ADVERTISEMENT

ಹಡಪದ ಅಪ್ಪಣ್ಣ ವಚನ ಸಾರ್ವಕಾಲಿಕ: ಬಬಲೇಶ್ವರ

ಜಿಲ್ಲಾಡಳಿತದಿಂದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:18 IST
Last Updated 11 ಜುಲೈ 2025, 6:18 IST
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದ್ಘಾಟಿಸಿದರು
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದ್ಘಾಟಿಸಿದರು   

ವಿಜಯಪುರ: ನಿಜಶರಣ ಹಡಪದ ಅಪ್ಪಣ್ಣನವರು ನಮ್ಮ ನಾಡಿನ ಆಸ್ತಿ, ಬಸವಾದಿ ಕಾಲದ ಎಲ್ಲ ಶರಣರು ಸಮ ಸಮಾಜವನ್ನು ನಿರ್ಮಿಸುವಲ್ಲಿ ಬಹಳಷ್ಟು ಶ್ರಮಿಸಿದ್ದಾರೆ ಎಂದು ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶರಣರ ತತ್ವಾದರ್ಶ, ಅವರ ವಚನಗಳ ಸಾರ ಮುಂದಿನ ಪೀಳಿಗೆಗೆ ತಿಳಿಸಬೇಕು. ಶರಣರು ತೋರಿಸಿದ ಜ್ಞಾನ ಪಥದಲ್ಲಿ ನಡೆದು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು,  ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು, ಶಿವಶರಣರ ವಚನಗಳ ಪುಸ್ತಕಗಳನ್ನು ಓದುವಂತಾಗಬೇಕು. ವಚನ ಸಂಸ್ಕೃತಿಯನ್ನು ಮನೆ-ಮನೆಗಳಿಗೆ ತಲುಪಿಸುವಂತಾಗಬೇಕು. ಅವರ ವಿಚಾರಧಾರೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ಮಾತ್ರ ಶರಣರಿಗೆ ಸಂದ ಗೌರವ ಎಂದು ತಿಳಿಸಿದರು.

ADVERTISEMENT

ಡಿವೈಎಸ್‍ಪಿ ಬಸವರಾಜ ಯಲಿಗಾರ ಮಾತನಾಡಿ, 12ನೇ ಶತಮಾನದ ಶರಣರು ಸಮಾಜದ ಅಂಕುಡೊಂಕು ಓರೆಕೋರೆ ತಿದ್ದುವಲ್ಲಿ ಬಹಳ ಶ್ರಮಿಸಿದರು. ಬಸವಣ್ಣನವರು ಮೂಡನಂಬಿಕೆಯನ್ನು ಹೋಗಲಾಡಿಸಲು ಹಡಪದ ಅಪ್ಪಣ್ಣವರನ್ನು ತಮ್ಮ ಆಪ್ತ ಕಾರ್ಯದರ್ಶಿಗಳನ್ನಾಗಿ ನೇಮಿಸಿಕೊಂಡಿದ್ದರು ಎಂದರು.

ವಚನಗಳ ಸಂಶೋಧನೆ ನಿರಂತರವಾಗಿ ನಡೆಯಬೇಕು. ಅವರ ವಚನಗಳಲ್ಲಿನ ಆದರ್ಶ ವಿಚಾರಗಳು ಜಯಂತಿಗೆ ಮಾತ್ರ ಸಿಮೀತವಾಗಿರದೇ ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಕೊಳ್ಳಬೇಕು ಎಂದು ಹೇಳಿದರು.   

ವಿಶೇಷ ಉಪನ್ಯಾಸ ನೀಡಿದ ಡಾ.ಬಸವರಾಜ ಹಡಪದ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸುಧಾರಣೆಗೆ ಹಡಪದ ಅಪ್ಪಣ್ಣವರ ಕೊಡುಗೆ ಅಪಾರ. ಮೌಢ್ಯತೆ ಮೀರಿ ಮನುಷ್ಯತ್ವದ ನೆಲೆಗಟ್ಟಿನಲ್ಲಿ ಸತ್ಕಾರ್ಯಗಳನ್ನು ಮಾಡುವುದರ ಮೂಲಕ ಸಾರ್ಥಕ ಬದುಕು ಬದುಕಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ಸಾರಿದರು ಎಂದು ಹೇಳಿದರು. 

ಶರಣರ ಒತ್ತಾಸೆಗಳನ್ನು ಹಡಪದ ಅಪ್ಪಣ್ಣನವರಲ್ಲಿ ಕಾಣುತ್ತೇವೆ. ತತ್ವಾದರ್ಶಗಳಿಂದ ಖ್ಯಾತಿ ಪಡೆದಿದ್ದ, ಹಡಪದ ಅಪ್ಪಣ್ಣನವರ ಕುರಿತು ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಅಪ್ಪಣ್ಣನವರು 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂದು ಅವರು ತಿಳಿಸಿದರು. 

ವಿಶಾಲಾಕ್ಷಿ ಬಡಿಗೇರ ವಚನ ಗಾಯನ ಮಾಡಿದರು. ಮಹಾನಗರ ಪಾಲಿಕೆಯ ಉಪ ಆಯುಕ್ತ ವೈ.ಎಚ್.ನಾರಾಯಣಕರ, ಜಿಲ್ಲಾ ಪಂಚಾಯಿತಿ  ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಬಸವರಾಜ ಶಿವಶರಣ, ಅಶೋಕ ಉತ್ನಾಳ, ಎಸ್.ಜಿ.ದೇವೂರ, ವಿರುಪಾಕ್ಷಿ ಕತ್ನಳ್ಳಿ, ದಶರಥ ನಾವಿ, ಪ್ರಕಾಶ ಹಡಪದ, ಮಲ್ಲಿಕಾರ್ಜುನ ಬಟಗಿ ಉಪಸ್ಥಿತರಿದ್ದರು.

ಮೆರವಣಿಗೆ: ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಮೆರವಣಿಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು.  

ಹಡಪದ ಅಪ್ಪಣ್ಣ ಅವರು ಜ್ಞಾನಿಗಳು ಇದೇ ಜಿಲ್ಲೆಯವರು. ಅವರ ವಚನಗಳು ಸಾರ್ವಕಾಲಿಕ. ಅಂದಿನ ಸಮಾಜದಲ್ಲಿದ್ದ ಮೂಢನಂಬಿಕೆ ಮೌಢ್ಯ ತೊಡೆದು ಹಾಕಲು ವಚನಗಳ ಮೂಲಕ ಶ್ರಮಿಸಿದರು
ಸಂಗಮೇಶ ಬಬಲೇಶ್ವರ ಅಧ್ಯಕ್ಷ ಬಾಲ ವಿಕಾಸ ಅಕಾಡೆಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.