
ಬಸವನಬಾಗೇವಾಡಿ : ಬಸವೇಶ್ವರ ಸೇವಾ ಸಮಿತಿ, ಜಗತ್ತ ಜನನಿ ಫೌಂಡೇಶನ್ ಹಾಗೂ ಯೋಧಾ ಪೂರ್ವ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಲೋಕ ಕಲ್ಯಾಣಾರ್ಥ ಭಾನುವಾರ ಪಟ್ಟಣದ ಬಸವ ಭವನದಲ್ಲಿ ಶ್ರೀ ಶ್ರೀನಿವಾಸ ಹಾಗೂ ಪದ್ಮಾವತಿ ದೇವರ ಕಲ್ಯಾಣ ಮಹೋತ್ಸವವು ಸಚಿವ ಶಿವಾನಂದ ಪಾಟೀಲ್ ಉಪಸ್ಥಿತಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಜರುಗಿತು.
ಶ್ರೀನಿವಾಸ ಪದ್ಮಾವತಿ ಹಾಗೂ ಲಕ್ಷ್ಮಿ ದೇವರನ್ನು ಪಟ್ಟಣದ ಶ್ರೀ ಸತ್ಯನಾರಾಯಣ ದೇವಸ್ಥಾನದಿಂದ ಬಸವ ಭವನದವರೆಗೆ ಪುಷ್ಪಾಲಂಕೃತ ಭವ್ಯ ಸಾರೋಟದಲ್ಲಿ ಸಕಲ ವಾದ್ಯ ವೈಭವಗಳು, ಕಲಾ ಮೇಳಗಳೊಂದಿಗೆ ಶ್ರದ್ಧಾಭಕ್ತಿಯಿಂದ ಪುರ ಪ್ರವೇಶ ಮಾಡಿ ಮಂಟಪಕ್ಕೆ ಸ್ವಾಗತಿಸಿಕೊಳ್ಳಲಾಯಿತು. ಕಲ್ಯಾಣ ಮಹೋತ್ಸವ ಹಿನ್ನೆಲೆ ತುಳಸಿ ಪೂಜೆ, ಜಗಜ್ಯೋತಿ ಬಸವೇಶ್ಚರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ಬಾಗಿನ ಅರ್ಪಣೆ ಮಾಡಲಾಯಿತು.
ಶ್ರೀನಿವಾಸ - ಪದ್ಮಾವತಿ ಕಡೆಯವರ ದಿಬ್ಬಣ, ಕಾಶೀ ಯಾತ್ರೆ ವಿಧಿ, ವಧೂ ವರರ ಎದುರುಗೊಳ್ಳುವಿಕೆ, ಮಂಗಳ ವಾದ್ಯಗಳ ಸಮ್ಮಿಲನ, ಗಣಪತಿ ಪ್ರಾರ್ಥನೆ, ಲಕ್ಷ್ಮೀ - ಪದ್ಮಾವತಿ ಪೂಜೆ, ಶ್ರಿ ವೆಂಕಟರಮಣ ಪೂಜೆ, ಸಂಕೀರ್ತನೆ ಸೇವೆ, ರಾಜೋಪಚಾರ ಪೂಜೆ, ಕಲ್ಯಾಣ ಕಥಾ ಶ್ರವಣ, ಪನ್ನೀರ ಸಿಂಚನ, ಸುಮಂಗಲಿಯರ ಕಲಶ ನಿವೇದನ, ಹೋಮಾದಿ ಪವಿತ್ರ ಕಾರ್ಯಗಳ ಮೂಲಕ ಮಂಟಪದಲ್ಲಿ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ಜರುಗಿದವು.
ಹಾರಾರ್ಪಣೆ, ಮಾಂಗಲ್ಯ ಧಾರಣೆ, ವೇದ ಮಂತ್ರ ಪಠಣ, ವಧೂ ವರರಿಗೆ ಬಂಧು ಮಿತ್ರರಿಂದ ಆರತಕ್ಷಣೆಯ ಸಮರ್ಪಣೆ, ಹಿರಿಯರ ಆಶೀರ್ವಾದ, ಕಿರಿಯ ಶುಭ ಹಾರೈಕೆ ಹೀಗೆ ಒಂದು ವಿವಾಹದಲ್ಲಿ ನಡೆಯುವ ಎಲ್ಲ ವಿಧಿಗಳನ್ನೂ ಪುರೋಹಿತರು ಮುಂದೆ ನಿಂತು ನೆರವೇರಿಸಿದರು. ಶ್ರೀನಿವಾಸ- ಪದ್ಮಾವತಿಯರ ಪ್ರತಿಮೆಗಳಿಗೆ ಮಾಡಲಾದ ವಧೂ ವರರ ಶೃಂಗಾರ, ಭವ್ಯ ಮಂಟಪ ವಿಶೇಷ ಆಕರ್ಷಣೆಯಾಗಿತ್ತು. ಮದುವೆಯ ಕೊನೆಯಲ್ಲಿ ಶ್ರೀನಿವಾಸ- ಪದ್ಮಾವತಿಯರಿಗೆ ಮಹಾ ಪೂಜೆ, ಮಹಾಮಂಗಳಾರತಿ ಜರುಗಿದ ಬಳಿಕ ನೆರೆದ ಭಕ್ತರು ಕಲ್ಯಾಣ ಮಹೋತ್ಸವದ ಭೋಜನ ಹಾಗೂ ಪೂಜೆಯ ಪ್ರಸಾದ ಸವಿದು ಕೃತಾರ್ಥರಾದರು.
ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪಿಎಲ್‌ಡಿಇ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಗಣ್ಯ ವ್ಯಾಪಾರಸ್ಥರಾದ ಅನೀಲ ಅಗರವಾಲ, ಹರೀಶ ಅಗರವಾಲ, ವಿಜಯಪುರದ ಜಗತ್ತ ಜನನಿ ಪೌಂಡೇಶನ್ ಅಧ್ಯಕ್ಷ ವಿನಾಯಕ ಕುರ್ಡೆಕರ, ಶೈಲಜಾ ಕುರ್ಡೆಕರ, ರಾಜಶ್ರೀ ಜುಗತಿ, ಪುರಸಭೆ ಮಾಜಿ ಅಧ್ಯಕ್ಷೆ ಜಗದೇವಿ ಗುಂಡಳ್ಳಿ,ಮುಖಂಡರಾದ ಸುರೇಶಗೌಡ ಪಾಟೀಲ, ಎಂ.ಜಿ.ಆದಿಗೊಂಡ, ಶೇಖರ ಗೊಳಸಂಗಿ, ಬಸವರಾಜ ಕೋಟಿ, ಅನಿಲ ಪವಾರ, ರಮೇಶ ಯಳಮೇಲಿ, ಶೇಖರಗೌಡ ಪಾಟೀಲ, ಸಂಕನಗೌಡ ಪಾಟೀಲ, ಡಾ.ಬಸಯ್ಯ ಪುರಾಣಿಕಮಠ, ರವಿ ರಾಠೋಡ ಸೇರಿದಂತೆ ಇತರರು ಭಾಗಿಯಾಗಿದ್ದರು.