
ತಿಕೋಟಾ: ಪಟ್ಟಣ, ನಗರ, ಗ್ರಾಮೀಣ ಭಾಗದ ಹಳ್ಳಿಗಳ ರಸ್ತೆ, ಹೆದ್ದಾರಿಯುದ್ದಕ್ಕೂ ಟ್ರ್ಯಾಕ್ಟರ್‌ಗಳ ಡಿಜೆ ಅಬ್ಬರದಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ನಿಯಮ ಬಾಹಿರವಾಗಿ ಡಿಜೆ ಹಚ್ಚುವುದರಿಂದ ಜನರ ನೆಮ್ಮದಿ ಹಾಳಾಗುತ್ತಿದೆ. ಈ ಟ್ರ್ಯಾಕ್ಟರ್‌ಗಳ ಡಿಜೆ ಅಬ್ಬರವನ್ನು ಪೊಲೀಸರು ಹತೋಟಿಯಲ್ಲಿಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಯೋವೃದ್ಧರು, ಹೃದ್ರೋಗದವರು, ಗರ್ಭಿಣಿಯರು, ಚಿಕ್ಕ ಮಕ್ಕಳು ಹಾಗೂ ಇತರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಡಿಜೆ ಅಬ್ಬರದ ಹಾಡುಗಳು ಮಾನಸಿಕವಾಗಿ ಕಿರಿಕಿರಿಯಾಗುತ್ತಿವೆ. ರಸ್ತೆಯುದ್ದಕ್ಕೂ ಜೋರಾದ ಡಿಜೆ ಹಾಡುಗಳು ಹಚ್ಚುತ್ತ ಹೋದರೆ ಟ್ರ್ಯಾಕ್ಟರ್ ಹಿಂಬದಿಯಿಂದ ಬರುವ ವಾಹನದ ಹಾರ್ನ್ ಶಬ್ದ ಕೇಳಿಸದೇ ಹಲವು ಅಪಘಾತಗಳು ಸಂಭವಿಸುತ್ತಿವೆ.
ಶಾಲಾ ಮಕ್ಕಳಿಗೂ ತೊಂದರೆ: ರಸ್ತೆಯ ಸಮೀಪ ಇರುವ ಶಾಲಾ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೂ ಹಾಗೂ ಶಾಲಾ ಶಿಕ್ಷಕರಿಗೂ ಈ ಡಿಜೆ ಅಬ್ಬರದಿಂದ ಮಕ್ಕಳ ಅಭ್ಯಾಸದ ಮೇಲು ಪರಿಣಾಮ ಬೀರುತ್ತಿದೆ. ಟ್ರ್ಯಾಕ್ಟರ್ ಚಾಲಕರಿಗೆ ಈ ಬಗ್ಗೆ ಹಲವು ಬಾರಿ ಮನವರಿಗೆ ಮಾಡಿದರೂ ಶಾಲೆ ಸಮೀಪ ಬಂದಾಗ ಜೋರು ದ್ವನಿಯಲ್ಲಿ ಟ್ರ್ಯಾಕ್ಟರ್ ಡಿಜೆ ಹಚ್ಚುವುದು ಕಂಡು ಬರುತ್ತಿದೆ.
ರಸ್ತೆಯ ಬದಿಯಲ್ಲಿರುವ ತೋಟದ ವಸ್ತಿಯ ಜನಕ್ಕೂ ಸಾಕಷ್ಟು ತೊಂದರೆಯಾಗುತ್ತಿದ್ದು, ರಾತ್ರಿ ಸರಿಯಾಗಿ ನಿದ್ದೆಯಾಗದೇ ರಸ್ತೆ ಬದಿ ಹಾದು ಹೋಗುವ ಟ್ರ್ಯಾಕ್ಟರ್‌ಗಳ ಅತಿಯಾದ ಕಿರಿಕಿರಿಯಿಂದ ನೆಮ್ಮದಿ ಹಾಳಾಗುತ್ತಿದೆ.
ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳು ಸಹ ಹಿಂಬದಿ ಬರುವ ವಾಹನಗಳ ಶಬ್ದ ಲೆಕ್ಕಿಸದೇ ಇಕ್ಕಟ್ಟಾದ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಸದ್ಯ ತೋಟಗಳಲ್ಲಿ ಟ್ರ್ಯಾಕ್ಟರ್ ಗಳೆ (ನೇಗಿಲು) ಹೊಡೆದು ಭೂಮಿ ಹದ ಮಾಡುವ ಸಮಯವಿದ್ದು, ಈ ಗಳೆ ಹೊಡೆಯುವಾಗಲೂ ಹಗಲು, ರಾತ್ರಿ ಅಬ್ಬರದ ಹಾಡುಗಳಿಂದ ಸುತ್ತಮುತ್ತಲಿನವರಿಗೆ ತೊಂದರೆಯಾಗುತ್ತಿದೆ.
ರಸ್ತೆ ಬದಿಯಲ್ಲಿ ನಮ್ಮ ತೋಟದ ವಸ್ತಿಯಿದ್ದು ರಾತ್ರಿಯಿಡಿ ಹಾದು ಹೋಗುವ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳ ಡಿಜೆ ಅಬ್ಬರಕ್ಕೆ ನಿದ್ದೆ ನೆಮ್ಮದಿ ಹಾಳಾಗುತ್ತಿದೆ. ಹಲವು ಬಾರಿ ಹೇಳಿದರೂ ಡ್ರೈವರ್‌ಗಳು ಕೇಳುತ್ತಿಲ್ಲ ಕೂಡಲೇ ಇದನ್ನು ಹತೋಟಿಯಲ್ಲಿಡಬೇಕು.ಎಸ್.ಜಿ.ಮಠಪತಿ ಬಾಬಾನಗರ ರಸ್ತೆ ತೋಟದ ವಸ್ತಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.