
ತಿಕೋಟಾ: ಗ್ರಾಮಗಳ ಅಭಿವೃದ್ಧಿಯಾಗಲು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ತೆರಿಗೆಯನ್ನು ಕಟ್ಟಬೇಕು. ಗ್ರಾಮ ಪಂಚಾಯಿತಿ ಮೂಲಕ ಈಗಾಗಲೇ ತೆರಿಗೆ ವಸೂಲಾತಿ ಕುರಿತು ವ್ಯಾಪಕ ಅರಿವು ಮೂಡಿಸಲಾಗುತ್ತಿದೆ ಎಂದು ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ ಹೇಳಿದರು.
ತಾಲ್ಲೂಕಿನ ತೊರವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ತೆರಿಗೆ ವಸೂಲಾತಿ ಮಹಾ ಆಂದೋಲನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಅವಧಿಗೂ ಮುಂಚೆಯೇ ತೆರಿಗೆ ಪಾವತಿಸುವ ರೂಢಿ ಮಾಡಿಕೊಳ್ಳಬೇಕು. ಗ್ರಾಮಗಳ ಅಭಿವೃದ್ಧಿಯಲ್ಲಿ ಅಧಿಕಾರಿಗಳದ್ದಷ್ಟೇ ಅಲ್ಲ. ಸಾರ್ವಜನಿಕರದ್ದೂ ಪ್ರಮುಖ ಪಾತ್ರ ಇದೆ. ನಿಗದಿತ ಅವಧಿಯಲ್ಲಿ ಗ್ರಾಮ ಪಂಚಾಯತಿಯಲ್ಲಿ ತೆರಿಗೆ ವಸೂಲಾತಿ ಆಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಯೋಜನೆ ರೂಪಿಸಿಕೊಳ್ಳಬೇಕು. ತೆರಿಗೆ ವಸೂಲಿಯಿಂದ ಮಾತ್ರ ಗ್ರಾಮ ಪಂಚಾಯತಿಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎನ್ನುವುದನ್ನು ಗ್ರಾಮಸ್ಥರಿಗೆ ತಿಳಿ ಹೇಳುವ ಮೂಲಕ ತೆರಿಗೆಯನ್ನು ವಸೂಲಿ ಮಾಡಬೇಕು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಶೇ 100 ತೆರಿಗೆ ವಸೂಲಾತಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಅದೇ ರೀತಿ ಲೋಹಗಾಂವ್ ಮತ್ತು ಅರಕೇರಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಂದರ್ಭವಿದ್ದಲ್ಲಿ ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ನಂತರ ತೆರಿಗೆ ವಸೂಲಾತಿ ಹಾಗೂ ಮನರೇಗಾ ಕೂಲಿಕಾರರ ಇಕೆವೈಸಿ ವಿಷಯದಲ್ಲಿ ವಿಳಂಬ ಮಾಡದೇ ಪ್ರಗತಿ ಸಾಧಿಸಲು ಸೂಚಿಸಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶ್ರೀ ತುಂಗಳ, ಪದ್ಮಿನಿ ಬಿರಾದಾರ, ವಿವೇಕಾನಂದ ನಾಯಿಕ, ಕಲ್ಲಪ್ಪ ನಂದರಗಿ, ಗ್ರಾಮ ಪಂಚಾಯತಿಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.