ADVERTISEMENT

‘ಗಾಂಧಿ ಭವನ’ ಬಾಪು ಚರಿತ್ರೆಯ ಅನಾವರಣ

ಬಸವರಾಜ ಸಂಪಳ್ಳಿ
Published 1 ಅಕ್ಟೋಬರ್ 2022, 11:59 IST
Last Updated 1 ಅಕ್ಟೋಬರ್ 2022, 11:59 IST
ವಿಜಯಪುರ ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಸಮೀಪ ನಿರ್ಮಾಣವಾಗಿರುವ ಗಾಂಧಿ ಭವನ–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಸಮೀಪ ನಿರ್ಮಾಣವಾಗಿರುವ ಗಾಂಧಿ ಭವನ–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಸತ್ಯ, ಅಹಿಂಸೆ ಪ್ರತಿಪಾದಕ, ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಮಕ್ಕಳು, ವಿದ್ಯಾರ್ಥಿ, ಯುವ ಪೀಳಿಗೆಗೆ ಪರಿಚಯಿಸುವ ಸದುದ್ದೇಶದಿಂದ ಗುಮ್ಮಟನಗರಿಯ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೂತನವಾಗಿ ನಿರ್ಮಿಸಿರುವ ‘ಗಾಂಧಿ ಭವನ’ ಬಾಪು ಚರಿತ್ರೆಯನ್ನು ಕಣ್ಣೆದರು ಅನಾವರಣಗೊಳಿಸುತ್ತಿದೆ.

₹ 3 ಕೋಟಿ ಮೊತ್ತದಲ್ಲಿ ನಿರ್ಮಿತಿ ಕೇಂದ್ರವು ಆಕರ್ಷಕವಾಗಿ ಗಾಂಧಿ ಭವನವನ್ನು ನಿರ್ಮಿಸಿದ್ದು, ಭವನಕ್ಕೆ ಒಮ್ಮೆ ಭೇಟಿ ನೀಡಿದರೆ ಅಲ್ಲಿರುವ ಮೂರ್ತಿಗಳು, ಭಾವಚಿತ್ರಗಳು, ಚಿತ್ರಪಟಗಳು, ಪುಸ್ತಕಗಳು ಗಾಂಧಿ ಚರಿತ್ರೆಯನ್ನು ಸಾರಿ ಹೇಳುತ್ತವೆ.

ದಂಡಿ ಸತ್ಯಾಗ್ರಹದ ಬೃಹದಾಕಾರದ ಆಕರ್ಷಕ ಮೂರ್ತಿಗಳು(ಮಹಾದೇವ ಬಡಿಗೇರ ಅವರ ಕಲಾಕೃತಿ) ಗಾಂಧಿ ಭವನದತ್ತ ದಾರಿಹೋಕರನ್ನು ಕೈಬೀಸಿ ಕರೆಯುತ್ತವೆ. ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮಿಯರು (11 ಮೂರ್ತಿಗಳು) ಗಾಂಧಿ ಮುಂದಾಳತ್ವದಲ್ಲಿ ಸಾಗುವ ದೃಶ್ಯ ಸಾಮಾರಸ್ಯ ಮತ್ತು ಸಹಬಾಳ್ವೆಯ ಭಾರತವನ್ನು ಪ್ರತಿನಿಧಿಸುತ್ತದೆ.

ADVERTISEMENT

ಗಾಂಧಿಯ ಕೋಲಿನ ಆಶ್ರಯದಲ್ಲಿಬಾಲಕನೊಬ್ಬಮುನ್ನೆಡೆಯುತ್ತಿರುವ ಮೂರ್ತಿ ಭವನದ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಎಡ ಭಾಗದಲ್ಲಿ ಕಾಣಸಿಗುತ್ತದೆ. ಇಂದಿನ ಮಕ್ಕಳು, ಯುವ ಪೀಳಿಗೆ ಗಾಂಧಿ ಚಿಂತನೆಯಲ್ಲಿ ಮುಂದೆ ಸಾಗಬೇಕು ಎಂಬರ್ಥವನ್ನು ಈ ಮೂರ್ತಿ ಸಾರಿ ಹೇಳುವಂತಿದೆ.

ಜೀವನ ಸುಂದರವಾಗಿರಬೇಕಾದರೆ, ಸಮಾಜದಲ್ಲಿ ಸಹಿಷ್ಣೆತೆ, ಸಹೋದರತೆಯಿಂದ ಬಾಳಬೇಕೆಂದರೆ ಕೆಟ್ಟದನ್ನು ಕೇಳಬಾರದು,ಮಾತನಾಡಬಾರದು, ನೋಡಬಾರದು ಎಂಬ ಗಾಂಧಿ ಸಂದೇಶವನ್ನು ಸಾರುವ ಕಣ್ಣು, ಕಿವಿ, ಬಾಯಿಯನ್ನು ಮುಚ್ಚಿಕೊಂಡಿರುವಮೂರು ಗಾಂಧಿ ಕೋತಿಗಳು ಆಕರ್ಷಕವಾಗಿ ಕಾಣುತ್ತವೆ.

ಕೆಳಗಿ ಬಿದ್ದಿರುವ ಮಗುವನ್ನು ಎತ್ತಿಕೊಳ್ಳುತ್ತಿರುವ ಗಾಂಧಿ ಮೂರ್ತಿಯು ಅಸ್ಪೃಶ್ಯತೆ ನಿವಾರಣೆಗಾಗಿ ಗಾಂಧಿ ನಡೆಸಿದ ಹೋರಾಟದ ಪ್ರತೀಕವಾಗಿದೆ.

‘ಬಾಪು ಕುಟೀರ’ದಲ್ಲಿ ಕುಳಿತ ಭಂಗಿಯಲ್ಲಿರುವ ಗಾಂಧಿ ಪ್ರತಿಮೆ ಹಾಗೂ ಕಟೀರದಲ್ಲಿ ಗಾಂಧೀಜಿಯ ಆಯ್ದ 16 ನುಡಿಮುತ್ತುಗಳು ಚರಕ, ಖಾದಿ, ದೀನ ದಲಿತ, ಶೋಷಿತರ ಸೇವೆಯಲ್ಲಿ ದೇವರನ್ನು ಕಂಡ ಗಾಂಧಿ ಚಿಂತನೆಯನ್ನು ಪರಿಚಯಿಸುತ್ತವೆ.

ಗಾಂಧಿ ಭವನದೊಳಗೆ ಪ್ರವೇಶಿಸುವ ಪ್ರವೇಶ ದ್ವಾರದ ಮೇಲೆ ಕಲಾವಿದ ಎಸ್‌.ಜಿ.ಗೂಗವಾಡ ರಚಿತ ಬೃಹದಾಕಾರದ ಗಾಂಧಿ ಚಿತ್ರ ಎಲ್ಲರೂ ತಲೆ ಎತ್ತಿ ನಡೆಯುವಂತೆ ಮಾಡುತ್ತದೆ.

ಧ್ಯಾನನಿರತ ಗಾಂಧಿಯ ಪ್ರತಿಮೆ ಹಾಗೂ ಅದರ ಅಡಿಯಲ್ಲಿ ಬರೆದಿರುವ ‘ನನ್ನ ಜೀವನವೇ ನನ್ನ ಸಂದೇಶ’ ಸೂಕ್ತಿಯು ಗಾಂಧಿ ತಾತನ ಜೀವನ, ಸಂದೇಶ ಸಾರುತ್ತದೆ.

ಮಾರ್ಟಿನ್‌ ಲೂಥರ್‌ ಕಿಂಗ್‌, ಬರಾಕ್‌ ಒಬಾಮ, ನೆಲ್ಸನ್‌ ಮಂಡೇಲಾ, ಐನ್‌ಸ್ಟಿನ್‌ ಗಾಂಧಿ ಕುರಿತು ನೀಡಿದ ಶ್ಲಾಘನೀಯ ಹೇಳಿಕೆಯನ್ನು ತಿಳಿಸುವ ಹಾಗೂ ಗಾಂಧೀಜಿ ಅವರು ನೆಹರೂ, ಸುಭಾಶ್ಚಂದ್ರ ಬೋಸ್‌,ರವೀಂದ್ರನಾಥ ಟ್ಯಾಗೋರ್‌, ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅವರೊಂದಿಗೆ ಇರುವ ಅಪರೂಪದ 15 ಎಲ್‌ಇಡಿ ಫೋಟೊಗಳನ್ನು ಗೋಡೆಗಳ ಮೇಲೆ ನೇತು ಹಾಕಲಾಗಿದೆ.

‘ಮೋಹನದಾಸ ಟು ಮಹಾತ್ಮ ಗಾಂಧಿ’ ಛಾಯಾಚಿತ್ರಗಳ ಪ್ರಾಂಗಣದಲ್ಲಿ ಕಿರು ಮಾಹಿತಿ ಒಳಗೊಂಡಿರುವ100 ಚಿತ್ರಗಳು ಗಾಂಧಿ ಜೀವನ ಚರಿತ್ರೆಯನ್ನು ಅನಾವರಣಗೊಳಿಸುತ್ತವೆ.

ಗಾಂಧಿ ಗ್ರಂಥಾಲಯ, ಗಾಂಧಿ ಸಭಾಂಗಣ, ಹೃದಯ ಕುಂಜ(ಧ್ಯಾನ ಮಂದಿರ) ಹಾಗೂ ಕಸ್ತೂರಬಾ ಗಾಂಧಿ ಅವರೊಂದಿಗೆ ಮಹಾತ್ಮನ ಪ್ರತಿಮೆ ನೋಡುಗರಲ್ಲಿ ಗಾಂಧಿ ಎಂಬ ಅಗಾದ ವ್ಯಕ್ತಿತ್ವವನ್ನು ಅಚ್ಚಳಿಯದಂತೆ ಮನದೊಳಗೆ ಉಳಿಸುತ್ತದೆ.

ಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌ ದಾನಮ್ಮನವರ ಹಾಗೂ ‘ಗಾಂಧಿ ಪ್ರೇಮಿ’ ನೇತಾಜಿ ಗಾಂಧಿ (ನೀಲೇಶ ಬೇನಾಳ) ಅವರ ಪರಿಶ್ರಮ, ಯೋಚನೆ, ಯೋಜನೆಯನ್ನು ನಿರ್ಮಿತಿ ಕೇಂದ್ರ ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ಅನಾವರಣಗೊಳಿಸಿದೆ. ಒಮ್ಮೆಯಾದರೂ ಈ ಭವನಕ್ಕೆ ಭೇಟಿ ನೀಡಲೇಬೇಕು.

****

ಗಾಂಧಿ ಭವನದಲ್ಲಿ ಗಾಂಧಿ ಅವರ ಹೆಜ್ಜೆ ಗುರುತುಗಳನ್ನು ಅರ್ಥಪೂರ್ಣವಾಗಿ ದಾಖಲಿಸುವ ಕಾರ್ಯವಾಗಿದೆ. ಜನರು ಇದರ ಸದುಪಯೋಗ ಪಡೆಯಬೇಕು

–ಬಿ.ವೈ.ಸುರಕೋಡ, ಪ್ರಭಾರ ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.