
ಆಲಮಟ್ಟಿ: ಕೆಬಿಜೆಎನ್‌ಎಲ್ ವಿವಿಧ ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ಕಾರ್ಮಿಕರನ್ನು ತೆಗೆದು, ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಕರೆದ ಟೆಂಡರ್ ರದ್ದುಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಸದಸ್ಯರು ಮಂಗಳವಾರ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಧರಣಿ ನಡೆಸಿದರು.
ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ ಮಾದರ, ‘20 ವರ್ಷಗಳಿಂದ ಇಲ್ಲಿ ಕೂಲಿಕಾರ್ಮಿಕರಾಗಿ ವಿವಿಧ ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಅದಕ್ಕಾಗಿ ನೇರವಾಗಿ ನಿಗಮವೇ ಅರಣ್ಯ ಇಲಾಖೆಯ ಮೂಲಕ ವೇತನ ಪಾವತಿ ಮಾಡುತ್ತಿದೆ. ಆದರೆ ಈಗ ಹೊರಗುತ್ತಿಗೆ ಏಜೆನ್ಸಿಯ ಮೂಲಕ ವೇತನ ನಿಗದಿಗೊಳಿಸಲು ಟೆಂಡರ್ ಕರೆಯಲಾಗಿದೆ’ ಎಂದು ಹೇಳಿದರು.
‘ಕನಿಷ್ಠ ಸರ್ಕಾರಿ ಸೇವಾ ಭದ್ರತೆ ನೀಡಬೇಕು, ಬಾಕಿ ವೇತನ ಬಿಡುಗಡೆಗೊಳಿಸಬೇಕು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಟೆಂಡರ್ ಇಲ್ಲದೆ ಕರ್ತವ್ಯ ನಿರ್ವಹಿಸಲು ವಿನಾಯಿತಿ ನೀಡಬೇಕು’ ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ. ಬಸವರಾಜ ಹಾಗೂ ಡಿಎಫ್‌ಒ ಎನ್.ಕೆ. ಬಾಗಾಯತ್ ಅವರು ಧರಣಿನಿರತರ ಸಮಸ್ಯೆ, ಕಾನೂನಾತ್ಮಕ ತೊಡಕುಗಳ ಬಗ್ಗೆ ಚರ್ಚಿಸಿದರು. ಬಾಕಿ ವೇತನ ಪಾವತಿಸುವ ಮತ್ತು ಟೆಂಡರ್ ರದ್ದತಿಗಾಗಿ ಕೆಬಿಜೆಎನ್ಎಲ್ ಎಂಡಿ ಅವರೊಂದಿಗೆ ತುರ್ತಾಗಿ ಚರ್ಚಿಸುವ ಭರವಸೆ ನೀಡಿದರು. ಬಳಿಕ ಧರಣಿ ಹಿಂಪಡೆಯಲಾಯಿತು.
ಸಂಘದ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಗುಡಿಮನಿ, ಅವ್ವಣ್ಣ ವಾಲಿಕಾರ, ಕಾಶಿನಾಥ ಬಿಂಗೆ, ಶಂಕರ ಪಡಸಲಗಿ, ಗೋವಿಂದ ಬಂಡಿವಡ್ಡರ, ಮಹೇಶ ತೆಲಗಿ, ನೀಲವ್ವ ಗುಡೆಕಾರ, ರುಕ್ಮಾ ಚೌಹಾಣ, ರೇಣುಕಾ ಚಲವಾದಿ, ಶೋಭಾ ಗೌಡರ, ತುಳಿಸಿ ಮೊಹಿತೆ, ಸವಿತಾ ಭಾಂಡವಳಕರ, ಭೀಮಸಿ ಮಾದರ, ಪ್ರಕಾಶ ಮಾಲಗತ್ತಿ, ಅಲ್ಲಾಸಾಬ ಮೆಟಗುಡ್ಡ, ಬಸಪ್ಪ ತುಮರಮಟ್ಟಿ, ಚನ್ನಪ್ಪ ಹುಲ್ಲೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.