ADVERTISEMENT

ದೇವರಹಿಪ್ಪರಗಿ | ಕಳ್ಳರ ಬಂಧನ: 10 ಬೈಕ್‌ ವಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 15:49 IST
Last Updated 11 ಜನವರಿ 2024, 15:49 IST
ದೇವರಹಿಪ್ಪರಗಿಯ ಪೊಲೀಸ್ ಸಿಬ್ಬಂದಿ ಬೈಕ್‌ ಕಳ್ಳರನ್ನು ಬಂಧಿಸಿ ಅವರಿಂದ 10 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ
ದೇವರಹಿಪ್ಪರಗಿಯ ಪೊಲೀಸ್ ಸಿಬ್ಬಂದಿ ಬೈಕ್‌ ಕಳ್ಳರನ್ನು ಬಂಧಿಸಿ ಅವರಿಂದ 10 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ   

ದೇವರಹಿಪ್ಪರಗಿ: ಪಟ್ಟಣ ಸೇರಿದಂತೆ ವಿವಿಧೆಡೆ ಸುಮಾರು ₹ 4.15 ಲಕ್ಷ ಮೌಲ್ಯದ ಬೈಕ್‌ಗಳನ್ನು ಕದ್ದ ಹಾಗೂ ಮಲ್ಲಯ್ಯ ದೇವಸ್ಥಾನ ದೋಚಲು ಯತ್ನಿಸಿದ ಮೂವರು ಆರೋಪಿಗಳನ್ನು ಪತ್ತೆ ಮಾಡಿ ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ  ಬಂಧಿಸಿದ್ದಾರೆ.

ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಅನಿಲಕುಮಾರ ಬಾಗೋಡಿ, ವೆಂಕಟೇಶ ನೀಡಗಿ, ಶರಣಯ್ಯಸ್ವಾಮಿ ಗೊಬ್ಬಿ ಬಂಧಿತರು.

ಪಟ್ಟಣದಲ್ಲಿ ಗುರುವಾರ ನಸುಕಿನ ಜಾವ ಮಡಿವಾಳ ಮಾಚಿದೇವರ ದೇವಸ್ಥಾನದ ಮುಂದೆ ಅನುಮಾನಸ್ಪದವಾಗಿ  ಓಡಾಡುತ್ತಿದ್ದ ಮೂವರನ್ನು ಸ್ಥಳೀಯ ಪೊಲೀಸ್ ಸಿಬ್ಬಂದಿ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ.

ADVERTISEMENT

ಪಟ್ಟಣ ಸೇರಿದಂತೆ ಯಾದಗಿರಿ ಜಿಲ್ಲೆಯ ವಿವಿಧೆಡೆ ಕದ್ದ 10 ಬೈಕ್‌ಗಳು ಹಾಗೂ ಕಳೆದ ಕೆಲವು ದಿನಗಳ ಹಿಂದೆ ಮಲ್ಲಯ್ಯ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳವು ಮಾಡಲು ಪ್ರಯತ್ನಿಸಿದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.  ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಎಂ.ಮಾರಿಹಾಳ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಅವರ ಮಾರ್ಗದರ್ಶನದಲ್ಲಿ ವಿಜಯಪುರ ಗ್ರಾಮಾಂತರ ಉಪವಿಭಾಗದ ಡಿಎಸ್ಪಿ ಗಿರಿಮಲ್ಲ ತಳಕಟ್ಟಿ, ಸಿಪಿಐ ಆನಂದರಾವ್ ಎಸ್.ಎನ್, ಪಿಎಸ್‌ಐಗಳಾದ ಬಸವರಾಜ ತಿಪ್ಪಾರಡ್ಡಿ, ಎಸ್.ಬಿ.ನಡುವಿನಕೇರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಿದ್ದರು. 

ಕಾರ್ಯಾಚರಣೆಯ ತನಿಖಾ ತಂಡದಲ್ಲಿ ಸಿಬ್ಬಂದಿ ಗುರು ಸಿಂಗೆ, ಬಿ.ಎಸ್.ಮೇಡೆದಾರ, ಎಸ್.ಎಸ್.ಸಿನ್ನೂರ, ಎಂ.ಎಸ್.ಮುಜಾವರ, ಆರ್.ಬಿ.ಕುಂಬಾರ, ಕೆ.ವೈ.ಕರಿಕಟ್ಟಿ, ವಿ.ಎಚ್.ಶಾಂತಗಿರಿ, ತೌಸೀಫ್ ಎಂ.ಪಿ, ಜಾವೀದ್ ಎ.ಎನ್, ವೈ.ಬಿ.ಬಜಂತ್ರಿ, ವಿ.ಎಲ್.ಕೆಳಗಿನಮನಿ, ಎಸ್.ಎಸ್. ಬಿರಾದಾರ, ಸಂಜೀವ ಹೊಸಮನಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.