ತಾಳಿಕೋಟೆ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪರಿಶಿಷ್ಟ ಸಮುದಾಯದ ನೌಕರ ಶಶಿಕಾಂತ ಬೆನ್ನೂರ ಅವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ವಿವಿಧ ದಲಿತಪರ ಸಂಘಟನೆಗಳು ಕರೆ ನೀಡಿದ್ದ ತಾಳಿಕೋಟೆ ಬಂದ್ ಶುಕ್ರವಾರ ಯಶಸ್ವಿಯಾಯಿತು.
ಬಂದ್ ಅಂಗವಾಗಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡುವದರೊಂದಿಗೆ ಮೆರವಣಿಗೆ ಆರಂಭವಾಯಿತು. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ರಸ್ತೆ ತಡೆ ಮಾಡಲಾಯಿತು.
‘ಶಶಿಕಾಂತ್ ಬೆನ್ನೂರ ಅವರ ಸಹ ಸಿಬ್ಬಂದಿಗಳಾದ ಈರಣ್ಣ ವಡವಡಗಿ, ಜ್ಯೋತಿ ಕೋಳೂರಗಿ, ಶ್ರೀದೇವಿ ಬಗಲಿ ಹಾಗೂ ಆಡಳಿತ ವೈದ್ಯಾಧಿಕಾರಿ ಹಲವು ದಿನಗಳಿಂದ ನೀಡುತ್ತಿದ್ದ ಮಾನಸಿಕ ಹಿಂಸೆ ಸಹಿಸದೆ ಶಶಿಕಾಂತ್ ಈಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ಕೂಡಲೇ ಬಂಧಿಸಿ, ಗಲ್ಲು ಶಿಕ್ಷೆ ನೀಡಬೇಕು. ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು. ಎಲ್ಲ ಪರಿಶಿಷ್ಟ ಸಮುದಾಯದ ನೌಕರರಿಗೂ ಇಲಾಖೆಗಳಲ್ಲಿ ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣವನ್ನು ನಿರ್ಮಿಸಬೇಕು’ ಎಂದು ಸಂಘಟನೆಯ ಪ್ರಮುಖರಾದ ಬಸವರಾಜ ಕಟ್ಟಿಮನಿ, ಮಹೇಶ ಚಲವಾದಿ, ರಾವುತ್ ತಳಕೇರಿ, ದೇವೇಂದ್ರ ಹಾದಿಮನಿ ಹಾಗೂ ಗುರು ಗುಡಿಮನಿ ಆಗ್ರಹಿಸಿದರು.
ಬಳಿಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಎಸ್. ಬಿ.ಕಟ್ಟಿಮನಿ, ಮುತ್ತಪ್ಪಾ ಚಮಲಾಪೂರ, ಬಸವರಾಜ ಕಟ್ಟಿಮನಿ, ಶಾಂತಪ್ಪ ಚಲವಾದಿ, ದೇವೇಂದ್ರ ಹಾದಿಮನಿ, ರಾವುತ್ ತಳಕೇರಿ, ಗುರು ಗುಡಿಮನಿ, ನಾಗೇಶ್ ಕಟ್ಟಿಮನಿ, ರವಿ ಕಟ್ಟಿಮನಿ, ಶಂಕರ ಕಟ್ಟಿಮನಿ, ಮಾಳಪ್ಪ ಮಾಲಳ್ಳಿ, ಜೈ ಭೀಮ್ ಮುತ್ತಗಿ, ಮಹೇಶ ಚಲವಾದಿ, ಮಹಾಂತೇಶ ಕಟ್ಟಿಮನಿ, ಒಕ್ಕೂಟದ ಪದಾಧಿಕಾರಿಗಳು ಇದ್ದರು.
ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ., ಎಸ್.ಟಿ. ನೌಕರರ ಸಮನ್ವಯ ಸಮಿತಿ ವತಿಯಿಂದಲೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಘಟಕದ ಅಧ್ಯಕ್ಷ ಮಲ್ಲಪ್ಪ ಚಲಾಕಾರ ಹಾಗೂ ಇತರ ಪದಾಧಿಕಾರಿಗಳಿದ್ದರು.
ಚಹಾದಂಗಡಿ ಸೇರಿದಂತೆ ಎಲ್ಲ ಬಗೆಯ ವ್ಯಾಪಾರಿ ಅಂಗಡಿಗಳು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.