗತ್ಯ ಸಹಕಾರ ಸಿಗದಂತೆ ಮಾಡಿ, ವಿರೋಧಿ ಅಭ್ಯರ್ಥಿಗೆ ಪರೋಕ್ಷವಾಗಿ ಸಹಾಯ, ಸಹಕಾರ ನೀಡಲು ಈಗಾಗಲೇ ತೆರೆಮರೆಯಲ್ಲಿ ಯತ್ನಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸಿದ ಕಾಂಗ್ರೆಸ್‌ ಮುಖಂಡರು ‘ಪ್ರಜಾವಾಣಿ’ಗೆ ತಿಳಿಸಿದರು.

***

ದೇವರಹಿಪ್ಪರಗಿ ಕ್ಷೇತ್ರದ ಟಿಕೆಟ್ ನನಗೆ ನೀಡುವುದು, ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಷಯ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಒಂದು ವೇಳೆ ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ

–ಎಸ್‌.ಆರ್‌.ಪಾಟೀಲ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.