
ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ತರಬೇತಿ ನಿರತ ವಿಮಾನವೊಂದು ಪತನವಾಗಿದೆ. ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
‘ಕಲಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ‘ರೆಡ್ ಬರ್ಡ್’ ಏವಿಯೇಷನ್‌ಗೆ ಸೇರಿದ ಈ ವಿಮಾನವು ಮಂಗಳೂರು ಗ್ರಾಮದ ಹೊಲದಲ್ಲಿ ಪತನವಾಗಿದೆ. ಕ್ಯಾಪ್ಟನ್ ಕುನಾಲ್ ಮಲ್ಹೋತ್ರಾ ಮತ್ತು ತರಬೇತಿ ನಿರತ ಪೈಲಟ್ ಗೌತಮ್ ಶಂಕರ್ ಪಿ.ಆರ್. ವಿಮಾನದಿಂದ ಜಿಗಿದು ಪಾರಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
‘ವಿಮಾನವು ತಲೆ ಕೆಳಗಾಗಿ ಮುರಿದು ಬಿದ್ದಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ’ ಎಂದು ನಿಂಬರಗಿ ಹೇಳಿದ್ದಾರೆ.
ವಿಮಾನ ಪತನವಾಗಿರುವ ಸ್ಥಳದಲ್ಲಿ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ನೋಡಲು ಸೇರಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.