ADVERTISEMENT

ವಿಜಯಪುರ: ಕೋವಿಡ್‌ ರೋಗಿಯೊಬ್ಬರ ಚಿಕಿತ್ಸೆಗೆ ಕನಿಷ್ಠ ₹ 3.5 ಲಕ್ಷ ವೆಚ್ಚ!

ಚಿಕಿತ್ಸಾ ವೆಚ್ಚ ಭರಿಸುತ್ತಿರುವ ಸರ್ಕಾರ; ವೈದ್ಯರ ಅಂದಾಜು ಲೆಕ್ಕ

ಬಸವರಾಜ ಸಂಪಳ್ಳಿ
Published 13 ಮೇ 2020, 19:30 IST
Last Updated 13 ಮೇ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ‘ಕೋವಿಡ್‌-19 ರೋಗಿಯೊಬ್ಬರಿಗೆ 14 ದಿನಗಳ ಕಾಲ ನೀಡಲಾಗುತ್ತಿರುವ ಸಾಮಾನ್ಯ ಚಿಕಿತ್ಸೆಗೆ ಕನಿಷ್ಠ ₹3.5 ಲಕ್ಷ ವೆಚ್ಚವಾಗುತ್ತದೆ’ ಎಂದು ಸರ್ಕಾರಿ ವೈದ್ಯರು ಅಂದಾಜಿಸಿದ್ದರೆ.

ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಮತ್ತಿತರ ತೀವ್ರತರ ತೊಂದರೆಯಿಂದ ಬಳಲುತ್ತಿರುವ ರೋಗಿಗಳಿಗೆ ಕೋವಿಡ್‌ ಸೋಂಕು ತಗುಲಿದರೆ ಅವರಿಗೆ ಆಗುವ ವೈದ್ಯಕೀಯ ವೆಚ್ಚ ಸಾಮಾನ್ಯ ರೋಗಿಗಳಿಗೆ ತಗಲುವ ವೆಚ್ಚ ದು‍ಪ್ಪಟ್ಟು ಹೆಚ್ಚಾಗಿರುತ್ತದೆ.

ಹೌದು, ಸರ್ಕಾರಿ ಲೆಕ್ಕಚಾರದ ಪ್ರಕಾರವೇ ಚಿಕಿತ್ಸಾ ವೆಚ್ಚ ದುಬಾರಿ ಎನಿಸಿದರು ಸಹ ಇದೇ ಚಿಕಿತ್ಸೆಯನ್ನು ಒಂದು ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವುದಾದರೆ ಖರ್ಚು–ವೆಚ್ಚದ ಲೆಕ್ಕಕ್ಕೆ ಮಿತಿಯಿಲ್ಲ. ಇದು ಜನಸಾಮಾನ್ಯರ ಕೈಗೆ ಎಟುಕದ ಚಿಕಿತ್ಸೆ ಆಗಿರುವುದರಿಂದಲೇ ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ನೀಡದೇ ಸರ್ಕಾರವೇ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ ಎಂಬುದು ವೈದ್ಯರ ಅಭಿಪ್ರಾಯ.

ADVERTISEMENT

ವೆಚ್ಚ ನಿಖರವಾಗಿಲ್ಲ:ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಜಯಪುರದ ಕೋವಿಡ್‌ 19 ಜಿಲ್ಲಾಸ್ಪತ್ರೆಯ ನೋಡೆಲ್‌ ಅಧಿಕಾರಿ ಡಾ.ಎಸ್‌.ಎಲ್‌.ಲಕ್ಕಣ್ಣವರ, ಕೋವಿಡ್‌ ರೋಗಿಗಳಿಗೆ ಸರ್ಕಾರ ಆದ್ಯತೆ ಮೇರೆಗೆ ಉಚಿತವಾಗಿ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿರುವುರಿಂದ ಸದ್ಯ ರೋಗಿಯೊಬ್ಬರಿಗೆ ಇಂತಿಷ್ಟೇ ಖರ್ಚಾಗುತ್ತಿದೆ ಎಂದು ನಿಖರವಾಗಿ ಹೇಳಲಾಗದು. ಆದರೆ, ಎಲ್ಲವನ್ನು ಅಂದಾಜು ಲೆಕ್ಕ ಹಾಕಿದರೆ ₹3.5 ಲಕ್ಷಕ್ಕೂ ಹೆಚ್ಚಾಗುತ್ತದೆ’ ಎಂದರು.

ಕೋವಿಡ್‌ಗೆ ನಿರ್ದಿಷ್ಟ ಔಷಧ ಇಲ್ಲವಾಗಿರುವುದರಿಂದ ರೋಗಿಗಳಿಗೆ ನೀಡುವ ಔಷಧ ವೆಚ್ಚಕ್ಕಿಂತ ಗಂಟಲುದ್ರವ ಪರೀಕ್ಷೆ, ಚಿಕಿತ್ಸೆ ಸಂದರ್ಭದಲ್ಲಿ ವೈದ್ಯರು, ನರ್ಸ್‌ಗಳು, ತಂತ್ರಜ್ಞರು ಹಾಗೂ ಆಸ್ಪತ್ರೆ ಸಿಬ್ಬಂದಿ ಬಳಸುವ ದುಬಾರಿ ರಕ್ಷಣಾತ್ಮಕ ಸಾಧನ (ಪಿಪಿಇ ಕಿಟ್‌, ಎನ್‌95 ಮಾಸ್ಕ್‌, ಸ್ಯಾನಿಟೈಜರ್‌)ಗಳಿಗೆ ಹೆಚ್ಚು ಖರ್ಚಾಗುತ್ತದೆ ಎಂದು ತಿಳಿಸಿದರು.

ಸಾಮಾನ್ಯ ಕೋವಿಡ್‌ ರೋಗಿಗಳಿಗೆ ಕನಿಷ್ಠ ನಾಲ್ಕು ಬಾರಿ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತದೆ. ವಿವಿಧ ರೋಗಗಳಿಂದ ಬಳಲುತ್ತಿರುವ ಕೋವಿಡ್‌ ರೋಗಿಗಳಿಗೆ 8ರಿಂದ 10 ಬಾರಿ ಪರೀಕ್ಷೆಗಳು ನಡೆಯುತ್ತವೆ. ಗಂಟಲುದ್ರವದ ಒಂದು ಪರೀಕ್ಷೆಗೆ ಅಂದಾಜು ₹4500 ಆಗುತ್ತದೆ ಎಂದರು.

ಎಲ್ಲ ಜಿಲ್ಲೆಗಳಲ್ಲೂ ಪ್ರಯೋಗಾಲಯ ಇರದಿರುವುದರಿಂದ ವಾಹನಗಳಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಇದಕ್ಕೆ ಆಗುವ ಖರ್ಚು ರೋಗಿಯ ಲೆಕ್ಕಕ್ಕೆ ಸೇರುತ್ತದೆ ಎಂದರು.

ಉಸಿರಾಟದಂತಹ ಗಂಭೀರ ಸಮಸ್ಯೆ ಇರುವವರಿಗೆ ವೆಂಟಿಲೇಟರ್‌ ಅಗತ್ಯ ಇರುತ್ತದೆ. ಇದರ ಶುಲ್ಕ ದಿನವೊಂದಕ್ಕೆ ₹ 5 ಸಾವಿರವಾಗುತ್ತದೆ. ಐಸಿಯುನಲ್ಲಿ ಇದ್ದರೆ ದಿನವೊಂದಕ್ಕೆ ₹20 ಸಾವಿರಕ್ಕೂ ಮೇಲ್ಪಟ್ಟು ವೆಚ್ಚವಾಗುತ್ತದೆ ಎಂದು ಹೇಳಿದರು.

ಕೋವಿಡ್‌ ರೋಗಿಗಳ ಚಿಕಿತ್ಸೆಯಲ್ಲಿ ನಿರತ ವೈದ್ಯರು ಮತ್ತ ನರ್ಸ್‌ಗಳನ್ನು ಮನೆಗಳಿಗೆ ಕಳುಹಿಸದೇ ಖಾಸಗಿ ವಸತಿ ಗೃಹಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ಅಲ್ಲಿ ದಿನವೊಂದಕ್ಕೆ ₹ 2 ಸಾವಿರ ಬಾಡಿಗೆ ಇರುತ್ತದೆ. ಎರಡು ಹೊತ್ತು ಊಟ, ಬೆಳಿಗ್ಗೆ ಉಪಾಹಾರ ನೀಡಬೇಕಾಗುತ್ತದೆ. ಏಳು ದಿನಗಳ ಕೆಲಸದ ಬಳಿಕ ವೈದ್ಯರು, ನರ್ಸ್‌ಗಳನ್ನು 14 ದಿನ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಈ ಸಂದರ್ಭದಲ್ಲಿ ವೈದ್ಯರಿಗೂ ಎರಡು ಬಾರಿ ಗಂಟಲುದ್ರವ ಪರೀಕ್ಷೆ ಮಾಡಲಾಗುತ್ತದೆ. ಅಲ್ಲದೇ, ಅವರ ವೇತನವನ್ನು ಸರ್ಕಾರವೇ ಭರಿಸುವುದರಿಂದ ಇದು ಸಹ ರೋಗಿಗಳ ಚಿಕಿತ್ಸಾ ವೆಚ್ಚಕ್ಕೆ ಸೇರ್ಪಡೆಯಾಗುತ್ತದೆ ಎಂದರು.

ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಬೆಡ್‌ ಮತ್ತು ಬೆಡ್‌ ಸೀಟ್‌ ಮತ್ತಿತರರ ವಸ್ತುಗಳನ್ನು ಮರು ಬಳಸದೇ ವಿಲೇವಾರಿ ಮಾಡಲಾಗುತ್ತದೆ. ಜೊತೆಗೆ ಅವರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಪೋಷಕಾಂಶಯುಕ್ತ ಮಾತ್ರೆ, ಔಷಧ, ಆಹಾರ ನೀಡಲಾಗುತ್ತಿದ್ದು, ಇದಕ್ಕೆ ತಗಲುವ ವೆಚ್ಚ ದುಬಾರಿಯಾಗಿರುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.