ಆಲಮಟ್ಟಿ: ಆಲಮಟ್ಟಿ ಜಲಾಶಯವನ್ನು 519.60 ಮೀಟರ್ ನಿಂದ 524.256 ಮೀಟರ್ ವರೆಗೆ ಎತ್ತರಿಸಿದಾಗ ಬಾಧಿತಗೊಳ್ಳುವ 1,33,867 ಎಕರೆ ಪ್ರದೇಶದ ಭೂಸ್ವಾಧೀನಕ್ಕೆ ಒಪ್ಪಂದದ ಐ ತೀರ್ಪಿನ ಪ್ರಕಾರ ಪರಿಹಾರ ನೀಡಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಪ್ರಕ್ರಿಯೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಗುರುವಾರ ಆದೇಶಿಸಿದೆ.
ಸೆ.16 ರಂದು ಜರುಗಿದ್ದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಿದಂತೆ ಮುಳುಗಡೆಗೊಳ್ಳುವ ನೀರಾವರಿ ಜಮೀನಿಗೆ ಎಕರೆಗೆ ₹40 ಲಕ್ಷ, ಖುಷ್ಕಿ ಜಮೀನಿಗೆ ₹ 30 ಲಕ್ಷ, ಕಾಲುವೆಗಳ ಜಾಲಕ್ಕೆ ವಶಪಡಿಸಿಕೊಳ್ಳುವ ನೀರಾವರಿ ಜಮೀನಿಗೆ ₹30 ಲಕ್ಷ, ಖುಷ್ಕಿ ಜಮೀನಿಗೆ ₹ 25 ಲಕ್ಷ ನಿಗದಿ ಮಾಡಿ ಆದೇಶಿಸಲಾಗಿತ್ತು. ಒಪ್ಪಂದ ಐತೀರ್ಪು ದರಗಳು ಕಾನೂನಾತ್ಮಕ, ಆಡಳಿತಾತ್ಮಕ ವಿಷಯಗಳಿಗೆ ಅನುಮೋದನೆ ನೀಡಿ ಜಲಸಂಪನ್ಮೂಲ ಇಲಾಖೆ ಆದೇಶಿಸಿದೆ.
1.33 ಲಕ್ಷ ಎಕರೆ ಭೂ ಸ್ವಾಧೀನ:
ಮುಳುಗಡೆಯಾಗುವ ಜಮೀನು 75,563 ಎಕರೆ, ಪುನರ್ವಸತಿ ಕೇಂದ್ರದ ನಿರ್ಮಾಣಕ್ಕೆ 6,467 ಎಕರೆ, ಕಾಲುವೆಗಳ ಜಾಲ ನಿರ್ಮಾಣಕ್ಕೆ 51,837 ಎಕರೆ ಸೇರಿ 1,33,867 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕಿದೆ.
ಆ ಪೈಕಿ ಸದ್ಯ 29,566 ಎಕರೆ ಪ್ರದೇಶಕ್ಕೆ ಭೂಸ್ವಾಧೀನದ ಪರಿಹಾರದ ಐ ತೀರ್ಪು ಹೊರಡಿಸಲಾಗಿದೆ. 44,947 ಎಕರೆ ಜಮೀನು ಭೂಸ್ವಾಧೀನ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿವೆ. 59,354 ಎಕರೆ ಪ್ರದೇಶ ಭೂಸ್ವಾಧೀನ ಪ್ರಕ್ರಿಯೆ ಇನ್ನಷ್ಟೇ ಆರಂಭಗೊಳ್ಳಬೇಕಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
28,338 ಪ್ರಕರಣಗಳು:
29,566 ಎಕರೆ ಭೂಸ್ವಾಧೀನದ ಅವಾರ್ಡ್ ಮಾಡಲಾಗಿದ್ದು, ಆ ಪೈಕಿ 28,499 ಎಕರೆ ಜಮೀನುಗಳಿಗೆ ಹೆಚ್ಚಿನ ಭೂಪರಿಹಾರ ಕೋರಿ ವಿವಿಧ ಜಿಲ್ಲಾ ನ್ಯಾಯಾಲಯಗಳು ಹಾಗೂ ಧಾರವಾಡ, ಕಲಬುರಗಿ ಹೈಕೋರ್ಟ್ ನಲ್ಲಿ ಒಟ್ಟಾರೇ 28,338 ಪ್ರಕರಣಗಳು ದಾಖಲಾಗಿವೆ. ಇಷ್ಟೆಲ್ಲ ಪ್ರಕರಣಗಳಲ್ಲಿ ಸರ್ಕಾರ ಸಮರ್ಥವಾಗಿ ವಾದ ಮಂಡಿಸಬೇಕಿದೆ.
ಅದಕ್ಕಾಗಿ ಒಪ್ಪಂದದ ಮೇರೆಗೆ (ಕನ್ಸೆಂಟ್ ಅವಾರ್ಡ್) ಒಂದೇ ಬಾರಿಗೆ ಪರಿಹಾರ ನೀಡಿ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಲೋಕ ಅದಾಲತ್ ಮತ್ತು ಮಧ್ಯಸ್ಥಿಕೆಯ ಮೂಲಕ ನ್ಯಾಯಾಲಯದ ಪ್ರಕರಣಗಳ ಇತ್ಯರ್ಥಕ್ಕಾಗಿ ರಾಜ್ಯದ ಕಾನೂನು ತಂಡ ಕ್ರಮ ವಹಿಸಲು ಸರ್ಕಾರ ಆದೇಶಿಸಿದೆ. ಕನ್ಸೆಂಟ್ ಅವಾರ್ಡ್ ಗಳ ಮೂಲಕವೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಲಾಗಿದೆ.
ಪುನರ್ವಸತಿಗೆ ಪರ್ಯಾಯ ನೀತಿ:
ಯೋಜನೆ ಅಡಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಲ್ಪಿಸುವ ಬದಲಾಗಿ ಪರಿಹಾರ ಪ್ಯಾಕೇಜ್ ನೀಡಲು ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಪರ್ಯಾಯ ನೀತಿಯನ್ನು ರೂಪಿಸಿ, ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಲು ಪುನರ್ವಸತಿ ಆಯುಕ್ತರಿಗೆ ಸೂಚಿಸಲಾಗಿದೆ.
5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ:
ಕರ್ನಾಟಕಕ್ಕೆ ಲಭ್ಯವಾದ 173 ಟಿಎಂಸಿ ಅಡಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ 130 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಯುಕೆಪಿ 3 ನೇ ಹಂತದ 9 ಉಪಯೋಜನೆಗಳ ಅನುಷ್ಠಾನದ ಮೂಲಕ ಉತ್ತರಕರ್ನಾಟಕದ ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರ್ಗಿ, ಯಾದಗಿರಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲು ಆಲಮಟ್ಟಿ ಜಲಾಶಯ ಎತ್ತರಿಸಿ 130 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಬೇಕಿದೆ.
ಪ್ರಾಧಿಕಾರ ರಚನೆಗೆ ಕ್ರಮ:
2013 ರ ಹೊಸ ಭೂಸ್ವಾಧೀನ ಕಾಯ್ದೆಯ ಪ್ರಕಾರ, "ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪ್ರಾಧಿಕಾರ" ರಚಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಅಧಿಕಾರಿ, ಸಿಬ್ಬಂದಿಯನ್ನು ನೇಮಿಸಲು ಕಂದಾಯ, ಕಾನೂನು ಇಲಾಖೆಗೆ ಸೂಚಿಸಿದೆ. ಈ ಪ್ರಾಧಿಕಾರ ರಚನೆಯಿಂದ ರೈತರು ಹೆಚ್ಚಿನ ಪರಿಹಾರಕ್ಕೆ ಕೋರ್ಟ್ ಗೆ ಹೋಗುವ ಮೊದಲು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು.
ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆಗೆ ಪೂರ್ಣ ಪ್ರಮಾಣದಲ್ಲಿ ಆಯುಕ್ತರ ಹುದ್ದೆಗೆ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಲು ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸೂಚಿಸಿದೆ.
₹75 ಸಾವಿರ ಕೋಟಿ ಹೆಚ್ಚುವರಿ ಅನುದಾನ:
ಭೂಸ್ವಾಧೀನ ಮತ್ತೀತರ ಪ್ರಕ್ರಿಯೆಗಳಿಗೆ ಅಗತ್ಯವಿರುವ ಹೆಚ್ಚುವರಿ ಸುಮಾರು ₹75 ಸಾವಿರ ಕೋಟಿಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಭರಿಸಲು ₹18ಸಾವಿರ ಕೋಟಿ ವಾರ್ಷಿಕ ಅನುದಾನವನ್ನು ಜಲಸಂಪನ್ಮೂಲ ಇಲಾಖೆಗೆ ಒದಗಿಸಲು ಸರ್ಕಾರ ಸೂಚಿಸಿದೆ.
ಸರ್ಕಾರ ಆದೇಶದಿಂದ ಯುಕೆಪಿಯ ಕಗ್ಗಂಟಾಗಿರುವ ಹಾಗೂ ನಿಧಾನವಾಗಿ ಸಾಗುತ್ತಿರುವ ಭೂಸ್ವಾಧೀನ ಸಮಸ್ಯೆಗಳು ಬಗೆಹರಿದು ಇಡೀ ಯುಕೆಪಿ ಯೋಜನೆಗೆ ಚುರುಕು ದೊರೆಯಲಿದೆ–ಜಿ.ಸಿ. ಮುತ್ತಲದಿನ್ನಿ ಸಂಚಾಲಕ ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆ ಬೇನಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.