ADVERTISEMENT

UPSC ಮುಖ್ಯ ಪರೀಕ್ಷೆ ಫಲಿತಾಂಶ: ಸವಿತಾ ಗೋಟ್ಯಾಳಗೆ 479ನೇ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 30 ಮೇ 2022, 12:52 IST
Last Updated 30 ಮೇ 2022, 12:52 IST
ಸವಿತಾ ಗೋಟ್ಯಾಳ
ಸವಿತಾ ಗೋಟ್ಯಾಳ   

ವಿಜಯಪುರ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ವಿಜಯಪುರ ನಗರದ ಆಶ್ರಮ ಬಡಾವಣೆಯ ಎಂಜಿನಿಯರಿಂಗ್‌ ಪದವೀಧರೆ ಸವಿತಾ ಗೋಟ್ಯಾಳ 479ನೇ ರ‍್ಯಾಂಕ್‌ ಗಳಿಸಿದ್ದಾರೆ.

ಮೂಲತಃ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದ ಬಿಎಸ್‌ಎನ್‌ಎಲ್‌ ನಿವೃತ್ತ ನೌಕರ ಸಿದ್ದಪ್ಪ ಗೋಟ್ಯಾಳ ಮತ್ತು ಜಯಶ್ರೀ ದಂಪತಿಯ ಪುತ್ರಿಯಾಗಿರುವ ಸವಿತಾ ಅವರು, ಬೆಂಗಳೂರಿನ ಪೆಸಿಟ್‌(ಪಿಇಎಸ್‌ಐಟಿ) ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ. 7ನೇ ತರಗತಿ ವರೆಗೆ ಇಂಡಿ ತಾಲ್ಲೂಕಿನ ಅಥರ್ಗಾದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ. ಬಳಿಕ ವಿಜಯಪುರದ ಪಿಡಿಜೆ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ ಹಾಗೂ ಧಾರವಾಡದ ಜೆಎಸ್ಎಸ್‌ನಲ್ಲಿ ಪಿಯುಸಿ ಓದಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸವಿತಾ, 2020ರಲ್ಲಿ ಯುಪಿಎಸ್‌ಸಿಯಲ್ಲಿ 626ನೇ ರ‍್ಯಾಂಕ್‌ ಲಭಿಸಿತ್ತು. ಸದ್ಯ ಅಕೌಂಟ್‌ ಅಂಡ್‌ ಫೈನಾನ್ಸ್‌ ಸರ್ವಿಸ್‌ ವಿಭಾಗದಲ್ಲಿ ಪಿ ಅಂಡ್‌ ಟಿ ತರಬೇತಿಯನ್ನು ಬೆಂಗಳೂರಿನಲ್ಲಿ ಪಡೆಯುತ್ತಿರುವೆ. ಇದೀಗ ಎರಡನೇ ಬಾರಿ ಮತ್ತಷ್ಟು ಉತ್ತಮ ರ‍್ಯಾಂಕ್‌ ಗಳಿಸಿದ್ದೇನೆ. ಖುಷಿಯಾಗಿದೆ ಎಂದು ತಿಳಿಸಿದರು.

ಸವಿತಾ ಅವರ ಸಹೋದರಿ ಅಶ್ವಿನಿ ಗೋಟ್ಯಾಳ ಅವರು 2016ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 625ನೇ ರ‍್ಯಾಂಕ್‌ ಗಳಿಸಿದ್ದರು. ಸದ್ಯ ಪಂಜಾಬ್‌ನ ಚಂಡೀಗಡದಲ್ಲಿ ಎಸ್‌ಎಸ್‌ಪಿಯಾಗಿ (ಸೀನಿಯರ್‌ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌) ಕಾರ್ಯನಿರ್ವಹಿಸುತ್ತಿದ್ದಾರೆ.

‘ನನ್ನ ಹೆಣ್ಣು ಮಕ್ಕಳಿಬ್ಬರ ಸಾಧನೆ ಹೆಮ್ಮೆ ಎನಿಸುತ್ತದೆ’ ಎಂದು ಸವಿತಾ ಅವರ ತಂದೆ ಸಿದ್ದಪ್ಪ ಗೋಟ್ಯಾಳ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.