ADVERTISEMENT

ರೈತ ವಿರೋಧಿ ಕಾಯ್ದೆ ಬೇಷರತ್ತಾಗಿ ಹಿಂಪಡೆಯಿರಿ

ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 11:18 IST
Last Updated 4 ಡಿಸೆಂಬರ್ 2020, 11:18 IST
ಎಂ.ಕೃಷ್ಣಮೂರ್ತಿ
ಎಂ.ಕೃಷ್ಣಮೂರ್ತಿ   

ವಿಜಯಪುರ: ಕೃಷಿ ವಿರೋಧಿ ಮಸೂದೆಗಳನ್ನು ಕೇಂದ್ರ ಸರ್ಕಾರ ಬೇಷರತ್ತಾಗಿ ಹಿಂಪಡೆಯಬೇಕು ಎಂದು ಬಹುಜನ ಸಮಾಜ ಪಾರ್ಟಿರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆಉತ್ತರ ಭಾರತದ ರೈತರು ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಬಿಎಸ್‌ಪಿ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ಕೃಷಿ ಕಾಯ್ದೆಗಳ ಸಾಧಕ–ಬಾಧಕ ಕುರಿತು ಚರ್ಚಿಸಲು ಸಂಸತ್‌ ವಿಶೇಷ ಅಧಿವೇಶನ ಕರೆಯಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ಕೃಷಿ ತಿದ್ದುಪಡಿ ಕಾಯ್ದೆಗಳಿಂದ ರೈತರ ಆದಾಯ ದುಪ್ಪಟ್ಟಾಗುತ್ತದೆ ಎಂಬ ಪ್ರಧಾನಿ ಹೇಳಿಕೆಯನ್ನು ನಂಬುವಷ್ಟು ರೈತರು ಮೂರ್ಖರಲ್ಲ ಎಂದರು.

ಅಧಿಕ ಮುಖಬೆಲೆಯ ನೋಟ್‌ ರದ್ದು ಮಾಡುವಾಗ ಮತ್ತು ಜಿಎಸ್‌ಟಿ ಜಾರಿ ಮಾಡುವ ಸಂದರ್ಭದಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಲಿದೆ. ವಿದೇಶದಲ್ಲಿರುವ ಕಪ್ಪು ಹಣ ದೇಶಕ್ಕೆ ಮರಳಲಿದೆ, ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಣ ಹಾಕಲಿದ್ದೇನೆ ಎಂದು ನೀಡಿದ್ದ ಭರವಸೆ ಹುಸಿಯಾಗಿವೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

ಕೋವಿಡ್‌ ಸಂದರ್ಭದಲ್ಲಿ ಏಕಾಏಕಿ ಅವೈಜ್ಞಾನಿಕವಾಗಿ ಲಾಕ್‌ಡೌನ್ ಜಾರಿ‌ ಮಾಡಿದ ಪರಿಣಾಮ ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಜಿಎಸ್‌ಟಿ ಜಾರಿ ಮಾಡಿದ ಬಳಿಕ ಅನೇಕ ಕಂಪನಿಗಳು ಬಾಗಿಲು ಮುಚ್ಚಿದ ಪರಿಣಾಮ ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಬುಲೆಟ್‌ ಟ್ರೈನ್‌, ಸ್ಮಾರ್ಟ್‌ ಸಿಟಿ ಪರಿಸ್ಥಿತಿ ಏನಾಗಿದೆ ಎಂಬುದು ದೇಶದ ಜನರಿಗೆ ತಿಳಿದಿದೆ ಎಂದು ಹೇಳಿದರು.

44 ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಿ ಹೊಸದಾಗಿ ಜಾರಿಗೆ ತಂದಿರುವ ನಾಲ್ಕು ಕಾಯ್ದೆಗಳುಕಾರ್ಮಿಕ ವಿರೋಧಿಯಾಗಿವೆ. ಈ ಕಾಯ್ದೆಗಳು ಕಂಪನಿ ಮಾಲೀಕರ ಪರವಾಗಿವೆ ಎಂದು ಆರೋಪಿಸಿದರು.

ಅನುದಾನ ಕಡಿತ:ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ವೇತನಕ್ಕೆ ಕೇಂದ್ರ ಸರ್ಕಾರವು ಅನುದಾನ ಕಡಿತ ಮಾಡಿದ ಪರಿಣಾಮ ದೇಶದಲ್ಲಿ 60 ಲಕ್ಷ ಎಸ್‌ಸಿ,ಎಸ್‌ಟಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಈ ವಿಷಯದಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಏಕೆ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಎಸ್‌ಸಿ, ಎಸ್‌ಟಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ರಾಜ್ಯದ ಐವರು ಸಂಸದರು, 36 ಶಾಸಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಕಡಿತಗೊಳಿಸಲಾಗಿರುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ವೇತನವನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು. ಇಲ್ಲವಾದರೆ, ಇವರ ರಾಜೀನಾಮೆಗೆ ಆಗ್ರಹಿಸಿ ಬಿಎಸ್‌ಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಆತ್ಮಹತ್ಯೆ ಮಾಡಿಕೊಳ್ಳುವ ರೈತರನ್ನು ಹೇಡಿಗಳು ಎಂದಿರುವುದು ಖಂಡನೀಯ. ಇಂತಹ ರೈತ ವಿರೋಧಿ ಹೇಳಿಕೆ ನೀಡುವುದಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಯತ್ನಾಳ ನಾಲಾಯಕ್‌:ವಿಜಯಪುರ ನಗರದ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಅನುದಾನ ತಂದು ಕೆಲಸ ಮಾಡಿಸಲಾಗದ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಾಲಾಯಕ್‌ ಇದ್ದಾರೆ ಎಂದು ಕಿಡಿಕಾರಿದರು.

ಬಿಎಸ್‌ಪಿ ರಾಜ್ಯ ಉಸ್ತುವಾರಿ ದಿನೇಶ್‌ ಗೌತಮ್‌, ರಾಜ್ಯ ಕಾರ್ಯದರ್ಶಿ ಕಲ್ಲಪ್ಪ ತೊರವಿ, ಮುಖಂಡರಾದ ಲಕ್ಷ್ಮಣ ಪೂಜಾರಿ, ಸುರೇಶ ಚೂರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

ವಿಜಯಪುರ ನಗರದಲ್ಲಿ ಅಭಿವೃದ್ಧಿ ಕೆಲಸ, ಕಾರ್ಯಗಳನ್ನು ಮಾಡುವುದು ಬಿಟ್ಟು ಶಾಸಕ ಯತ್ನಾಳ ಅವರು ಕನ್ನಡಪರ ಹೋರಾಟಗಾರರ ವಿರುದ್ಧ ಮಾತನಾಡುತ್ತಿರುವುದು ಖಂಡನೀಯ

- ಎಂ.ಕೃಷ್ಣಮೂರ್ತಿ,ಬಿಎಸ್‌ಪಿ ರಾಜ್ಯ ಘಟಕದಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.