ADVERTISEMENT

ಸಂಚಾರ ದಟ್ಟಣೆ; ನೀಗದ ಬವಣೆ

ನಿಯಮಿತವಾಗಿ ಕಾರ್ಯನಿರ್ವಹಿಸದ ಟ್ರ್ಯಾಫಿಕ್ ಸಿಗ್ನಲ್‌

ಎ.ಸಿ.ಪಾಟೀಲ
Published 30 ಅಕ್ಟೋಬರ್ 2019, 15:53 IST
Last Updated 30 ಅಕ್ಟೋಬರ್ 2019, 15:53 IST
ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎಲ್ಲೆಂದರಲ್ಲಿ ವಾಹನಗಳು ಸಂಚರಿಸುತ್ತಿರುವುದು
ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎಲ್ಲೆಂದರಲ್ಲಿ ವಾಹನಗಳು ಸಂಚರಿಸುತ್ತಿರುವುದು   

ಇಂಡಿ: ಪಟ್ಟಣದಲ್ಲಿ ಸಂಚಾರ ದೀಪಗಳು (ಟ್ರ್ಯಾಫಿಕ್ ಸಿಗ್ನಲ್‌) ನಿಯಮಿತವಾಗಿ ಕಾರ್ಯ ನಿರ್ವಹಿಸದ ಕಾರಣ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.

ಕಚೇರಿ ಹಾಗೂ ವೈಯಕ್ತಿಕ ಕೆಲಸಗಳಿಗಾಗಿ ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಅವರು ತಮ್ಮ ಅನುದಾನದಿಂದ ₹12 ಲಕ್ಷ ವೆಚ್ಚದಲ್ಲಿ ಬಸವೇಶ್ವರ ವೃತ್ತದಲ್ಲಿ ಸಿಗ್ನಲ್ ಅಳವಡಿಸಿದ್ದಾರೆ. ಆದರೆ, 4–5 ತಿಂಗಳಿನಿಂದ ರಸ್ತೆ ದುರಸ್ತಿ ಹಾಗೂ ಪಾದಚಾರಿ ರಸ್ತೆ ನಿರ್ಮಾಣ ನೆಪದಲ್ಲಿ ಸಿಗ್ನಲ್‌ಗಳು ನಿಯಮಿತವಾಗಿ ಕಾರ್ಯ ನಿರ್ವಹಿಸದ ಕಾರಣ ವಾಹನಗಳು ರಸ್ತೆ ನಿಯಮಗಳನ್ನು ಮೀರಿ ಎಲ್ಲೆಂದರಲ್ಲಿ ಸಂಚರಿಸುತ್ತಿವೆ.

‘ಅಪರಾಧ ತಡೆಗಟ್ಟಲು ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಲು ಗ್ರಾಮೀಣ ಹಾಗೂ ನಗರ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗಿದೆ. ಡಿವೈಎಸ್‌ಪಿ, ಸರ್ಕಲ್ ಇನ್‌ಸ್ಪೆಕ್ಟರ್ ಹುದ್ದೆಗಳೂ ಇವೆ. ಇಷ್ಟಾದರೂ ಸುಗಮ ಸಂಚಾರ ವ್ಯವಸ್ಥೆ ಸಾಧ್ಯವಾಗಿಲ್ಲ’ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ADVERTISEMENT

‘ಸಿಗ್ನಲ್ ಸ್ಥಗಿತಗೊಂಡಿದ್ದರಿಂದ ಪಟ್ಟಣದ ಪ್ರಮುಖ ರಸ್ತೆ, ವೃತ್ತಗಳಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಗ್ರಾಮೀಣ ಪ್ರದೇಶದಿಂದ ಬರುವ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ನೂತನವಾಗಿ ಅಧಿಕಾರ ಸ್ವೀಕರಿಸಿರುವ ನಗರ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮಾಳಪ್ಪ ಪೂಜಾರಿ ಅವರು ಸಂಚಾರ ದಟ್ಟಣೆ ಹೋಗಲಾಡಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗಿರುವುದು ಶ್ಲಾಘನೀಯ’ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

‘ಸಿಗ್ನಲ್ ದೀಪ ಆರಂಭಿಸುವುದು, ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವು, ಬೈಕ್ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ನಿಲುಗಡೆ ಕಲ್ಪಿಸುವುದು, ಪ್ರಯಾಣಿಕರನ್ನು ಸಾಗಿಸುವ ಜೀಪ್‌, ಟಂಟಂ ಹಾಗೂ ಟೆಂಪೊಗಳಿಗೆ ನಿಗದಿತ ಸ್ಥಳ ಗುರುತಿಸುವ ಕೆಲಸಗಳು ತಕ್ಷಣಕ್ಕೆ ಆಗಬೇಕಿದೆ. ಈ ಕುರಿತು ಪೊಲೀಸ್ ಇಲಾಖೆ ಗಮನ ಹರಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಿಎಸ್‌ಐ ಮಾಳಪ್ಪ ಪೂಜಾರಿ, ‘ನಾನು ಅಧಿಕಾರ ಸ್ವೀಕರಿಸಿ ಎರಡು ದಿನಗಳಾಗಿವೆ. ಸಂಚಾರ ದಟ್ಟಣೆ ನಿಯಂತ್ರಣ ಮೊದಲ ಆದ್ಯತೆಯಾಗಿದೆ. ಸಂಚಾರ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.