
ಮುದ್ದೇಬಿಹಾಳ: ತಾಲ್ಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಕಾಯಂ ಶಿಕ್ಷಕರ ಕೊರತೆ ಇದ್ದು, ಕೊರತೆ ಇರುವ ಶಿಕ್ಷಕರನ್ನು ಭರ್ತಿ ಮಾಡಬೇಕು ಎಂದು ಶಾಲಾ ಸುಧಾರಣಾ ಹಾಗೂ ಉಸ್ತುವಾರಿ ಸಮೀತಿ ಸದಸ್ಯರು ಬಿಇಒಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಬಿಇಒ ಕಚೇರಿಗೆ ಆಗಮಿಸಿದ್ದ ಎಸ್.ಡಿ.ಎಂ.ಸಿ ಸದಸ್ಯ ಬಂದೇನವಾಜ ಕುಮಸಿ ಮಾತನಾಡಿ, ಶಾಲೆಯಲ್ಲಿ 509 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅನೇಕ ವರ್ಷಗಳಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸುತ್ತ ಬಂದಿದೆ ಎಂದು ತಿಳಿಸಿದರು.
ಶಾಲೆಯಲ್ಲಿ ವಿಜ್ಞಾನ, ಸಿಬಿಜೆಡ್ ಇಂಗ್ಲಿಷ್ ಮಾಧ್ಯಮ, ಸಮಾಜ ವಿಜ್ಞಾನ ವಿಭಾಗಗಳಲ್ಲಿನ ಮೂರು ಕಾಯಂ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಕಳೆದ ಕೆಲವು ತಿಂಗಳುಗಳಿಂದ ಅತಿಥಿ ಶಿಕ್ಷಕರಿಂದ ಶಾಲೆ ನಿರ್ವಹಣೆ ಮಾಡುತ್ತಿದೆ. ಆದರೆ ಕೆಲಸದ ಒತ್ತಡ ವೇತನ ಕಡಿಮೆ ಎಂಬ ಕಾರಣಗಳಿಂದ ಅತಿಥಿ ಶಿಕ್ಷಕರು ಮಧ್ಯದಲ್ಲೇ ಸೇವೆಯಿಂದ ದೂರವಾಗುತ್ತಿರುವುದು ಪಾಠದ ನಿರ್ವಹಣೆಗೆ ದೊಡ್ಡ ಅಡಚಣೆಯುಂಟಾಗಿದೆ ಎಂದು ತಿಳಿಸಿದರು.
ಸದಸ್ಯ ಎಚ್.ಆರ್.ಬಾಗವಾನ ಮಾತನಾಡಿ, ಕಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕನಿಷ್ಠ ಮೂವರು ಶಿಕ್ಷಕರನ್ನು ತಕ್ಷಣ ನಿಯೋಜಿಸಬೇಕು. ಒಂದು ವೇಳೆ ಇಲಾಖೆಯು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಸಾವಿರಾರು ಪಾಲಕರೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮುಂದೆ ಧರಣಿ–ಸತ್ಯಾಗ್ರಹ ನಡೆಯಲಿದೆ ಎಂದು ತಿಳಿಸಿದರು.
ಬಿಆರ್‌ಸಿ ಆರ್.ಬಿ.ಧಮ್ಮೂರಮಠ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸದಸ್ಯ ವೈ.ಎಚ್.ಮ್ಯಾಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.