ADVERTISEMENT

ಅಕ್ರಮ ಮರಳು, ಕಲ್ಲು ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ: ಡಿಸಿ ಪಿ.ಸುನೀಲ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 13:57 IST
Last Updated 18 ಆಗಸ್ಟ್ 2021, 13:57 IST
ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿ, ಜಿಲ್ಲಾ ಕ್ರಷರ್ ಸಮಿತಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಮಾತನಾಡಿದರು. ಎಸ್‌.ಪಿ.ಆನಂದಕುಮಾರ್‌ ಇದ್ದಾರೆ
ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿ, ಜಿಲ್ಲಾ ಕ್ರಷರ್ ಸಮಿತಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಮಾತನಾಡಿದರು. ಎಸ್‌.ಪಿ.ಆನಂದಕುಮಾರ್‌ ಇದ್ದಾರೆ   

ವಿಜಯಪುರ: ಅನಧಿಕೃತ ಮರಳು ಮತ್ತು ಕಲ್ಲು ಗಣಿಗಾರಿಕೆ ಹಾಗೂ ಅನಧಿಕೃತವಾಗಿ ಸ್ಪೋಟಕಗಳ ಬಳಕೆ ಮತ್ತು ಸಾಗಾಣಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಟಾಸ್ಕ್‌ ಪೋರ್ಸ್‌ (ಗಣಿ) ಸಮಿತಿ, ಜಿಲ್ಲಾ ಕ್ರಷರ್ ಸಮಿತಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 87 ಕ್ರಷರ್ ಘಟಕಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಾ ನಿಯಮಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಿ 15 ದಿನಗಳ ಒಳೊಳಗಾಗಿ ವರದಿ ನೀಡಲು ಪರಿಸರ ಅಧಿಕಾರಿಗಳಿಗೆ ಸೂಚಿಸಿದರು.

ತಿಡಗುಂದಿ ಶಾಖಾ ಕಾಲುವೆಯ ಐನಾಪೂರ ಗ್ರಾಮದ ವ್ಯಾಪ್ತಿಯಲ್ಲಿನ ಕಲ್ಲು ಕ್ವಾರಿಗಳಲ್ಲಿ ಯಾರಾದರು ಓಪನ್ ಬ್ಲಾಸ್ಟಿಂಗ್ ಮಾಡುತ್ತಿರುವುದು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಐನಾಪುರ ಗ್ರಾಮದ ಸರ್ವೆ ನಂ 157 ರಲ್ಲಿ ಅನಧಿಕೃತ ಗಣಿಗಾರಿಕೆ ನಡೆಯುತ್ತಿರುವುದಾಗಿ ವಿಜಯಪುರ ಉಪವಿಭಾಗಾಧಿಕಾರಿ ಗಮನಕ್ಕೆ ತಂದರು. ಅನಧಿಕೃತ ಗಣಿಗಾರಿಕೆ ನಡೆಸುತ್ತಿರುವವರ ಮೇಲೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ತಿಳಿಸಿದರು.

ಹಳ್ಳ, ತೊರೆಗಳಲ್ಲಿ ಲಭ್ಯವಿರುವ ಮಣ್ಣು ಮಿಶ್ರಿತ ಮರಳು ವಿಲೇವಾರಿ ಬಗ್ಗೆ ಮೇಲಾಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೂಚಿಸಲಾಯಿತು.

ಜಿಲ್ಲೆಯ ನದಿ ಪಾತ್ರದಲ್ಲಿರುವ ಮರಳು ನಿಕ್ಷೇಪಗಳನ್ನು ಸೆಪ್ಟೆಂಬರ್‌ನಿಂದ ಗುರುತಿಸಿ, ಹಟ್ಟಿ ಗೋಲ್ಡ್ ಮೈನ್ಸ್‌ಗೆ ಹಸ್ತಾಂತರಿಸಲು ಕ್ರಮವಹಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಬೇರೆ ಜಿಲ್ಲೆಗಳಿಂದ ವಿಜಯಪುರ ಜಿಲ್ಲೆಗೆ ಬರುವ ಮರಳು ಸಾಗಾಣಿಕೆ ಲಾರಿಗಳ ಮೇಲೆ ನಿಗಾವಹಿಸಿ ಕ್ರಮಕೈಗೊಳ್ಳಬೇಕು. ತಾಳಿಕೋಟೆ ತಾಲ್ಲೂಕಿನ ಬಿ-ಸಾಲವಾಡಗಿ ಹಾಗೂ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಗ್ರಾಮದಲ್ಲಿ ಚೆಕ್ ಪೋಸ್ಟ್ ನಿರ್ಮಿಸಲು ಸೂಚಿಸಿದರು.

ಕಲ್ಲು ಗಣಿಗಾರಿಕೆಯಲ್ಲಿ ಉಪಯೋಗಿಸುವ ಸ್ಫೋಟಕಗಳನ್ನು ಅಧಿಕೃತ ಪರವಾನಗಿದಾರರಿಂದ ಹಾಗೂ ಅಧಿಕೃತ ಸ್ಫೋಟಕ ಸಂಗ್ರಹಗಾರದಿಂದ ಅಧಿಕೃತ ವಾಹನಗಳಲ್ಲಿ ಸಾಗಾಣಿಕೆ ಮತ್ತು ಗಣಿಗಾರಿಕೆ ಸ್ಥಳಗಳಲ್ಲಿ ಅಧಿಕೃತ ವ್ಯಕ್ತಿಗಳಿಂದ ಸೂಕ್ತ ಮುನ್ನೆಚರಿಕೆ ಕ್ರಮಗಳನ್ನು ಪಾಲಿಸಿ ಸ್ಫೋಟಕಗಳನ್ನು ಉಪಯೋಗಿಸುತ್ತಿರುವ ಬಗ್ಗೆ ಪರಿಶೀಲಿಸಿ, ಒಂದು ತಿಂಗಳಲ್ಲಿ ವರದಿ ನೀಡಲು ತಿಳಿಸಿದರು.

ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ತೀವ್ರ ನಿಗಾ ಇಡಬೇಕು. ಯಾದಗಿರಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ವಿಜಯಪುರಕ್ಕೆ ಅನಧಿಕೃತವಾಗಿ ಬರುತ್ತಿರುವ ಮರಳಿನ ಮೇಲೆ ತೀವ್ರ ನಿಗಾ ಇಡಲು ತಕ್ಷಣ ತಾಳಿಕೋಟಿ ತಾಲ್ಲೂಕಿನ ಬಿ ಸಾಲವಾಡಗಿ ಗ್ರಾಮದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ ಸಿಬ್ಬಂದಿ, ಸಿಸಿ ಕ್ಯಾಮೆರಾ ಹಾಗೂ ನಿರಂತರ ವಿದ್ಯುತ್ ಸರಬರಾಜು ಒಳಗೊಂಡ ಚೆಕ್‍ಪೋಸ್ಟ್‌ ಅನ್ನು ತಕ್ಷಣ ಸ್ಥಾಪಿಸುವಂತೆ ಅವರು ಸೂಚನೆ ನೀಡಿದರು.

ತಾಲ್ಲೂಕುವಾರು ಗುಣಮಟ್ಟದ ಮರಳು ಸಂಗ್ರಹ ಬ್ಲಾಕ್‍ಗಳನ್ನು ಗುರುತಿಸಿ ವರದಿ ನೀಡಬೇಕು. ಹಳ್ಳ, ಕೆರೆಗಳ ವ್ಯಾಪ್ತಿಯಲ್ಲಿ ಯಾರ್ಡ್‌ಗಳಲ್ಲಿ ಮರಳು ಸಂಗ್ರಹಿಸಿ, ಆಯಾ ಗ್ರಾಮ ಪಂಚಾಯ್ತಿ ಮೂಲಕ ವಿತರಿಸಿಬೇಕು ಎಂದರು.

ಕಲ್ಲು ಗಣಿಗಾರಿಕೆಗಳ ಮೇಲೆ ತೀವ್ರ ನಿಗಾ ಮತ್ತು ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಬೇಕು. ಸ್ಪೋಟಕಗಳ ಪರಿಶೀಲನೆಗೆ ಅನಿರೀಕ್ಷಿತವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದಲೂ ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ ಕುಮಾರ್, ತಿಂಗಳಲ್ಲಿ 82 ಗಣಿಗಾರಿಕೆ ಸ್ಥಳಗಳಿಗೆ ಸಂಬಂಧಪಟ್ಟ ತಂಡ ಭೇಟಿ ನೀಡಿ ವರದಿ ನೀಡಬೇಕು ಎಂದು ಸೂಚಿಸಿದರು.

ಕಲ್ಲು ಗಣಿಗಾರಿಕೆಗೆ ಬಳಸುವ ಸ್ಫೋಟಕ ಸಾಮಗ್ರಿ, ಸಂಗ್ರಹ, ಸ್ಫೋಟಕಗಳ ಅಧಿಕೃತ ಸಂಖ್ಯೆ, ಅಧಿಕೃತ ವಾಹನದ ಮೂಲಕ ಸಾಗಾಣಿಕೆ, ಅಧಿಕೃತ ವ್ಯಕ್ತಿಯಿಂದ ಬಳಕೆ ಕುರಿತು ನಿಯಮಾವಳಿ ಪಾಲನೆಯಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಬೇಕು ಎಂದರು.

ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ, ಬಲರಾಮ ಲಮಾಣಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪುಷ್ಪಾಸಭೆಯಲ್ಲಿ ಉಪಸ್ಥಿತರಿದ್ದರು.

***

ಅಕ್ರಮವಾಗಿ ಮತ್ತು ಅನಧಿಕೃತವಾಗಿ ಕೈಗೊಳ್ಳುವ ಕಲ್ಲು ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು

–ಪಿ.ಸುನೀಲ್‌ ಕುಮಾರ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.