ADVERTISEMENT

ವಿಶ್ವವಿದ್ಯಾಲಯದ ನಿರೀಕ್ಷೆ ಹುಸಿಗೊಳಿಸಿದ ರಾಜ್ಯ ಬಜೆಟ್‌

ಉಡುತಡಿ ಕೇಂದ್ರದ ಅಭಿವೃದ್ಧಿಗೆ ಲಭಿಸದ ಜಾಗ, ಅನುದಾನ

ಬಸವರಾಜ ಸಂಪಳ್ಳಿ
Published 18 ಮಾರ್ಚ್ 2021, 14:48 IST
Last Updated 18 ಮಾರ್ಚ್ 2021, 14:48 IST
ಪ್ರೊ.ಬಿ.ಕೆ.ತುಳಸಿಮಾಲಾ
ಪ್ರೊ.ಬಿ.ಕೆ.ತುಳಸಿಮಾಲಾ   

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ರಾಜ್ಯ ಬಜೆಟ್‌ನಲ್ಲಿ ಅಗತ್ಯ ಅನುದಾನವಾಗಲಿ, ಹೊಸ ಯೋಜನೆಗಳಾಗಲಿ ಲಭಿಸದಿರುವುದು ತೀವ್ರ ನಿರಾಶೆ ಮೂಡಿಸಿದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹಾಗೂ ವಿಶ್ವವಿದ್ಯಾಲಯದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿದೆ.

ವಿಶ್ವವಿದ್ಯಾಲಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ₹ 20 ಕೋಟಿ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ನಯಾ ಪೈಸೆ ನೀಡಿಲ್ಲ.

ವಿಶ್ವವಿದ್ಯಾಲಯದತೊರವಿ ಕ್ಯಾಂಪಸ್‌ ಅಭಿವೃದ್ಧಿಗಾಗಿ ಪ್ರತಿ ವರ್ಷ ₹ 5 ಕೋಟಿ ನೀಡುವಂತೆ 2004ರಿಂದ ಬೇಡಿಕೆ ಇಡುತ್ತಾ ಬಂದಿದ್ದರೂ ಸಹ ಇದುವರೆಗೆ ಯಾವೊಂದು ಸರ್ಕಾರವೂ ಈ ಪ್ರಸ್ತಾವಕ್ಕೆ ಮಾನ್ಯತೆ ನೀಡದಿರುವುದು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.

ADVERTISEMENT

ಸಿದ್ದರಾಮಯ್ಯ ಸರ್ಕಾರ ₹25 ಕೋಟಿ ನೀಡಿದ್ದರಿಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ ಬಹುತೇಕ ಅಭಿವೃದ್ಧಿ ಹೊಂದಿದೆ. ಬಹುತೇಕ ಕಟ್ಟಡಗಳು ಪೂರ್ಣಗೊಂಡಿವೆ. ಇಲ್ಲವಾಗಿದ್ದರೆ ವಿಶ್ವವಿದ್ಯಾಲಯ ಇನ್ನೂ ಭಣಗುಡತ್ತಿರಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಬಜೆಟ್‌ನಲ್ಲಿ ಅನುಮೋದನೆ ಸಿಗಬಹುದು ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ.250 ಬೋಧಕೇತರ ಸಿಬ್ಬಂದಿ, 104 ಪೂರ್ಣಕಾಲಿಕ ಅತಿಥಿ ಉಪನ್ಯಾಸಕರನ್ನು ಭರ್ತಿ ಮಾಡುವ ಪ್ರಸ್ತಾವಕ್ಕೂ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲ.ವಿಶ್ವವಿದ್ಯಾಲಯಕ್ಕೆ ಲಭಿಸುವ ಆಂತರಿಕ ಆದಾಯ ಕೇವಲ ಸಿಬ್ಬಂದಿ ವೇತನಕ್ಕೆ ಖರ್ಚಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಿರುವ ‘ಶರಣ ಸಂಸ್ಕೃತಿ ಧಾಮ’ಕ್ಕೆ ವಿಶ್ವವಿದ್ಯಾಲಯದ 8.5 ಎಕರೆ ಭೂಮಿಯನ್ನು ತೆಗೆದುಕೊಂಡಿರುವ ಸರ್ಕಾರವು ಇದಕ್ಕೆ ಬದಲಾಗಿ 10 ಎಕರೆ ಭೂಮಿ ಹಾಗೂ ₹10 ಕೋಟಿ ಅನುದಾನ ನೀಡುವುದಾಗಿ ಹೇಳಿತ್ತು. ಆದರೆ, ಬಜೆಟ್‌ನಲ್ಲಿ ಅದರ ಪ್ರಸ್ತಾವವೇ ಇಲ್ಲದಿರುವುದು ಬೇಸರ ಉಂಟುಮಾಡಿದೆ.

ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವಮ್ಯೂಸಿಯಂಗೆ ₹10 ಕೋಟಿ ವಿಶೇಷ ಅನುದಾನ ಕೇಳಲಾಗಿತ್ತು. ಆದರೆ, ಅದನ್ನೂ ನೀಡಿಲ್ಲ. ಇದರಿಂದ ಮ್ಯೂಜಿಯಂ ನಿರ್ಮಾಣ ಕಾಮಗಾರಿಗೆ ಹಿನ್ನೆಡೆಯಾಗಿದೆ.

ಕೇವಲ ₹ 50 ಲಕ್ಷ ಅಭಿವೃದ್ಧಿ ಅನುದಾನ ಹೊರತು ಪಡಿಸಿ ಉಳಿದಂತೆ ಯಾವುದೇ ವಿಶೇಷ ಅನುದಾನ ಕೊಡದೇ ಇರುವುದು ವಿಶ್ವವಿದ್ಯಾಲಯದ ಸುಸ್ಥಿರತೆಗೆ ದೊಡ್ಡ ಏಟು ಬಿದ್ದಿದೆ.

ಕೇವಲ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಾತ್ರವಲ್ಲ; ರಾಜ್ಯದ ಯಾವೊಂದು ವಿಶ್ವವಿದ್ಯಾಲಯಕ್ಕೂ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲದಿರುವುದು ಟೀಕೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.