ADVERTISEMENT

ಸಿದ್ದೇಶ್ವರ ಶ್ರೀಗಳಿಲ್ಲದ ಎರಡು ವರ್ಷ...

ಬಸವರಾಜ ಸಂಪಳ್ಳಿ
Published 28 ಡಿಸೆಂಬರ್ 2024, 23:35 IST
Last Updated 28 ಡಿಸೆಂಬರ್ 2024, 23:35 IST
<div class="paragraphs"><p>ವಿಜಯಪುರದ ಜ್ಞಾನಯೋಗಾಶ್ರಮದ ಆವರಣದಲ್ಲಿ ಇಡಲಾಗಿರುವ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ನಮಿಸುತ್ತಿರುವ ಭಕ್ತರು ಚಿತ್ರಗಳು: ಸಂಜೀವ ಅಕ್ಕಿ</p></div>

ವಿಜಯಪುರದ ಜ್ಞಾನಯೋಗಾಶ್ರಮದ ಆವರಣದಲ್ಲಿ ಇಡಲಾಗಿರುವ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ನಮಿಸುತ್ತಿರುವ ಭಕ್ತರು ಚಿತ್ರಗಳು: ಸಂಜೀವ ಅಕ್ಕಿ

   

ಭಕ್ತರು ದೊಡ್ಡ ಮಠ ಕಟ್ಟೊಣ ಎಂದರು. ಅವರು ಬೇಡ ಎಂದರು. ಮಹಲು ಕಟ್ಟೋಣ ಎಂದರು. ಬೇಡ ಎಂದರು. ಕಾರು ಕೊಡುತ್ತೇವೆ ಎಂದರು. ಬೇಡವೇ ಬೇಡ ಎಂದರು. ಅಂತಿಮ ದಿನದಲ್ಲಿ ನಿಮ್ಮ ಆರೋಗ್ಯ ಸುಧಾರಣೆಗೆ ಔಷಧ ಕೊಡುತ್ತೇವೆ ಎಂದು ಪ್ರಧಾನಿಯೇ ಫೋನ್‌ ಮಾಡಿದರು. ಅದಕ್ಕೂ ಬೇಡ ಎಂದರು. ನಿಮ್ಮ ನೆನಪಿಗೆ ಸ್ಮಾರಕ ಮಾಡೋಣ ಎಂದರು. ಅದುವೂ ಬೇಡ ಎಂದರು. ಹೀಗೆ ಬೇಡವೇ ಬೇಡ ಎನ್ನುತ್ತಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಬಯಲಲ್ಲಿ ಬಯಲಾಗಿ ಎರಡು ವರ್ಷಗಳು ಗತಿಸಿವೆ.

ಜ್ಞಾನಯೋಗಾಶ್ರಮ ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ ಸುತ್ತಾಡಿದರೆ ಶ್ರೀಗಳು ಅಗಲಿ ಎರಡು ವರ್ಷವಾಯಿತು ಅನಿಸುವುದೇ ಇಲ್ಲ. ಅವರ ಆದರ್ಶಪ್ರಾಯವಾದ ಬದುಕು, ಪ್ರವಚನ, ನೀತಿ ಬೋಧನೆಯನ್ನು ಭಕ್ತರು, ಅನುಯಾಯಿಗಳು ಪ್ರತಿ ದಿನವೂ ಮೆಲುಕು ಹಾಕುವ ಮೂಲಕ ಪ್ರಕೃತಿ, ಪರಿಸರ ಸೇರಿದಂತೆ ಎಲ್ಲೆಲ್ಲೂ ಅವರನ್ನೇ ಕಾಣತೊಡಗಿದ್ದಾರೆ. ಹೀಗೆ ಶ್ರೀಗಳನ್ನು ತಮ್ಮ ತಮ್ಮ ರೀತಿಯಲ್ಲಿ ಜೀವಂತವಾಗಿಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ADVERTISEMENT

‘ನನ್ನ ಯಾವುದೇ ಸ್ಮಾರಕ ಮಾಡಕೂಡದು’ ಎಂದು ಸಿದ್ದೇಶ್ವರ ಶ್ರೀಗಳೇ ಅಂತಿಮ ಅಭಿವಂದನಾ ಪತ್ರ (ವಿಲ್‌) ದಲ್ಲಿ ಬರೆದಿಟ್ಟಿದ್ದಾರೆ. ಆದರೆ, ಭಕ್ತರು, ಶಿಷ್ಯ ಕೋಟಿ ಕೇಳಬೇಕಲ್ಲ. ಮನದಲ್ಲಿ ಶ್ರೀಗಳ ನಾಮಸ್ಮರಣೆ ಸದಾ ಇರಬೇಕು, ನಾವು ನೋಡುವ ಪ್ರತಿಯೊಂದರಲ್ಲೂ ಶ್ರೀಗಳಿರಬೇಕು ಎಂಬ ತುಡಿತ, ಹಂಬಲ ಅವರ ಕಾಲಾನಂತರದಲ್ಲಿ ಹೆಚ್ಚಾಗಿಸಿಕೊಂಡಿದ್ದಾರೆ. 

ಅದು ಶ್ರೀಗಳ ಮೇಲಿನ ಪ್ರೀತಿಯಿಂದಲೋ, ಭಕ್ತಿಯಿಂದಲೋ, ತತ್ವ–ಚಿಂತನೆಗಾಗಿಯೋ, ಅಭಿಮಾನಕ್ಕಾಗಿಯೋ, ತೋರಿಕೆಗಾಗಿಯೋ, ಒಟ್ಟಾರೆ ಸಿದ್ದೇಶ್ವರ ಶ್ರೀಗಳ ಹೆಸರು, ಭಾವಚಿತ್ರವನ್ನು ಕಂಡ, ಕಂಡ ಕಡೆಗಳಲ್ಲಿ ಬಳಸುವುದು ಜಾಸ್ತಿಯಾಗಿದೆ.

ಸಿದ್ದೇಶ್ವರ ಶ್ರೀಗಳು ಇಲ್ಲವಾದರೂ ಅವರ ಸ್ಮರಣೆ ಮೊದಲಿಗಿಂತ ಹೆಚ್ಚಾಗಿದೆ. ಶ್ರೀಗಳಿಲ್ಲ ಎಂಬ ಭಾವ ಮನಸ್ಸಿಗೆ ಆವರಿಸದಂತೆ ತಮಗೆ ಜನಿಸುವ ಮಕ್ಕಳಿಗೆ ಶ್ರೀಗಳ ಹೆಸರನ್ನು ಇಡುತ್ತಿದ್ದಾರೆ. ಅಷ್ಟೇ ಅಲ್ಲ, ಉದ್ಯಾನ, ಚಾರಣಧಾಮ, ಬಸ್‌ ನಿಲ್ದಾಣ, ಮನೆ, ಅಂಗಡಿ, ಮಳಿಗೆ, ವಾಹನ, ಹೋಟೆಲ್‌, ಆಸ್ಪತ್ರೆ, ಬಡಾವಣೆ, ಆಟೊ ನಿಲ್ದಾಣ, ಶಾಲೆ, ಕಾಲೇಜು, ಕೋಚಿಂಗ್‌ ಸೆಂಟರ್‌, ವೃತ್ತ, ರಸ್ತೆಗಳಿಗೆ ಶ್ರೀಗಳ ಹೆಸರಿಟ್ಟು, ಮನೆ, ಮನೆಗಳಲ್ಲಿ ಭಕ್ತರು ಸ್ವಾಮೀಜಿಯ ಪೋಟೊ ಇಟ್ಟು ಪೂಜಿಸುವ ಮೂಲಕ ಸದಾ ಸ್ಮರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇಷ್ಟೇ ಅಲ್ಲದೇ, ಮದುವೆ, ನಾಮಕರಣ, ಗೃಹ ಪ್ರವೇಶ, ಸಭೆ ಸಮಾರಂಭದಲ್ಲಿ ಶ್ರೀಗಳ ಭಾವಚಿತ್ರವನ್ನು, ಅವರ ಅಂತಿಮ ಅಭಿವಂದನ ಪತ್ರವನ್ನು, ಅವರು ಬರೆದ ಪುಸ್ತಕಗಳನ್ನು ಪ್ರೀತಿ–ಅಭಿಮಾನದಿಂದ ಹಂಚುವ ಮೂಲಕ ಶ್ರೀಗಳನ್ನು ಜೀವಂತವಾಗಿಸುವ ಕಾಯಕದಲ್ಲಿ ಭಕ್ತ ವೃಂದ ನಿರತವಾಗಿದೆ.

ವಿಜಯಪುರದಲ್ಲಿ ನಡೆಯುವ ಸರ್ಕಾರಿ ಅಥವಾ ಖಾಸಗಿ ಸಭೆ–ಸಮಾರಂಭಗಳಲ್ಲಿ ‘ಸಂತನೆಂದರೆ ಯಾರು, ದಿವ್ಯತೆಯ ಅರಿತವನು, ಸರಳತೆಯ ಸೂತ್ರದಲಿ ಸುಖವ ಕಂಡವನು...’ (ಕವಿ ಕೆ.ಸಿ.ಶಿವಪ್ಪ) ಎಂಬ ಗೀತೆಯನ್ನು ಹಾಡಿ ತಮ್ಮ ಮನವ ಸಂತೈಸಿಕೊಳ್ಳುವುದು ಸಂಪ್ರದಾಯವಾಗಿದೆ.

ಅವರು ಬಾಳಿ ಬದುಕಿ, ಪ್ರವಚನ ನೀಡಿದ್ದ ಜ್ಞಾನಯೋಗಾಶ್ರಮದ ಜ್ಞಾನ ಭಂಡಾರದಲ್ಲಿ ಪ್ರದರ್ಶನ, ಮಾರಾಟಕ್ಕೆ ಇಡಲಾಗಿರುವ ಸಿದ್ದೇಶ್ವರ ಶ್ರೀಗಳ ಪೋಟೊ, ಅವರ ಕೃತಿಗಳು, ಪ್ರವಚನದ ಆಡಿಯೊ, ವಿಡಿಯೊ, ಶ್ರೀಗಳ ಅಮೃತವಾಣಿ ಪುಸ್ತಕಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಪ್ರತಿನಿತ್ಯ ಜನರು ಆಶ್ರಮಕ್ಕೆ ಭೇಟಿ ನೀಡಿ, ಶ್ರೀಗಳ ಭಾವಚಿತ್ರದ ದರ್ಶನ ಪಡೆದು ಭಕ್ತಿಯಿಂದ ನಮಿಸುತ್ತಾರೆ. ಆಶ್ರಮದ ಗಿಡ–ಮರಗಳ ನೆರಳಲ್ಲಿ ಕುಳಿತು ‘ಯುಟ್ಯೂಬ್‌’ನಲ್ಲಿರುವ ಶ್ರೀಗಳ ಅಮೃತವಾಣಿ, ಪ್ರವಚನಗಳ ಆಡಿಯೊವನ್ನು ಕೇಳಿ ಅಧ್ಯಾತ್ಮದ ಅನುಭೂತಿಯನ್ನು ಪಡೆಯುತ್ತಾರೆ. ಆಶ್ರಮದ ಗಿಡ–ಮರಗಳಲ್ಲಿ ಕುಳಿತ ಪಕ್ಷಿ ಸಂಕುಲಗಳ ಚಿಲಿಪಿಲಿ ನಾದವನ್ನು ಕೇಳಿ ಮನಸ್ಸನ್ನು ಹಗರು ಮಾಡಿಕೊಳ್ಳುತ್ತಾರೆ. ತಮ್ಮ ಕೈಲಾದಷ್ಟು ಧನ, ಧಾನ್ಯವನ್ನು ಆಶ್ರಮಕ್ಕೆ ನೀಡಿ ಹೋಗುತ್ತಾರೆ. ಹಿಂದಿಗಿಂತಲೂ ಹೆಚ್ಚು ಅನ್ನ ದಾಸೋಹ ನಿರಂತರವಾಗಿ ನಡೆಯುತ್ತಿದೆ.  

ಶ್ರೀಗಳು ಆಶ್ರಮದ ಪರಿಸರದಲ್ಲಿ ಪ್ರಶಾಂತ ವಾತಾವರಣವನ್ನು ಬಯಸುತ್ತಿದ್ದರು, ಆಶ್ರಮದಲ್ಲಿ ಶ್ರೀಗಳಿದ್ದಾಗ ಏನಾದರೂ ಅಂದಾರು ಎಂಬ ಅವ್ಯಕ್ತ ಭಯದಿಂದ ಜನ ಅಂಜುತ್ತಿದ್ದರು, ಎಂಥವರೇ ಬಂದರು ಶಾಂತತೆಯನ್ನು ಕಾಪಾಡುತ್ತಿದ್ದರು. ಆದರೆ ಅವರು ಅಗಲಿದ ನಂತರ ಇದೇ ಮಾತನ್ನು ಹೇಳಲು ಆಗುತ್ತಿಲ್ಲ ಎನ್ನುವ ಬೇಸರ ಭಕ್ತರಲ್ಲಿದೆ.

‘ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲ ಹೇಳಿ ಆಗಿದೆ, ಉಳಿದಿರುವುದು ಆಚರಣೆ ಮಾತ್ರ’ ಎನ್ನುವ  ಭೂಮಿತೂಕದ ಮಾತನ್ನು ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ. ಈಗ ಏನಿದ್ದರೂ ಆಚರಣೆ ಮಾತ್ರ ಉಳಿದಿದೆ. ಈ ಮೂಲಕ ಶ್ರೀಗಳನ್ನು ಜೀವಂತವಾಗಿ ಇರಿಸಿಕೊಳ್ಳಬೇಕು.

ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿರುವ ಜ್ಞಾನ ಭಂಡಾರದಲ್ಲಿ ಲಭ್ಯವಿರುವ ಸಂತ ಸಿದ್ದೇಶ್ವರ ಶ್ರೀಗಳು ಮತ್ತು ‘ವೇದಾಂತ ಕೇಸರಿ’ ಮಲ್ಲಿಕಾರ್ಜುನ ಶ್ರೀಗಳ ಫೋಟೊಗಳು ಹಾಗೂ ವಿವಿಧ ಗ್ರಂಥಗಳು  –ಪ್ರಜಾವಾಣಿ ಚಿತ್ರ 
ವಿಜಯಪುರ ನಗರದ ಆಶ್ರಮ ರಸ್ತೆಯ ವೃತ್ತವೊಂದಲ್ಲಿ ಸ್ಥಳಿಯರು ಸಿದ್ದೇಶ್ವರ ಶ್ರೀಗಳ ಫೋಟೊವನ್ನು ಇಟ್ಟು ಶ್ರೀಗಳ ಹೆಸರನ್ನು ನಾಮಕರಣ ಮಾಡಿರುವುದು   –ಪ್ರಜಾವಾಣಿ ಚಿತ್ರ 
ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ಇರುವ ಆಟೋ ನಿಲ್ದಾಣದ ಒಳಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಪರೂಪದ ಫೋಟೊಗಳನ್ನು ಪ್ರದರ್ಶನಕ್ಕೆ ಇಟ್ಟು ಶ್ರೀಗಳ ಅಂತಿಮ ಅಭಿವಂದನಾ ಪತ್ರದಲ್ಲಿ ಉಲ್ಲೇಖಿಸಿದ್ದ ಅಲ್ಲಮ ಪ್ರಭುವಿನ ವಚನವನ್ನು ಬರೆಯಲಾಗಿದೆ.  –ಪ್ರಜಾವಾಣಿ ಚಿತ್ರ
ಶ್ರೇಷ್ಠ ಸಂತನಿದ್ದ ಆಶ್ರಮವನ್ನು ಮೂಲ ಆಶಯಕ್ಕೆ ಚ್ಯುತಿಯಾಗದಂತೆ ಜತನ ಮಾಡಬೇಕಿದೆ. ತತ್ವ ಜ್ಞಾನಾಧಾರಿತ ಚಟುವಟಿಕೆಗಳಿಗೆ ಆದ್ಯತೆ ಸಿಗಬೇಕಿದೆ. ಆಶ್ರಮದ ವಾತಾವರಣ ಕೆಡದಂತೆ ಕಾಪಾಡಬೇಕಿದೆ
ರವೀಂದ್ರ ಲೋಣಿ ಶ್ರೀಗಳ ಒಡನಾಡಿ
‘ಅವರಿಲ್ಲ ಎನಿಸಿಲ್ಲ....’
‘ಶ್ರೀಗಳು ಭೌತಿಕವಾಗಿ ಇಲ್ಲದೆ ಎರಡು ವರ್ಷ ಆಯ್ತು. ಆದರೆ ಅವರಿಲ್ಲ ಎಂದು ನಮಗೆ ಎಂದೂ ಅನಿಸಿಲ್ಲ. ಇಲ್ಲೇ ಯಾವುದೋ ಹಳ್ಳಿಗೆ ಪ್ರವಚನಕ್ಕೆ ಹೋಗಿದ್ದಾರೆ ಅನಿಸುತ್ತಿದೆ. ಅಪ್ಪಗೋಳು ಇಲ್ಲ ಎನಿಸುತ್ತಿಲ್ಲ. ಅವರ ಶಕ್ತಿ ನಮ್ಮಲ್ಲಿ ಕೆಲಸ ಮಾಡುತ್ತಿದೆ’ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿ ಹೇಳುತ್ತಾರೆ. ‘ಶ್ರೀಗಳ ತತ್ವ ಚಿಂತನೆ ವಿಚಾರಧಾರೆಗಳು ಜನಮಾನಸದಿಂದ ಮರೆಯಾಗಬಾರದು ಎಂಬ ಕಾರಣಕ್ಕೆ ಗುರು ನಮನ ಕಾರ್ಯಕ್ರಮ ನಡೆಸಿದ್ದೇವೆ. ಶ್ರೀಗಳು ಅವರ ಗುರುಗಳಿಗಾಗಿ ಗುರು ನಮನ ಕಾರ್ಯಕ್ರಮ ಮಾಡುತ್ತಿದ್ದರು. ಈಗ ನಮ್ಮ ಗುರುಗಳದ್ದು ನಾವು ಮಾಡುತ್ತಿದ್ದೇವೆ. ಇದು ನಮ್ಮ ಕರ್ತವ್ಯ. ಶ್ರೀಗಳು ಬಯಸದಿದ್ದರೂ ನಮ್ಮ ಗುರುಗಳ ಆರಾಧನೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಕೆಲವೊಬ್ಬರು ಶ್ರೀಗಳು ನೆನಪುಳಿಯಬೇಕು ಎಂಬ ಕಾರ್ಯದಲ್ಲಿ ತೊಡಗಿದ್ದಾರೆ. ಶ್ರೀಗಳು ಜನರ ಮನದಲ್ಲಿ ಸದಾಕಾಲ ಉಳಿಯಬೇಕು. ಹಾಗಂತ ಅವರ ತತ್ವಕ್ಕೆ ವಿರುದ್ಧವಾದುದ್ದು ಮಾಡಲು ಅವಕಾಶವಿಲ್ಲ. ಶ್ರೀಗಳು ಯಾವುದು ಮಾಡಬಾರದು ಎಂದಿದ್ದರೋ ಅದನ್ನು ಮಾಡಬಾರದು ಜನರೇ ಅದನ್ನು ತಿಳಿದುಕೊಳ್ಳಬೇಕು’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.