
ಮುದ್ದೇಬಿಹಾಳ: ಕಬ್ಬಿನ ರಿಕವರಿ ಆಧಾರದ ಮೇಲೆ ಟನ್ ಕಬ್ಬಿಗೆ ₹3,264 ನೀಡುವುದಾಗಿ ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಶನಿವಾರ ಅಧಿಕೃತವಾಗಿ ಘೋಷಿಸಿದ್ದು, ಕಳೆದ ಐದು ದಿನಗಳಿಂದ ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ಕರ್ನಾಟಕ ರೈತ ಸಂಘ ಹಾಗೂ ರೈತಪರ ಸಂಘಟನೆಯ ಮುಖಂಡರು ನಡೆಸುತ್ತಿದ್ದ ಹೋರಾಟ ಶನಿವಾರ ಅಂತ್ಯಗೊಂಡಿದೆ.
ಹೋರಾಟಗಾರರು ರಾಜ್ಯ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ₹3,300 ನೀಡುವಂತೆ ಒತ್ತಾಯಿಸಿ ಲಿಖಿತ ಆದೇಶ ನೀಡುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದರು.
ವಿಷಯ ತಿಳಿದ ಜಿಲ್ಲಾಡಳಿತ ತಕ್ಷಣ ಸರ್ಕಾರದ ಆದೇಶವನ್ನು ಕಾರ್ಖಾನೆಯವರ ಗಮನಕ್ಕೆ ತಂದು ನ್ಯಾಯುತವಾಗಿ ಕೊಡಬೇಕಾದ ಬೆಲೆಯನ್ನು ನೀಡುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯವರು ತಕ್ಷಣ ಸರ್ಕಾರದ ನಿರ್ದೇಶನದಂತೆ ನೀಡಬೇಕಾದ ಕಬ್ಬಿನ ದರ ಪ್ರಕಟಿಸಿದರು.
ಹೋರಾಟಗಾರ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಬಾಲಾಜಿ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಅನ್ಯಾಯವಾಗಬಾರದು. ನಮ್ಮ ಭಾಗದ ಕಬ್ಬು 11.50 ರಿಕವರಿ ಇದೆ. ಆದರೆ ಇಲ್ಲಿ ಕಡಿಮೆ ತೋರಿಸುವುದೇತಕ್ಕೆ ಎಂಬುದನ್ನು ಪ್ರಶ್ನಿಸಿದರು. ಇದಲ್ಲದೇ ರೈತರಿಗೆ ಕೊಡುವ ₹100 ಗೊಬ್ಬರವನ್ನು ಸ್ಥಗಿತಗೊಳಿಸಬೇಕು. ಸರ್ಕಾರದಿಂದ ಪ್ರತ್ಯೇಕವಾಗಿ ವ್ಹೇ ಬ್ರಿಡ್ಜ್ ಹಾಕಬೇಕು ಎಂದು ಆಗ್ರಹಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಮಾತನಾಡಿ, ಎಫ್.ಆರ್.ಪಿ ದರದಂತೆ ರೈತರ ಕಬ್ಬಿಗೆ ಬೆಲೆ ನೀಡಲಾಗುತ್ತಿದೆ. ಮುದ್ದೇಬಿಹಾಳ ತಾಲ್ಲೂಕಿನ ಬಾಲಾಜಿ ಸಕ್ಕರೆ ಕಾರ್ಖಾನೆಯ ರಿಕವರಿ ₹10.89 ಇದ್ದು, ಸಾಗಾಣಿಕೆ, ಕಟಾವು ವೆಚ್ಚವನ್ನು ಒಳಗೊಂಡಂತೆ ₹3,771 ನೀಡಲಾಗುತ್ತಿದೆ. ಕಬ್ಬು ಕಟಾವು ಮತ್ತು ಸಾಗಾಣಿಕ ವೆಚ್ಚ ಹೊರತುಪಡಿಸಿ ₹3,164 ಸರ್ಕಾರ ಹಾಗೂ ಕಾರ್ಖಾನೆ ಸೇರಿ ₹100 ಒಟ್ಟು ₹3,264 ಟನ್ ಕಬ್ಬಿಗೆ ನೀಡಲಾಗುವುದು ಎಂದು ತಿಳಿಸಿದರು.
ವಿಜಯೋತ್ಸವ: ಕಬ್ಬಿಗೆ ಹೆಚ್ಚುವರಿಯಾಗಿ ಬೆಂಬಲ ಬೆಲೆ ದೊರೆತ ಹಿನ್ನೆಲೆಯಲ್ಲಿ ರೈತರು ಪಟಾಕಿ ಸಿಡಿಸಿ ಗುಲಾಲ್ ಎರಚಿ ವಿಜಯೋತ್ಸವ ಆಚರಿಸಿದರು.
ಸರ್ಕಾರದಿಂದ ಬಂದಿದ್ದ ಆದೇಶ ಪ್ರತಿ ಮತ್ತು ಕಾರ್ಖಾನೆಯಿಂದ ತಂದಿದ್ದ ಲಿಖಿತ ಆದೇಶ ಪ್ರತಿಯನ್ನು ಹೋರಾಟಗಾರರಿಗೆ ಅಧಿಕಾರಿಗಳು ಹಸ್ತಾಂತರಿಸಿ ಹೋರಾಟ ಅಂತ್ಯಗೊಳಿಸಲಾಯಿತು. ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ತಹಶೀಲ್ದಾರ್ ಕೀರ್ತಿ ಚಾಲಕ್, ಕಂದಾಯ ನಿರೀಕ್ಷಕ ಪವನ್ ತಳವಾರ, ಪಿಎಸ್‌ಐ ಸಂಜಯ ತಿಪರೆಡ್ಡಿ, ರೈತ ಸಂಘಟನೆ ತಾಳಿಕೋಟಿ ತಾಲ್ಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಜಿಲ್ಲಾ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಅಕ್ಷಯ ನಾಡಗೌಡ, ಶಿವು ಕನ್ನೊಳ್ಳಿ, ಶಿವನಗೌಡ ಬಿರಾದಾರ, ಹರೀಶ ಲಾಯದಗುಂದಿ, ಗುರುಲಿಂಗಪ್ಪ ಹಂಡರಗಲ್, ಎಂ.ಬಿ.ಅಂಗಡಿ, ಶಶಿಧರ ಬಂಗಾರಿ, ಜಗದೀಶ ಪಂಪಣ್ಣವರ, ಅಶೋಕ ರಾಠೋಡ, ಅನಿಲ ರಾಠೋಡ, ಸಂಜೀವ ಬಾಗೇವಾಡಿ, ಸಂಗಣ್ಣ ಬೀಸಲದಿನ್ನಿ, ಅಯ್ಯಪ್ಪ ಬಿದರಕುಂದಿ ಇದ್ದರು.
ರೈತರ ಹೋರಾಟ ಗಮನದಲ್ಲಿರಿಸಿಕೊಂಡು ಕಾರ್ಖಾನೆ ಆಡಳಿತ ಮಂಡಳಿ ಸರ್ಕಾರ ಸೂಚಿಸಿದ ದರವನ್ನು ರಿಕವರಿ ಆಧಾರದ ಮೇಲೆ ಕೊಡಲು ಸಿದ್ದವಿದೆ. ರೈತರ ಬೇಡಿಕೆಯಂತೆ ಕಾರ್ಖಾನೆಯಿಂದ ಗೊಬ್ಬರ ಕೊಡುವುದಿಲ್ಲಜಿ.ಎಂ.ಬಿರಾದಾರ ಡಿಜಿಎಂ ಯರಗಲ್-ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.