ADVERTISEMENT

ಇಂದಿನಿಂದ ನಿರಂತರ ಧರಣಿ: ಶಾಸಕ ಯಶವಂತರಾಯಗೌಡ ಪಾಟೀಲ

ಕೇಂದ್ರ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಕಾಯ್ದೆಗಳಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 19:30 IST
Last Updated 1 ಅಕ್ಟೋಬರ್ 2020, 19:30 IST
ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   

ಇಂಡಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಎಪಿಎಂಸಿ, ರೈತ ವಿರೋಧಿ ಭೂ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳನ್ನು ವಿರೋಧಿಸಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಅಕ್ಟೋಬರ್ 2ರಿಂದ ಅಕ್ಟೋಬರ್ 31ರ ವರೆಗೆ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ್ ಅರಸ್ ಅವರು ಜಾರಿಗೆ ತಂದಿದ್ದ ಭೂಸುಧಾರಣೆ ಕಾಯ್ದೆಗೆ ತದ್ವಿರುದ್ದವಾಗಿ ಇಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭೂ ಸುಧಾರಣೆ, ಎಪಿಎಂಸಿ ಮತ್ತು ಕಾರ್ಮಿಕ ಕಾಯ್ದೆಗಳನ್ನು ಜಾರಿಗೆ ತಂದಿವೆ. ಈ ಕಾಯ್ದೆಗಳು ಸಂಪೂರ್ಣ ರೈತ ವಿರೋಧಿಯಾಗಿದ್ದು, ಇವುಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ಮುಂದುವರೆಯುತ್ತದೆ’ ಎಂದರು.

ಈ ಕಾಯ್ದೆಗಳನ್ನು ಕೇವಲ ಕಾಂಗ್ರೆಸ್ ಪಕ್ಷವಷ್ಟೇ ಅಲ್ಲ; ರಾಜ್ಯದ ಮತ್ತು ದೇಶದ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ವಿರೋಧಿಸುತ್ತಿವೆ ಎಂದ ಅವರು, ‘ಅಕ್ಟೋಬರ್ 12 ರಂದು ಇಂಡಿ ತಾಲ್ಲೂಕಿನ ಝಳಕಿ ಗ್ರಾಮದ ಬಳಿಯಿರುವ ಹೆದ್ದಾರಿ ಬಂದ್ ಮಾಡಲಾಗುವುದು ಮತ್ತು ಅಕ್ಟೋಬರ್ 19ರಂದು ರೇಲ್ ರೋಖೊ ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಸತ್ಯಾಗ್ರಹಗಳಲ್ಲಿ ರೈತರು, ಕಾರ್ಮಿಕ ಸಂಘಟನೆಗಳು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ನಮ್ಮದು ಕೃಷಿ ಪ್ರಧಾನ ಬದುಕಾಗಿದ್ದು, ಈ ಬದುಕಿಗೆ ತದ್ವಿರುದ್ದವಾದ ಕಾಯ್ದೆಗಳನ್ನು ಎಂದಿಗೂ ಸಹಿಸಲಾಗುವುದಿಲ್ಲ.ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಜಾರಿಯಿಟ್ಟಿರುವ ನಿಯಮಾವಳಿಗಳ ಪಾಲನೆಯೊಂದಿಗೆ ಸತ್ಯಾಗ್ರಹ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಸಂಬಾಜಿರಾವ ಮಿಸಾಳೆ, ಧರ್ಮರಾಜ ವಾಲಿಕಾರ, ಕಾಂಗ್ರೆಸ್ ಅಧ್ಯಕ್ಷ ಇಲಿಯಾಸ್ ಬೋರಾಮಣಿ, ಕಲ್ಲನಗೌಡ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.