ADVERTISEMENT

ಸಿಂದಗಿ: ಕಬ್ಬು ಬೆಳೆಗಾರರ ಹೋರಾಟಕ್ಕೆ ಶ್ರೀಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 5:09 IST
Last Updated 8 ನವೆಂಬರ್ 2025, 5:09 IST
ಪ್ರತಿ ಟನ್ ಕಬ್ಬಿಗೆ 3,500 ದರ ನಿಗದಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಶುಕ್ರವಾರ ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ಕಬ್ಬು ಬೆಳೆಗಾರರ ಪ್ರತಿಭಟನಾ ಸಭೆಯಲ್ಲಿ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ಪ್ರತಿ ಟನ್ ಕಬ್ಬಿಗೆ 3,500 ದರ ನಿಗದಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಶುಕ್ರವಾರ ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ಕಬ್ಬು ಬೆಳೆಗಾರರ ಪ್ರತಿಭಟನಾ ಸಭೆಯಲ್ಲಿ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ಸಿಂದಗಿ: ಪ್ರತಿ ಟನ್ ಕಬ್ಬಿಗೆ ₹3,500 ದರ ಘೋಷಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು.

ಸಾರಂಗಮಠ-ಗಚ್ಚಿನಮಠ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲಿಸಿ, ಹೋರಾಟ ನ್ಯಾಯಸಮ್ಮತವಾಗಿದೆ. ಸರ್ಕಾರ ಕೂಡಲೇ ಪ್ರತಿ ಟನ್ ಕಬ್ಬಿಗೆ ₹3,500 ದರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಾದ್ಯಂತ ಕಬ್ಬು ಬೆಳೆಗಾರರು ಕಬ್ಬಿನ ಬೆಲೆ ಘೋಷಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಸಕ್ಕರೆ ಕಾರ್ಖಾನೆಗಳು ಪ್ರತಿ ವರ್ಷವೂ ತಾವು ಹೆಚ್ಚುವರಿ ಬೆಲೆ ಕೊಡುವುದಾಗಿ ಹೇಳಿ ಕಬ್ಬು ಕಟಾವು ಮಾಡಿಕೊಂಡು ಸಕ್ಕರೆ ಮತ್ತು ಪರ್ಯಾಯ ಉತ್ಪನ್ನಗಳಾದ ಮೋಲ್ಯಾಸಿಸ್, ಎಥಿನಾಲ್, ವಿದ್ಯುತ್ ಮಾರಾಟ ಮಾಡಿಕೊಂಡು ಪ್ರತಿ ಟನ್ ಕಬ್ಬಿಗೆ ₹14 ಸಾವಿರ ಲಾಭ  ಪಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನಮ್ಮ ಹೋರಾಟಕ್ಕೆ ಸಕಾರಾತ್ಮಕ ಘೋಷಣೆಯಾಗದಿದ್ದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು. ತಹಶೀಲ್ದಾರ್‌ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಗೌಡ ಪಾಟೀಲ, ರಾಜ್ಯ ಘಟಕದ ಗೌರವಾಧ್ಯಕ್ಷ ದಾನಪ್ಪಗೌಡ ಚನಗೊಂಡ, ಮಲ್ಲಣ್ಣ ಮನಗೂಳಿ, ಅಶೋಕ ಅಲ್ಲಾಪೂರ, ದಸ್ತಗೀರ ಮುಲ್ಲಾ, ಬಸವರಾಜ ಧರ್ಮಗೊಂಡ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಮಲ್ಲೂ ಸಾವಳಸಂಗ ಮಾತನಾಡಿದರು.

ಶಂಕರಗೌಡ ಬಿರಾದಾರ, ಹಣಮಂತ ಬಿಜಾಪುರ, ಬಾಪುಗೌಡ ಬಗಲಿ, ಬಸವರಾಜ ಪೀರಶೆಟ್ಟಿ, ಬಸವರಾಜ ಐರೋಡಗಿ, ಕಾಸಪ್ಪ ಪಡದಳ್ಳಿ, ಶಿವಲಿಂಗಪ್ಪ ಡಂಬಳ, ರಾಜಶೇಖರ ನಗನೂರ, ಟೋಪು ರಾಠೋಡ, ಬಾಬುಗೌಡ ಮಾಲಿಪಾಟೀಲ, ದತ್ತು ಸುರಗಿಹಳ್ಳಿ, ಸಂಗಣ್ಣಗೌಡ ಸುರಗಿಹಳ್ಳಿ, ಗುರುಬಸಪ್ಪಗೌಡ ಬಿರಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.