ADVERTISEMENT

ಆಲಮಟ್ಟಿ ಒಳಹರಿವು ಹೆಚ್ಚಳ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 15:13 IST
Last Updated 5 ಆಗಸ್ಟ್ 2020, 15:13 IST
ಆಲಮಟ್ಟಿ ಜಲಾಶಯದ ದೃಶ್ಯ
ಆಲಮಟ್ಟಿ ಜಲಾಶಯದ ದೃಶ್ಯ   

ಆಲಮಟ್ಟಿ(ವಿಜಯಪುರ): ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಅಲ್ಲಿಯ ಜಲಾಶಯಗಳಿಂದ ನೀರು ಬಿಡುತ್ತಿರುವ ಕಾರಣ ಎರಡು ದಿನದಲ್ಲಿ ಆಲಮಟ್ಟಿ ಜಲಾಶಯದ ಒಳಹರಿವು ಒಂದು ಲಕ್ಷ ಕ್ಯುಸೆಕ್ ದಾಟುವ ಸಾಧ್ಯತೆಯಿದೆ ಎಂದು ಕೆಬಿಜೆಎನ್ ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಬೆಳಿಗ್ಗೆ ಕೇವಲ 3844 ಕ್ಯುಸೆಕ್ ಇದ್ದ ಒಳಹರಿವು ಸಂಜೆಯ ವೇಳೆಗೆ 23 ಸಾವಿರ ಕ್ಯುಸೆಕ್ ಏರಿಕೆಯಾಗಿದೆ. ಗುರುವಾರ ಒಳಹರಿವು ಇನ್ನಷ್ಟು ಹೆಚ್ಚಲಿದೆ. ಬೆಳಿಗ್ಗೆ ಜಲಾಶಯದಿಂದ 5000 ಕ್ಯುಸೆಕ್ ನೀರನ್ನು ಬಿಡಲಾಗುತ್ತಿತ್ತು. ಆದರೆ, ಸಂಜೆಯ ವೇಳೆಗೆ ಮುಂಜಾಗ್ರತಾ ಕ್ರಮವಾಗಿ ಹೊರಹರಿವನ್ನು 17ಸಾವಿರ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಭಾರಿ ಮಳೆಯಾಗಿದೆ. ಕೊಯ್ನಾದಲ್ಲಿ 247 ಮಿ.ಮೀ, ರಾಧಾನಗರಿಯಲ್ಲಿ 281 ಮಿ.ಮೀ, ಧೂದಗಂಗಾದಲ್ಲಿ 227 ಮಿ.ಮೀ, ಕಾಸರಿಯಲ್ಲಿ 205 ಮಿ.ಮೀ, ಧೋಮದಲ್ಲಿ 188 ಮಿ.ಮೀ, ಪಾತಗಾಂವದಲ್ಲಿ 105 ಮಿ.ಮೀ, ವಾರಣಾದಲ್ಲಿ 140 ಮಿ.ಮೀ ಮಳೆಯಾಗಿದೆ.

ADVERTISEMENT

ಕೃಷ್ಣಾ ಕಣಿವೆಯ ಬಹುತೇಕ ಅಣೆಕಟ್ಟೆಗಳು ಭರ್ತಿಯತ್ತಾ ಸಾಗಿವೆ. ಇದರಿಂದಾಗಿ ಬುಧವಾರ ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು 35,625 ಕ್ಯುಸೆಕ್ ಇದ್ದು, ಅದು ರಾತ್ರಿ ವೇಳೆಗೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರವಾಹದ ಆತಂಕವಿಲ್ಲ: ಈ ಬಾರಿ ಇನ್ನೂ ಜಲಾಶಯ ಭರ್ತಿಯಾಗಲು ಎರಡು ಮೀಟರ್ ಬಾಕಿಯಿದೆ. ಮುಂಜಾಗ್ರತೆ ಕ್ರಮವಾಗಿ ಜಲಾಶಯವನ್ನು ಭರ್ತಿ ಮಾಡಿಲ್ಲ. 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಬುಧವಾರ 91 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಭರ್ತಿಯಾಗಲು ಇನ್ನೂ 32 ಟಿಎಂಸಿ ಅಡಿ ನೀರು ಅಗತ್ಯವಿದೆ. ಗುರುವಾರ ಒಳಹರಿವು ಹೆಚ್ಚಳವಾದರೆ ಹೊರಹರಿವನ್ನು ಹೆಚ್ಚಿಸಲಾಗುವುದು. ಪ್ರವಾಹದ ಯಾವುದೇ ಆತಂಕವಿಲ್ಲ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ನೀರಿನ ಹರಿವನ್ನು ಗಮನಿಸಲಾಗುತ್ತಿದೆ. ಕೃಷ್ಣೆಯ ಜತೆಗೆ ಉಪನದಿ ಘಟಪ್ರಭಾದ ಹರಿವನ್ನು ಮಳೆಯ ಅಂಕಿ ಅಂಶಗಳನ್ನು ಗಮನಿಸಲಾಗುತ್ತಿದೆ. ವೈಜ್ಞಾನಿಕವಾಗಿ ನೀರಿನ ನಿರ್ವಹಣೆ ಮಾಡಲಾಗುವುದು ಎಂದು ಕೆಬಿಜೆಎನ್‌ಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.