
ಮುದ್ದೇಬಿಹಾಳ: ‘ರೈತರು ಬೆಳೆದಿರುವ ಕಬ್ಬಿಗೆ ನ್ಯಾಯಯುತ ಬೆಲೆ ಕೇಳಿ ಹೋರಾಟ ಮಾಡುತ್ತಿದ್ದು, ರೈತರ ತಾಳ್ಮೆಯ ಕಟ್ಟೆಯೊಡೆವುದಕ್ಕೆ ಸರ್ಕಾರವೇ ಕಾರಣ. ಕಬ್ಬಿನ ದರವನ್ನು ಕಾರ್ಖಾನೆ ಆರಂಭವಾಗುವ ಮುನ್ನವೇ ರಾಜ್ಯದಲ್ಲಿ ಘೋಷಣೆ ಮಾಡಬೇಕಿತ್ತು. ಆದರೆ ಸರ್ಕಾರ ಈ ವಿಷಯದಲ್ಲಿ ಎಡವಿದೆ’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಆರೋಪಿಸಿದರು.
ತಾಲ್ಲೂಕು ತಂಗಡಗಿ ಬಳಿ ಇರುವ ಅಮರಗೋಳ ಕ್ರಾಸ್ ಹತ್ತಿರ ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಿಸಬೇಕೆಂದು ಆಗ್ರಹಿಸಿ ರೈತರು ನಾಲ್ಕು ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಶುಕ್ರವಾರ ಪಕ್ಷದಿಂದ ಬೆಂಬಲ ಸೂಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ರೈತರ ಪ್ರತಿಭಟನೆ ನಡೆದು ವಾರದ ಬಳಿಕ ಸಚಿವ ಎಚ್.ಕೆ. ಪಾಟೀಲ,ಎಂಟನೇ ದಿನ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿದ್ದಾರೆ’ ಎಂದರು.
‘ಬಾಲಾಜಿ ಸಕ್ಕರೆ ಕಾರ್ಖಾನೆ ವಿರುದ್ದ ನಮ್ಮ ಹೋರಾಟವಲ್ಲ. ಸರ್ಕಾರ ರೈತರ ಬೇಡಿಕೆ ಈಡೇರಿಸಲು ಹಿಂದೇಟು ಹಾಕುತ್ತಿರುವ ಕಾರಣ ಹೋರಾಟ ನಡೆದಿದೆ. ಕಾರ್ಖಾನೆಯನ್ನು ನಾವು ಬಂದ್ ಮಾಡಿಸಿಲ್ಲ. ರೈತರು, ರೈತ ಸಂಘಟನೆಗಳು ಬಂದ್ ಮಾಡಿಸಿದ್ದು, ಸರ್ಕಾರ ಘೋಷಣೆ ಮಾಡುವ ದರದಲ್ಲಿ ಒಂದು ರೂಪಾಯಿ ಕಡಿಮೆ ಆಗದಂತೆ ಬಾಲಾಜಿ ಸಕ್ಕರೆ ಕಾರ್ಖಾನೆಯವರು ರೈತರಿಗೆ ಹಣ ಪಾವತಿಸಬೇಕು’ ಎಂದರು.
ಶಾಸಕರಿಗೆ ನಡಹಳ್ಳಿ ಸವಾಲು: ‘ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ರಾಜಕೀಯ ಬೇಡ. ನಾವು ನೀವು ಕೂಡಿಯೇ ರೈತರಿಗೆ ದೊರೆಯಬೇಕಾದ ನ್ಯಾಯಬದ್ದ ಬೆಲೆ ಕೊಡಿಸಲು ಅವರಿಗೆ ಬೆಂಬಲಿಸೋಣ. ನಾನು ಹೋರಾಟದ ವೇದಿಕೆಗೆ ಬರುವುದಕ್ಕೆ ಸಿದ್ಧನಿದ್ದೇನೆ. ಶಾಸಕರು ಬರಲು ಸಿದ್ಧರೇ ? ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಶಾಸಕ ನಾಡಗೌಡರಿಗೆ ಬಹಿರಂಗ ಸವಾಲು ಹಾಕಿದರು.
ಪಡೇಕನೂರದ ಮುಖಂಡ ಸೋಮನಗೌಡ ಕೋಳೂರು, ಮುಖಂಡ ಎಂ.ಬಿ.ಅಂಗಡಿ, ಹೋರಾಟಗಾರ ಶಿವು ಕನ್ನೊಳ್ಳಿ, ಶಿವನಗೌಡ ಬಿರಾದಾರ ಜಲಪೂರ ಮಾತನಾಡಿದರು. ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಜಿಪಂ ಮಾಜಿ ಸದಸ್ಯ ಗಂಗಾಧರ ನಾಡಗೌಡ, ಕೆಂಚಪ್ಪ ಬಿರಾದಾರ, ಮಲಕೇಂದ್ರಗೌಡ ಪಾಟೀಲ, ಸಂಗಣ್ಣ ಬಾಗೇವಾಡಿ, ಗುರುಸಂಗಪ್ಪ ಹಂಡರಗಲ್, ಬಾಲಪ್ಪಗೌಡ ಲಿಂಗದಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಅಶೋಕ ರಾಠೋಡ, ಶಿವಾನಂದ ಮಂಕಣಿ, ಶ್ರೀಶೈಲ ದೊಡಮನಿ, ಲಕ್ಷ್ಮಣ ಬಿಜ್ಜೂರ ಇದ್ದರು. ಅಮರಗೋಳ-ತಂಗಡಗಿ ಮಾರ್ಗದಲ್ಲಿ ಸಂಚರಿಸುವ ರಸ್ತೆಯನ್ನು ಕೆಲಕಾಲ ಬಂದ್ ಮಾಡಿದ್ದರಿಂದ ಗ್ರಾಮಸ್ಥರಿಗೆ, ವಾಹನಗಳ ಓಡಾಟಕ್ಕೆ ಅಡಚಣೆಯುಂಟಾಗಿತ್ತು.
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳ ಕ್ರಾಸ್‌ನಲ್ಲಿ ರಸ್ತೆ ಬಂದ್ ಮಾಡಿದ ರೈತರು ಹೋರಾಟಗಾರರಜನಪ್ರತಿನಿಧಿಗಳ ಭಾಷಣ ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.