
ವಿಜಯಪುರ: ಹಿಟ್ಟಿನಹಳ್ಳಿಯಲ್ಲಿ ನಡೆಯಲಿರುವ 8 ನೇ ತಾಲ್ಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಬಾಗಲಕೋಟೆ ತೋಟಗಾರಿಕಾ ವಿವಿ ಕುಲಸಚಿವ ಹಾಗೂ ಸಾಹಿತಿ ಸೋಮಲಿಂಗ ಗೆಣ್ಣೂರ ಅವರನ್ನು ಆಯ್ಕೆ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ಜರುಗಿದ ಜಿಲ್ಲಾ ಹಾಗೂ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಚರ್ಚಿಸಿ ಸರ್ವಾನುಮತದಿಂದ ಸಾಹಿತಿ ಗೆಣ್ಣೂರ ಅವರ ಹೆಸರನ್ನು ಅಂತಿಮಗೊಳಿಸಿದರು.
ಕರ್ನಾಟಕ ಆಡಳಿತ ಸೇವೆ ಅಧಿಕಾರಿಯಾಗಿರುವ ಜೊತೆಗೆ ಸಾಹಿತ್ಯ ವಲಯಕ್ಕೂ ದೊಡ್ಡ ಕೊಡುಗೆ ನೀಡುತ್ತಿರುವ ಅವರು ಭಾರತೀಯ ಸಂವಿಧಾನ, ಡಾ.ಅಂಬೇಡ್ಕರ ಮಾರ್ಗ, ದೇವರಗೆಣ್ಣೂರ ಹೀಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ, ಹೀಗಾಗಿ ಅವರನ್ನು ಈ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಪ್ರಕಟಿಸಿದರು.
ಶಿಲ್ಪಾ ಭಸ್ಮೆ, ಅಭಿಷೇಕ ಚಕ್ರವರ್ತಿ, ಆನಂದ ಕುಲಕರ್ಣಿ, ಜಗದೀಶ ಬೋಳಸೂರ, ಕಮಲಾ ಮುರಾಳ, ಅರ್ಜುನ ಶಿರೂರ, ಸಂಗನಬಸಪ್ಪ ರೆಡ್ಡಿ, ತಾಲೂಕ ಕಸಾಪ ಗೌರವಾಧ್ಯಕ್ಷ ಬಿ.ಎಂ. ಆಜೂರ, ಶೈಲಾ ಬಳಗಾನೂರ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.