
ವಿಜಯಪುರದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮ ದಿನದ ಅಂಗವಾಗಿ ನಡೆದ ಏಕತಾ ಓಟದಲ್ಲಿ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು
ವಿಜಯಪುರ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನಾಚರಣೆ ಅಂಗವಾಗಿ ಪೊಲೀಸ್ ಇಲಾಖೆಯ ವತಿಯಿಂದ ಏಕತಾ ಓಟ ಶುಕ್ರವಾರ ಅರ್ಥಪೂರ್ಣವಾಗಿ ನಡೆಯಿತು.
ನಸುಕಿನಲ್ಲಿ ನೇಸರನ ಕಿರಣಗಳು ಭೂಮಿಗೆ ತಾಕುವ ಮುನ್ನವೇ ಸಾವಿರಾರು ಸಂಖ್ಯೆಯ ಪೊಲೀಸರು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡರು.
ಎತ್ತ ನೋಡಿದರೂ ಬಿಳಿ ಟೋಪಿ, ಟ್ರ್ಯಾಕ್ ಸೂಟ್, ಸ್ಪೋರ್ಟ್ಸ್ ಉಡುಗೆ ಧರಿಸಿ ಓಡುತ್ತಿರುವವರ ದಂಡೇ ಕಾಣಿಸಿತು. ನಾಗರಿಕ ಪೊಲೀಸ್ ಪಡೆಯ ಜೊತೆಗೆ ಸಶಸ್ತ್ರ ಪೊಲೀಸ್ ಪಡೆ, ಇಂಡಿಯನ್ ರಿಸರ್ವ್ ಬಟಾಲಿಯನ್ ತಂಡ ಸೇರಿದಂತೆ ವಿವಿಧ ಪೊಲೀಸ್ ಅಂಗ ಘಟಕಗಳ ಪಡೆಯವರು ಸಹ ಭಾಗವಹಿಸಿದರು. ‘ರನ್ ಫಾರ್ ಯೂನಿಟಿ’ ಸಂದೇಶವುಳ್ಳ ಫಲಕವನ್ನು ಪ್ರದರ್ಶಿಸಲಾಯಿತು.
ವಿಜಯಪುರದ ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭಗೊಂಡ ಏಕತಾ ಓಟ ಗಾಂಧಿವೃತ್ತ, ಕನಕದಾಸ ವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಐತಿಹಾಸಿಕ ಗೋಳಗುಮ್ಮಟಕ್ಕೆ ತಲುಪಿ ಸಂಪನ್ನಗೊಂಡಿತು. ನಂತರ ರಾಷ್ಟ್ರೀಯ ಏಕತಾ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸಾವಿರಾರು ಸ್ವಯಂಸೇವಕರು, ಪೊಲೀಸರು ಒಕ್ಕೊರಲಿನಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಿ ರಾಷ್ಟ್ರಕ್ಕಾಗಿ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಿದರು.
ಜಾಥಾಕ್ಕೆ ಹಸಿರು ನಿಶಾನೆ ತೋರಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾತನಾಡಿ, ‘ಸರ್ದಾರ್ ವಲ್ಲಭಭಾಯ್ ಪಟೇಲರ ಆದರ್ಶಗಳನ್ನು ಅಳವಡಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಭಾವೈಕ್ಯ ಹಾಗೂ ಏಕತೆ ದೇಶದ ಮಹೋನ್ನತ ಭಾವಗಳಾಗಿದ್ದು, ಈ ತತ್ವ ಆಧರಿಸಿ ನಾವೆಲ್ಲ ಒಗ್ಗಟ್ಟಾಗಿ ದೇಶವನ್ನು ಅಭಿವೃದ್ಧಿ ಫಥದತ್ತ ಮುನ್ನಡೆಸೋಣ’ ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ, ಡಿವೈಎಸ್‌ಪಿಗಳಾದ ಬಸವರಾಜ ಯಲಿಗಾರ, ಟಿ.ಎಸ್. ಸುಲ್ಫಿ, ಸುನೀಲ ಕಾಂಬಳೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.