
ತಾಳಿಕೋಟೆ: ತಾಲ್ಲೂಕಿನ ಗಡಿ ಸೋಮನಾಳದಲ್ಲಿ ಮಹಿಳೆಯರ ಬಯಲು ಶೌಚಾಲಯ ಸ್ಥಳ ತೆರವುಗೊಳಿಸಿದ ವಿವಾದದ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿನಯಾ ಹೂಗಾರ ಅವರು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.
ಕೆಲವು ಮಹಿಳೆಯರು ಗ್ರಾಮದಲ್ಲಿರುವ ಬಯಲು ಶೌಚಾಲಯದ ಏಕೈಕ ಸ್ಥಳವನ್ನು ಏಕಾಏಕಿ ತೆರವುಗೊಳಿಸಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ತಹಶೀಲ್ದಾರ್‌ಗೆ ತಿಳಿಸಿ ಯಾವ ಕಾರಣಕ್ಕೂ ಶೌಚಾಲಯದ ಸ್ಥಳವನ್ನು ತೆರವುಗೊಳಿಸಬಾರದೆಂದು ಆಗ್ರಹಿಸಿದರು.
ಮುಖಂಡ ಮಡುಸೌಕಾರ ಬಿರಾದಾರ ಮಾತನಾಡಿ, ಸರ್ಕಾರದ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲು ಎಲ್ಲರೂ ಸಹಕರಿಸಬೇಕು. ಆಸ್ಪತ್ರೆಗೆ ಅನುದಾನ ಪಡೆಯಲು ಈ ಜಾಗದ ಉತಾರೆಯನ್ನೇ ನೀಡಲಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ್ ವಿನಯಾ ಹೂಗಾರ ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಪಿಡಿಒ ಈರಣ್ಣ ಬಡಿಗೇರ ಅವರೊಂದಿಗೆ ಚರ್ಚಿಸಿದರು.
ಪಿಡಿಒ ಬಡಿಗೇರ ಮಾತನಾಡಿ, ಬಯಲು ಶೌಚಾಲಯಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಪಂಚಾಯಿತಿಯಿಂದ ಹಣ ನೀಡಲಾಗಿದೆ. ಆದರೂ ಶೌಚಾಲಯ ನಿರ್ಮಿಸಿಕೊಂಡಿಲ್ಲ. ಈಗ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಿರುವ ಸ್ಥಳದ ಹತ್ತಿರ ಜಾಗದ ಅವಕಾಶವಿದ್ದು ಅಲ್ಲಿ ಸರ್ಕಾರದ ಅನುದಾನದಿಂದ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.
ತಹಶೀಲ್ದಾರ್ ಡಾ. ಹೂಗಾರ ಅವರು ಮಾತನಾಡಿ, ಬಯಲು ಶೌಚಾಲಯಕ್ಕೆ ಅವಕಾಶ ನೀಡಲು ಬರುವುದಿಲ್ಲ. ಇದು ಆರೋಗ್ಯದ ದೃಷ್ಟಿಯಿಂದಲೂ ಸರಿಯಲ್ಲ. ಎಲ್ಲರೂ ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ನಿಮ್ಮ ಗ್ರಾಮಕ್ಕೆ ಆಸ್ಪತ್ರೆ ಮಂಜೂರಾಗಿದೆ. ನಿಮಗೆಲ್ಲರಿಗೂ ಇದರ ಅಗತ್ಯವಿದೆ. ಅಲ್ಲಿ ಸಮೀಪದಲ್ಲಿಯೇ ಸ್ಥಳದ ಅವಕಾಶವಿದ್ದರೆ ಸರ್ಕಾರದ ಅನುದಾನ ಪಡೆದುಕೊಂಡು ಹೈಟೆಕ್ ಶೌಚಾಲಯ ನಿರ್ಮಿಸಲು ಕ್ರಮವಹಿಸಲಾಗುವುದು. ಇದಕ್ಕೆ ಎಲ್ಲ ಗ್ರಾಮಸ್ಥರು ಹಾಗೂ ಮಹಿಳೆಯರು ಸಹಕರಿಸಬೇಕು ಎಂದು ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಗ್ರಾಮದ ಪ್ರಮುಖರಾದ ನಿಂಗನಗೌಡ ಬಿರಾದಾರ, ಭೀಮನಗೌಡ ತಂಗಡಗಿ, ವೀರೇಶಗೌಡ ಕಾರಗನೂರ, ಶೇಖುಗೌಡ, ಮುತ್ತು ಧೂಳೇಕರ, ಜಯಪ್ಪ ಹರಿಜನ್, ತಿಪ್ಪಣ್ಣ ಪೂಜಾರಿ, ಸುರೇಶ್ ಕಂಗಳ, ಪಿಎಸ್ಐ ಜ್ಯೋತಿ ಖೋತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.