ADVERTISEMENT

ವಿಜಯಪುರ: ಶಿಕ್ಷಕರ ಬಡ್ತಿ ಹಗರಣದ ಅಕ್ರಮ ಸಾಬೀತು, ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು

ಬಸವರಾಜ ಸಂಪಳ್ಳಿ
Published 23 ಸೆಪ್ಟೆಂಬರ್ 2022, 19:30 IST
Last Updated 23 ಸೆಪ್ಟೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎನ್‌.ವಿ ಹೊಸೂರ ಅವಧಿಯಲ್ಲಿ ಶಿಕ್ಷಕರ ವರ್ಗಾವಣೆ ಮತ್ತು ಬಡ್ತಿಯಲ್ಲಿ ಅಕ್ರಮ ನಡೆದಿರುವುದು ಪ್ರಾಥಮಿಕ ವಿಚಾರಣೆಯಿಂದ ಸಾಬೀತಾಗಿದೆ.

ಪ್ರಕರಣದ ವಿಚಾರಣೆಗಾಗಿ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರ ಕಾರ್ಯಾಲಯದಿಂದ ನೇಮಕವಾಗಿದ್ದ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಈಗಾಗಲೇ ಜಿಲ್ಲೆಗೆ ಭೇಟಿ ನೀಡಿ, ವಿಚಾರಣೆಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

‘ಶಿಕ್ಷಕರ ವರ್ಗಾವಣೆ ಮತ್ತು ಬಡ್ತಿಯಲ್ಲಿಅಕ್ರಮ ನಡೆದಿರುವುದು ವಿಚಾರಣೆ ವೇಳೆ ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಸಂಬಂಧ ನಿವೃತ್ತ ಉಪ ನಿರ್ದೇಶಕ ಎನ್‌.ವಿ.ಹೊಸೂರ ಮತ್ತು ಇನ್ನುಳಿದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದುಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಸಿದ್ದರಾಮಪ್ಪ ಎಸ್‌. ಬಿರಾದಾರ ‘ಪ್ರಜಾವಾಣಿ’ಗೆ ಖಚಿತ ಪಡಿಸಿದರು.

ADVERTISEMENT

ಏನಿದು ಪ್ರಕರಣ:ಎನ್‌.ವಿ.ಹೊಸೂರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹುದ್ದೆಯಿಂದ ನಿವೃತ್ತಿ ಹೊಂದುವ ಪೂರ್ವದಲ್ಲಿ (ಜೂನ್‌ 30) ಮತ್ತು ನಿವೃತ್ತಿ ನಂತರ ಮುಖ್ಯ ಶಿಕ್ಷಕರ ಜೇಷ್ಠತಾ ಪಟ್ಟಿಯಲ್ಲಿ ಹೆಸರಿಲ್ಲದ 326 ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಮತ್ತು ಜೇಷ್ಠತಾ ಪಟ್ಟಿಯ 126 ಹಿರಿಯ ಮುಖ್ಯ ಶಿಕ್ಷಕರಿಗೆ ಕೌನ್ಸೆಲಿಂಗ್‌ ನಿಯಮ ಉಲ್ಲಂಘಿಸಿ ಬಡ್ತಿನೀಡಿದ್ದರು ಎಂಬ ಆರೋಪಕ್ಕೆ ಒಳಗಾಗಿದ್ದರು.

ಅಲ್ಲದೇ,ಎನ್‌.ವಿ.ಹೊಸೂರ ಅವರು ನಿವೃತ್ತಿಗೆ ಒಂದು ವಾರ ಮೊದಲು ಮತ್ತು ನಂತರದಲ್ಲಿ ಹಲವಾರು ಶಿಕ್ಷಕರನ್ನು ವಿನಾ ಕಾರಣ ಅಮಾನತು ಮಾಡಿ ಅವರನ್ನು ವಿಜಯಪುರ ನಗರ ಮತ್ತು ನಗರ ಸಮೀಪದ ಶಾಲೆಗಳಿಗೆ ಒಂದೆರಡು ದಿನಗಳಲ್ಲೇ ಸ್ಥಳ ನಿಯುಕ್ತಿ ಮಾಡಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದರು.

ಕ್ರಮಕ್ಕೆ ಸಿಇಒ ಪತ್ರ:ನಿವೃತ್ತ ಡಿಡಿಪಿಐ ಎನ್‌.ವಿ.ಹೊಸೂರ ಅವರು ಮಾಡಿರುವ ಬಡ್ತಿ ಮತ್ತು ವರ್ಗಾವಣೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ಹೆಚ್ಚುವರಿ ಆಯುಕ್ತರಿಗೆ ಪತ್ರ ಬರೆದಿದ್ದರು.

ಸಮಿತಿ ನೇಮಕ:ಧಾರವಾಡಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರುಪ್ರಕರಣದ ವಿಚಾರಣೆಗಾಗಿ ಇಲಾಖೆಯ ಅಧೀಕ್ಷಕರಾದ ಎಸ್‌.ಎ.ಆನೆಗುಂದಿ, ವಿರೇಶ ಕಲಬುರ್ಗಿ, ಎಫ್‌ಡಿಎ ಲಕ್ಷ್ಮಣ ಜಿ.ಪಾಟೀಲ ಮತ್ತು ವಿನಾಯಕ ಹೊಂಗಲ್ ಅವರನ್ನು ಒಳಗೊಂಡ ಸಮಿತಿಯನ್ನು ನೇಮಕ ಮಾಡಿದ್ದರು.

ಈ ಸಮಿತಿಯು ಜಿಲ್ಲೆಗೆ ಭೇಟಿ ನೀಡಿ, ಕುಲಂಕಷ ಪರಿಶೀಲನೆ, ವಿಚಾರಣೆ ನಡೆಸಿದ್ದು, ಪ್ರಕರಣ ನಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೆ, ಕೆಲ ಪ್ರಭಾವಿ ಆರೋಪಿಗಳು ಪ್ರಕರಣವನ್ನು ಮುಚ್ಚಿಹಾಕಲು ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳ ಮೂಲಕ ಒತ್ತಡತಂತ್ರ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

₹50 ಸಾವಿರದಿಂದ ₹80 ಸಾವಿರ ವಸೂಲಿ!
ವಿಜಯಪುರ: ವರ್ಗಾವಣೆ, ಬಡ್ತಿ ವೇಳೆಶಿಕ್ಷಕರಿಂದ ₹ 50 ಸಾವಿರದಿಂದ ₹ 80 ಸಾವಿರದ ವರೆಗೆ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಡೀ ಪ್ರಕರಣದಲ್ಲಿ ಐದಾರು ಕೋಟಿಗೂ ಅಧಿಕ ಹಣ ಶಿಕ್ಷಕರಿಂದ ಅಧಿಕಾರಿಗಳಿಗೆ ತಲುಪಿದೆ.

ಆದರೆ, ಇದೀಗ ವರ್ಗಾವಣೆ, ಬಡ್ತಿಯೂ ಇಲ್ಲದೇ ಜೊತೆಗೆ ಹಣವನ್ನು ಕಳೆದುಕೊಂಡ ಅನೇಕ ಶಿಕ್ಷಕರು ತೊಂದರೆಗೆ ಒಳಗಾಗಿದ್ದಾರೆ.

ಇಡೀ ಪ್ರಕರಣದಲ್ಲಿ ಕೇವಲ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೇ ಶಿಕ್ಷಕರ ಸಂಘ ಮತ್ತು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಪಾಲು ಪಡೆದಿದ್ದಾರೆ.ಬಡ್ತಿ, ವರ್ಗಾವಣೆ ದಂಧೆ ವೇಳೆ ಶಿಕ್ಷಕರಿಂದ ವಸೂಲಿ ಮಾಡಿದ ಹಣದಲ್ಲಿ ಅರ್ಧಕ್ಕೂ ಹೆಚ್ಚಿನ ಮೊತ್ತವನ್ನು ತಾವೇ ಇಟ್ಟುಕೊಂಡು, ಅಲ್ಪಸ್ವಲ್ಪ ಹಣವನ್ನು ಅಧಿಕಾರಿಗೆ ತಲುಪಿಸಿದ್ದಾರೆಎಂಬುದು ವಿಚಾರಣೆ ವೇಳೆ ಖಚಿತವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಎನ್‌.ವಿ.ಹೊಸೂರ ಅವರಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ.

*
ಬಡ್ತಿ, ವರ್ಗಾವಣೆಯಲ್ಲಿ ಕೆಲವು ಡಿಡಿಪಿಐ ಮಾಡಿದ್ದಾರೆ. ಇನ್ನು ಕೆಲವು ಸರ್ಕಾರದ ಮಟ್ಟದಲ್ಲಿ ಆಗಿವೆ. ಸ್ಥಳೀಯವಾಗಿ ನಡೆದಿರುವ ಪ್ರಕರಣಗಳನ್ನು ಮಾತ್ರ ರದ್ದುಪಡಿಸಿ, ಕ್ರಮಕೈಗೊಳ್ಳಲಾಗುತ್ತಿದೆ
–ಉಮೇಶ ಶಿರಹಟ್ಟಿಮಠ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.