ADVERTISEMENT

ತಿಕೋಟಾದಲ್ಲಿ ಮಹಾತ್ಮ ಗಾಂಧಿ ವೃತ್ತ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 9:48 IST
Last Updated 26 ಜನವರಿ 2019, 9:48 IST
ತಿಕೋಟಾದಲ್ಲಿನ ಮಹಾತ್ಮಗಾಂಧಿ ವೃತ್ತ
ತಿಕೋಟಾದಲ್ಲಿನ ಮಹಾತ್ಮಗಾಂಧಿ ವೃತ್ತ   

ತಿಕೋಟಾ:ಗ್ರಾಮದ ಹಳೆ ಬಸ್‌ ನಿಲ್ದಾಣಕ್ಕೆ ಸಮೀಪದಲ್ಲಿರುವ ಮಹಾತ್ಮ ಗಾಂಧಿ ವೃತ್ತಕ್ಕೆ ತನ್ನದೇ ಆದ ಐತಿಹ್ಯವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಆಂದೋಲನ, ಚಳವಳಿ, ಹೋರಾಟ ತೀವ್ರ ಸ್ವರೂಪ ಪಡೆದಿದ್ದ ಸಂದರ್ಭ ಗ್ರಾಮಕ್ಕೆ ಗಾಂಧೀಜಿ ಭೇಟಿ ನೀಡಿದ ಕುರುಹಾಗಿ ಈ ವೃತ್ತ ನಿರ್ಮಾಣಗೊಂಡಿದೆ.

ವಿಜಯಪುರ ಜಿಲ್ಲೆಗೆ ಮಹಾತ್ಮ ಗಾಂಧಿ ನಾಲ್ಕು ಬಾರಿ ಭೇಟಿ ನೀಡಿದ್ದಾರೆ. 1918, 1921, 1927ರಲ್ಲಿ ಮಹಾತ್ಮ ವಿಜಯಪುರಕ್ಕೆ ಮೂರು ಬಾರಿ ಭೇಟಿ ನೀಡಿದ್ದರು. ಮಾರ್ಚ್‌ 8ರಂದು, 1934ರಲ್ಲಿ ನಾಲ್ಕನೇ ಬಾರಿಗೆ ಬಾಪೂಜಿ ವಿಜಯಪುರಕ್ಕೆ ಬಂದಿದ್ದರು.

ಈ ಸಂದರ್ಭ ಬಾಪೂಜಿ ದೇಶ ವ್ಯಾಪಿ ಅಸ್ಪೃಶ್ಯತಾ ನಿವಾರಣಾ ಯಾತ್ರೆ ಕೈಗೊಂಡಿದ್ದರು. ಬೆಳಗಾವಿಯಿಂದ ಅಥಣಿ ಮಾರ್ಗವಾಗಿ ತಿಕೋಟಾಕ್ಕೆ ಬಂದಿದ್ದರು. ಇಲ್ಲಿನ ಗ್ರಾಮದ ಬಯಲು ಜಾಗದಲ್ಲಿ ಭಾಷಣ ಮಾಡಿದ್ದರು ಎಂಬುದು ಇತಿಹಾಸ.

ADVERTISEMENT

ಮಹಾತ್ಮ ಊರಿಗೆ ಬಂದಾಗ ಮುತೈದೆಯವರು ಆರತಿ ಮಾಡಿ ಸ್ವಾಗತಿಸಿದ್ದರು. ಅವರಲ್ಲಿ ನಾನೊಬ್ಬಳಾಗಿದ್ದೆ ಎಂದು ಗ್ರಾಮದ ಹಿರಿಯಜ್ಜಿ ದಿ.ನೀಲವ್ವ ಇಜೇರಿ ಹೇಳುತ್ತಿದ್ದರು. ಮುಂದೆ ತೊರವಿ ಮೂಲಕ ವಿಜಯಪುರಕ್ಕೆ ಹೋಗಿ ಅಲ್ಲಿಯ ತಾಜ್‌ ಬಾವಡಿ ಪ್ರದೇಶದಲ್ಲಿ ಆಯೋಜಿಸಿದ್ದ ಅಸ್ಪೃಶ್ಯತಾ ನಿವಾರಣಾ ಕುರಿತ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದರು. ನಂತರ ಆಲಮಟ್ಟಿ ಮಾರ್ಗವಾಗಿ ಇಳಕಲ್‌ಗೆ ಹೋದರು ಎಂಬ ದಾಖಲೆಯಿದೆ.

ಗ್ರಾಮದಲ್ಲಿ ಬಾಪೂಜಿ ಭಾಷಣ ಮಾಡಿದ ಜಾಗದಲ್ಲಿ, ಈಚೆಗಿನ ದಶಕಗಳಲ್ಲಿ ಒಂದು ಧ್ವಜ ಕಟ್ಟೆಯನ್ನು ಕಟ್ಟಿ ಗಾಂಧೀಜಿ ವೃತ್ತ ಎಂದು ಕರೆಯಲಾಗುತ್ತಿದೆ. ವಿಜಯಪುರ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಟಿ.ಕೆ.ಹಂಗರಗಿ ಹಲ ವರ್ಷಗಳಿಂದ ಇಲ್ಲಿ ಧ್ವಜಾರೋಹಣ ನಡೆಸುವ ಮೂಲಕ, ದೇಶ ಪ್ರೇಮ ಮೆರೆಯುತ್ತಿದ್ದಾರೆ ಎಂಬುದು ಸ್ಮರಣಾರ್ಹ.

‘ಸ್ವಾತಂತ್ರ್ಯ ಬಂದು ಏಳು ದಶಕ ಗತಿಸಿದೆ. ಆದರೆ ಇಲ್ಲಿವರೆಗೂ ತಿಕೋಟಾದಲ್ಲಿ ಗಾಂಧೀಜಿ ಸ್ಮಾರಕ ನಿರ್ಮಾಣಗೊಂಡಿಲ್ಲ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಾದರೂ ಸ್ಥಳೀಯ ಸಂಸ್ಥೆಗಳು, ರಾಜ್ಯ ಸರ್ಕಾರ ಇತ್ತ ಗಮನ ಹರಿಸಬೇಕಿದೆ. ಮಹಾತ್ಮ ಭಾಷಣ ಮಾಡಿದ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಬೇಕು. ನೆನಪಿನ ಸ್ಮಾರಕವೊಂದನ್ನು ನಿರ್ಮಿಸಬೇಕು’ ಎಂದು ಬೇನಾಳದ ರಾಷ್ಟ್ರಪಿತ ಮಹಾತ್ಮ ಗಾಂಧಿ ಫಿಲಾಸಫಿಕಲ್ ಯೂತ್‌ ಪೋರಂ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.