ADVERTISEMENT

ವಿಜಯಪುರ | ಕೆರೆ, ಬಾಂದಾರಗಳಿಗೆ ನೀರು ಬಿಡುಗಡೆ: ಕುಡಿಯಲು ಬಳಸಿ–ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 3:21 IST
Last Updated 4 ಜನವರಿ 2026, 3:21 IST
ತುಬಚಿ-ಬಬಲೇಶ್ವರ ಯೋಜನೆಯ ಜಾಕವೆಲ್ ಚಿತ್ರ
ತುಬಚಿ-ಬಬಲೇಶ್ವರ ಯೋಜನೆಯ ಜಾಕವೆಲ್ ಚಿತ್ರ   

ವಿಜಯಪುರ: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ತಿಕೋಟಾ ತಾಲೂಕಿನ ಕೆರೆ ಮತ್ತು ಬಾಂದಾರಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ರೈತರು ಪೋಲಾಗದಂತೆ ಮತ್ತು ಕುಡಿಯಲು ಮಾತ್ರ ನೀರನ್ನು ಬಳಸುವಂತೆ ಸಚಿವ ಎಂ.ಬಿ.ಪಾಟೀಲ ಮನವಿ ಮಾಡಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಿಕೋಟಾ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷದಲ್ಲಿ ಜನ- ಜಾನುವಾರುಗಳಿಗೆ ಕುಡಿಯಲು ನೀರು ಪೂರೈಸುವ ಸಲುವಾಗಿ ಕೆರೆಗಳಿಗೆ ನೀರು ತುಂಬಿಸಲು ನ.14ರಂದು ನಡೆದ ನೀರಾವರಿ ಸಲಹಾ ಸಮತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಹಂಚಿಕೆಯಾದ 0.75 ಟಿಎಂಸಿ ನೀರನ್ನು ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಕೂಡಲೇ ಬಿಡುಗಡೆ ಮಾಡುವಂತೆ ಡಿ.24ರಂದು ಬೆಳಗಾವಿ ಉತ್ತರ ವಲಯದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಪಂಪ್‌ಗಳನ್ನು ಪ್ರಾರಂಭ ಮಾಡುವ ಮೂಲಕ ಅಧಿಕಾರಿಗಳು ನೀರು ಬಿಡುಗಡೆ ಮಾಡಿದ್ದಾರೆ.

ಈ ನೀರು ಬಿಡುಗಡೆಯಿಂದಾಗಿ ತಿಕೋಟಾ ತಾಲ್ಲೂಕಿನ ಸುಮಾರು 25 ಕೆರೆ ಮತ್ತು 60 ಬಾಂದಾರಗಳಿಗೆ ನೀರು ಬರಲಿದ್ದು, 21 ಗ್ರಾಮಗಳ ನೀರಿನ ಸಮಸ್ಯೆ ನೀಗಲಿದೆ.

ADVERTISEMENT

ಈಗ ಬಿಡುಗಡೆ ಮಾಡಲಾಗಿರುವ ನೀರು ಕಾಲುವೆಯಲ್ಲಿ ಸರಾಗವಾಗಿ ಹರಿಯಲು ರೈತರು ಸಹಾಯ ಮಾಡಬೇಕು. ಅಲ್ಲದೇ, ಜನ ಮತ್ತು ಜಾನುವಾರುಗಳಿಗೆ ಕುಡಿಯಲು ಮಾತ್ರ ಬಳಸಬೇಕು ಎಂದು ಸಚಿವ ಎಂ.ಬಿ.ಪಾಟೀಲ ರೈತರಲ್ಲಿ ಮನವಿ ಮಾಡಿದ್ದಾರೆ.

ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ಈಗ ನೀರು ಬಿಡುಗಡೆ ಮಾಡಿರುವುದರಿಂದ ಈ ಯೋಜನೆಯ ವ್ಯಾಪ್ತಿಯ ಜಮಖಂಡಿ ತಾಲೂಕಿನ ಮೂರು ಮತ್ತು ಅಥಣಿ ತಾಲೂಕಿನ ನಾಲ್ಕು ಗ್ರಾಮಗಳಿಗೂ ನೀರು ಸಿಗಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.