ADVERTISEMENT

ಯತ್ನಾಳ ಉಚ್ಚಾಟನೆ ಹಿಂಪಡೆಯದಿದ್ದರೆ ಜನಾಂದೋಲನ: ಪಂಚಮಸಾಲಿ ಸ್ವಾಮೀಜಿ

ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 16:01 IST
Last Updated 28 ಮಾರ್ಚ್ 2025, 16:01 IST
<div class="paragraphs"><p>ಪಂಚಮಸಾಲಿ ಸ್ವಾಮೀಜಿ</p></div>

ಪಂಚಮಸಾಲಿ ಸ್ವಾಮೀಜಿ

   

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಆದೇಶವನ್ನು ಏಪ್ರಿಲ್ 10 ರೊಳಗಾಗಿ ಹಿಂಪಡೆಯದಿದ್ದರೆ ಜನಾಂದೋಲನ ನಡೆಸುವುದಾಗಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಂಚಮಸಾಲಿ ಸಮಾಜದ ಶಾಸಕರಾದ ಯತ್ನಾಳರಿಗೆ ಅನ್ಯಾಯವಾಗಿರುವುದರ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ. ಆದರೆ, ಕೆಲವರು ನಮ್ಮ ಸಮಾಜದ ವಿಷಯದಲ್ಲಿ ಮೂಗು ತೂರಿಸುತ್ತಿರುವುದು ಖಂಡನೀಯ ಎಂದರು.

ADVERTISEMENT

ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅನ್ಯಾಯವಾದರೂ ನಾನು ಅವರ ಪರವಾಗಿ ನಿಲ್ಲುವೆ. ನಾನೊಬ್ಬನೇ ಅಲ್ಲ, ಎಲ್ಲ ಸಮಾಜದ ಶ್ರೀಗಳು ಸಹ ತಮ್ಮ ಸಮಾಜಕ್ಕೆ ಅನ್ಯಾಯವಾದಾಗ ಪ್ರತಿಭಟನೆ ಮಾಡಿರುವ ಉದಾಹರಣೆ ಇದೆ ಎಂದು ಹೇಳಿದರು. 

ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ, ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಕಳಕಳಿ ಹೊಂದಿರುವ ಜನಪರ ನಾಯಕ ಯತ್ನಾಳ ಅವರ ಬೆನ್ನಿಗೆ ನಿಂತಿದ್ದೇನೆ, ಉಚ್ಛಾಟನೆ ಮಾಡಿರುವುದನ್ನು ಖಂಡಿಸಿದ್ದೇನೆ ಎಂದರು.

ಕಾರಣವಿಲ್ಲದೇ ಒಬ್ಬ ಪ್ರಭಾವಿ ನಾಯಕನನ್ನು ಉಚ್ಛಾಟನೆ ಮಾಡಿರುವುದು ಸಮಸ್ತ ಪಂಚಮಸಾಲಿ ಸಮಾಜದ ಜನರ ಭಾವನೆಗಳಿಗೆ ನೋವು ತರಿಸಿದೆ. ಪಂಚಮಸಾಲಿ ಸಮಾಜ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

ಯತ್ನಾಳ ಅವರ ಉಚ್ಚಾಟನೆ ವಿರುದ್ಧ ನಡೆಯುವ ಹೋರಾಟ ಬಿಜೆಪಿ ವಿರುದ್ಧದ ಹೋರಾಟವಲ್ಲ. ಬಿಜೆಪಿ ಪಕ್ಷದ ವಿರುದ್ಧ ನಾವು ಹೋರಾಟ ಮಾಡುತ್ತಿಲ್ಲ, ಯತ್ನಾಳರ ಉಚ್ಚಾಟನೆಗೆ ಕಾರಣರಾದ ವ್ಯಕ್ತಿಯ ವಿರುದ್ಧ ನಾವು ಹೋರಾಟಕ್ಕೆ ಅಣಿಯಾಗಿದ್ದೇವೆ ಎಂದು ಶ್ರೀಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.