ADVERTISEMENT

ಸೋಲಾಪುರ: ನಗರ ಸಾರಿಗೆ ಬಸ್ ಆರಂಭಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:17 IST
Last Updated 3 ಡಿಸೆಂಬರ್ 2025, 6:17 IST
   

ಸೋಲಾಪುರ: ನಗರ ಬಸ್ ಸೇವೆ ಹಲವು ವರ್ಷಗಳಿಂದ ಅನೇಕ ಮಾರ್ಗಗಳಲ್ಲಿ ಸ್ಥಗಿತಗೊಂಡಿದೆ. ಮಹಾನಗರ ಪಾಲಿಕೆಯ ಅಸ್ಥಿರ ಬಸ್ ಸೇವೆಯಿಂದ ನಾಗರಿಕರು ದೊಡ್ಡ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಲಾಭವನ್ನು ನಗರದ ಅನಧಿಕೃತ ರಿಕ್ಷಾ ಚಾಲಕರು ಪಡೆಯುತ್ತಿದ್ದಾರೆ. ತಕ್ಷಣ ಸಿಟಿಬಸ್ ಸೇವೆಯಲ್ಲಿ ಸುಧಾರಣೆ ಮಾಡಬೇಕು ಹಾಗೂ ಸೇವೆ ಆರಂಭಿಸಬೇಕು ಎಂದು ಸೋಮವಾರ ನಡೆದ ಮಹಾನಗರ ಪಾಲಿಕೆಯ ಜನತಾ ದರ್ಬಾರಿನಲ್ಲಿ ಸಂಭಾಜಿ ಬ್ರಿಗೇಡ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಸೋಲಾಪುರವು ಯಂತ್ರ, ಮಗ್ಗ ಕಾರ್ಮಿಕರ ನಗರವಾಗಿದೆ. ನಗರದ ವ್ಯಾಪ್ತಿಯಲ್ಲಿ ದೊಡ್ಡ ಎಂಐಡಿಸಿ ಪ್ರದೇಶ ಗಳೂ ಇವೆ. ಆದ್ದರಿಂದ ಪ್ರತಿದಿನ ಕೂಲಿ ಕೆಲಸ ಮಾಡುವ ಕಾರ್ಮಿಕರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಕೆಲಸಕ್ಕೆ ಹೋಗಲು ಸಿಟಿ ಬಸ್ ಸೇವೆ ಅತ್ಯಂತ ಅಗತ್ಯವಾಗಿದೆ. ಆದರೆ ಬಸ್ ಸೇವೆ ನಿಂತಿರುವುದರಿಂದ ರಿಕ್ಷಾ ಬಳಸಬೇಕಾಗುತ್ತಿದೆ ಮತ್ತು ರಿಕ್ಷಾ ಚಾಲಕರು ಬಸ್‌ಗಿಂತ ಎರಡು ಮೂರು ಪಟ್ಟು ಹೆಚ್ಚು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಪ್ರಯಾಣದ ಸುಗಮತೆಯ ದೃಷ್ಟಿಯಿಂದ ಸಿಟಿಬಸ್ ಸೇವೆ ಪುನರಾರಂಭಿಸಬೇಕೆಂಬ ಮನವಿಯನ್ನು ಜನತಾ ದರ್ಬಾರಿನಲ್ಲಿ ಸಲ್ಲಿಸಲಾಯಿತು.

ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ವೀಣಾ ಪವಾರ ಅವರ ಉಪಸ್ಥಿತಿಯಲ್ಲಿ ಜನತಾ ದರ್ಬಾರ್ ನಡೆಯಿತು. ಈ ದರ್ಬಾರಿನಲ್ಲಿ ಅನೇಕ ನಾಗರಿಕರು ತಮ್ಮ ತಕರಾರುಗಳನ್ನು ಮಂಡಿಸಿದರು.

ADVERTISEMENT

ಸಂಭಾಜಿ ಭೋಸಲೆ, ಶಿರೀಷ ಜಗದಾಳೆ, ಮಿನಲ್ ದಾಸ್, ನ್ಯಾಯವಾದಿ ಗಣೇಶ ಕದಮ್, ಜಯಶ್ರೀ ಜಾಧವ, ಮನೀಷಾ ಕೋಳಿ, ಸಂಜೀವನಿ ಸಲಬತ್ತೆ, ಸುನಿತಾ ಘಂಟೆ, ಶೇಖರ ಭೋಸಲೆ, ಸಂತೋಷ ಸುರವಸೆ, ಸಿದ್ದರಾಮ ಸಾವಳೆ, ಸತೀಶ ವಾವರೆ, ಸುನಂದಾ ಸೂರ್ಯವಂಶಿ, ಸುನಿತಾ ಕಾರಂಡೆ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.