ADVERTISEMENT

’ಜೀವ ಉಳಿಸಿ-ಜೀವನ ರಕ್ಷಿಸಿ’ ಹಕ್ಕೊತ್ತಾಯ

ಎಡ, ಪ್ರಜಾಸತ್ತಾತ್ಮಕ ಪಕ್ಷಗಳಿಂದ ರಾಜ್ಯವ್ಯಾಪಿ ಆನ್‌ಲೈನ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 14:55 IST
Last Updated 1 ಜೂನ್ 2021, 14:55 IST
ವಿಜಯಪುರ ಜಿಲ್ಲೆಯಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಕಾರ್ಯಕರ್ತರು ಮಂಗಳವಾರ ಆನ್‌ಲೈನ್ ಪ್ರತಿಭಟನೆ ನಡೆಸಿದರು
ವಿಜಯಪುರ ಜಿಲ್ಲೆಯಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಕಾರ್ಯಕರ್ತರು ಮಂಗಳವಾರ ಆನ್‌ಲೈನ್ ಪ್ರತಿಭಟನೆ ನಡೆಸಿದರು   

ವಿಜಯಪುರ: ‘ಜೀವ ಉಳಿಸಿ - ಜೀವನ ರಕ್ಷಿಸಿ; ಮೂರನೇ ಅಲೆಗೆ ಸನ್ನದ್ಧರಾಗಿ’ ಎಂಬ ಜನರ ಹಕ್ಕೊತ್ತಾಯಕ್ಕೆ ಆಗ್ರಹಿಸಿ ಸಿಪಿಐ, ಸಿಪಿಎಂ, ಎಸ್‌ಯುಸಿಐ(ಸಿ), ಸಿಪಿಐ(ಎಂಎಲ್‌) ಲಿಬೆರೇಷನ್‌, ಎಐಎಫ್‌ಬಿ, ಆರ್‌ಪಿಐ, ಸ್ವರಾಜ್‌ ಇಂಡಿಯಾ ಸೇರಿದಂತೆ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ಸಂಯುಕ್ತವಾಗಿ ಮಂಗಳವಾರ ಆನ್‌ಲೈನ್ ಪ್ರತಿಭಟನೆ ನಡೆಸಿದವು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸುತ್ತಿರುವ ಅವೈಜ್ಞಾನಿಕ ಮತ್ತು ನಿರ್ಲಕ್ಷವನ್ನು ಖಂಡಿಸಲಾಯಿತು.

ಈ ಪ್ರತಿಭಟನೆಯಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಯುವಕರಾದಿಯಾಗಿ ಸಾವಿರಾರು ಜನರುತಮ್ಮ ಮನೆಗಳ ಮುಂದೆ, ಹೊಲಗಳಲ್ಲಿ ಭಿತ್ತಿಪತ್ರ ಹಿಡಿದು ಘೋಷಣೆಗಳನ್ನು ಕೂಗಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕೊರೊನಾ ಎರಡನೇಯ ಅಲೆ ಬರುತ್ತದೆ ಎಂಬ ಮುನ್ಸೂಚನೆ ಇದ್ದರೂ ಸರ್ಕಾರ ನಿರ್ಲಕ್ಷ್ಯ ತೋರಿ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ಕೇಂದ್ರ ಸರ್ಕಾರ ಚುಣಾವಣೆಗಳಲ್ಲಿ ತೋರಿದ ಉತ್ಸಾಹ ಜನರನ್ನು ಬದುಕಿಸುವುದರಲ್ಲಿ ತೋರಿಸದೇ ಇರುವುದು ದುರಂತವೇ ಸರಿ ಎಂದು ಹೇಳಿದರು.

ಕೊರೊನಾ ಪೀಡಿತರು ಜೀವ ಉಳಿಸಿಕೊಳ್ಳಲು ವೈದ್ಯಕೀಯ ಸೌಲಭ್ಯಗಳಾದ ಬೆಡ್, ಆಕ್ಸಿಜನ್, ವೆಂಟಿಲೇಟರ್, ಔಷಧ ಸಿಗದೇ ಸಾವಿರ ಸಾವಿರ ಸಂಖ್ಯೆಯಲ್ಲಿ ಜನತೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಲಾಕ್‍ಡೌನ್‌ನಿಂದಾಗಿ ಲಕ್ಷಾಂತರ ಜನತೆ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಬೀದಿಬದಿ ವ್ಯಾಪಾರಸ್ಥರು ಹಾಗೂ ದಿನಗೂಲಿ ನೌಕರರು, ಕಾರ್ಮಿಕರು, ಅತಿಥಿ ಉಪನ್ಯಾಸಕರು, ಖಾಸಗಿ ಶಾಲಾ ಶಿಕ್ಷಕರು ಜೀವನೋಪಾಯಕ್ಕೆ ಹಣ ಇಲ್ಲದೆ, ಹೊಟ್ಟೆ ತುಂಬ ಊಟವಿಲ್ಲದೇ ಹಸಿವಿನಿಂದ ನರಳುವಂತಾಗಿದೆ. ಕರ್ತವ್ಯನಿರತ ಸಿಬ್ಬಂದಿ ಸೂಕ್ತ ರಕ್ಷಣೆಯಿಲ್ಲದೇ ಪ್ರಾಣ ಕಳೆದುಕೊಂಡಿದ್ದಾರೆ. ಜೀವರಕ್ಷಕ ಲಸಿಕೆ ಸಿಗದೇ ಜನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪರದಾಡುವಂತಾಗಿದೆ ಎಂದು ದೂರಿದರು.

ಮೂರನೇ ಅಲೆಯ ಮುನ್ಸೂಚನೆಯನ್ನು ವಿಜ್ಞಾನಿಗಳು ನೀಡುತ್ತಿದ್ದು, ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಅದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಸಮರೋಪಾದಿಯಲ್ಲಿ ಕೈಕೊಳ್ಳಬೇಕು, ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.

ಈ ಕೂಡಲೇ ದೇಶಾದ್ಯಂತ ಲಸಿಕೆಯನ್ನು ನೀಡಿ ಸೋಂಕು ಹರಡುವಿಕೆ ತಡೆಯಬೇಕು.ಯಾರೊಬ್ಬರೂ ಹಸಿವಿನಿಂದ ನರಳದಂತೆ ಆಹಾರ ಧಾನ್ಯಗಳ ಜೊತೆಗೆ ಆರ್ಥಿಕ ಪ್ಯಾಕೇಜ್‍ ನೀಡಬೇಕು ಎಂದು ಒತ್ತಾಯಿಸಿದರು.

ಆನ್‌ಲೈನ್‌ ಪ್ರತಿಭಟನೆಯಲ್ಲಿ ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರ, ಸಿಪಿಐನ ಮುಖಂಡ ಪ್ರಕಾಶ ಹಿಟ್ನಳ್ಳಿ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಎಸ್‍ಯುಸಿಐ(ಸಿ)ನ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನ್‍ರೆಡ್ಡಿ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಸುರೇಖಾ ರಜಪೂತ, ಎಸ್‍ಯುಸಿಐ(ಸಿ)ನ ಜಿಲ್ಲಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಎಚ್.ಟಿ. ಸಿದ್ದಲಿಂಗ ಬಾಗೇವಾಡಿ, ಎಚ್.ಟಿ.ಭರತ್‍ಕುಮಾರ, ಬಾಳು ಜೇವೂರ, ಡಿವೈಎಫ್‍ಐ ರಾಜ್ಯ ಸಮಿತಿ ಸದಸ್ಯ ಈರಣ್ಣ ಬೆಳ್ಳುಂಡಗಿ, ಸರ್ಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಹುಲಿಗೆಪ್ಪ ಚಲವಾದಿ, ರೈತ ಸಂಘದ ಸಿದ್ದರಾಮ ಬಂಗಾರಿ, ಮಲ್ಲಪ್ಪ ಹೂಗಾರ, ಎಸ್‍ಯುಸಿಐ(ಸಿ)ನ ಸುನೀಲ ಸಿದ್ರಾಮಶೆಟ್ಟಿ, ಶಿವಬಾಳಮ್ಮ ಕೊಂಡಗೂಳಿ, ಕಮಲಾ ತೇಲಿ, ಕಾಶಿಬಾಯಿ ಜನಗೊಂಡ, ಶೀಲಾ ಮ್ಯಾಗೇರಿ, ಗೀತಾ ಎಚ್. ಕಾಶಿಬಾಯಿ ತಳವಾರ, ಕಾವೇರಿ, ಸುಮಾ ಹಡಗಲಿ, ಶಿವರಂಜನಿ, ಕವಿತಾ, ನಜೀರ ಪಟೇಲ್, ಸಾದೀಕ್ ಪಟೇಲ್, ಮೌನೇಶ ಬಡಿಗೇರ, ರೈತರಾದ ರಮೇಶ ಲವಗಿ, ತಿಪರಾಯ ಹತ್ತರಕಿ, ಮಹಾನಿಂಗ ಲವಗಿ, ಮಹಾದೇವಿ ಲವಗಿ, ಗಂಗೂಬಾಯಿ ಪಾರೆ, ಮಂಜುನಾಥ ಪಾರೆ, ಪ್ರಕಾಶ ಕಿಲಾರೆ, ಮಲ್ಲಪ್ಪ ಹರಗೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.