ADVERTISEMENT

ಯುಪಿಎಸ್‌ಸಿ: ನಿಖಿಲ್‌ ಪಾಟೀಲ್‌ಗೆ 139ನೇ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 30 ಮೇ 2022, 11:58 IST
Last Updated 30 ಮೇ 2022, 11:58 IST
ನಿಖಿಲ್‌ ಪಾಟೀಲ್‌
ನಿಖಿಲ್‌ ಪಾಟೀಲ್‌   

ವಿಜಯಪುರ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ವಿಜಯಪುರದ ಜಿಲ್ಲೆ ತಾಳಿಕೋಟೆ ತಾಲ್ಲೂಕಿನ ಲಕ್ಕುಂಡಿಯ ನಿಖಿಲ್‌ ಪಾಟೀಲ್‌ 139ನೇ ರ‍್ಯಾಂಕ್‌ ಗಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕಿನ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ಅಧಿಕಾರಿಯಾಗಿರುವ ಬಸವರಾಜ ಪಾಟೀಲ ಮತ್ತು ಅನ್ನಪೂರ್ಣ ಪಾಟೀಲ ದಂಪತಿ ಪುತ್ರರಾದ ನಿಖಿಲ್‌ ಎಂಜಿನಿಯರಿಂಗ್‌ ಪದವೀಧರರಾಗಿದ್ದಾರೆ.

1ರಿಂದ 7ನೇ ತರಗತಿ ವರೆಗೆ ಗೋಕಾಕ್‌, 8ರಿಂದ 12ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಓದಿದ್ದಾರೆ. ಬೆಂಗಳೂರಿನ ಪೆಸಿಟ್‌(ಪಿಇಎಸ್‌ಐಟಿ) ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮುಗಿಸಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನಿಖಿಲ್‌, ಯುಪಿಎಸ್‌ಇಯಲ್ಲಿ ರ‍್ಯಾಂಕ್‌ ಬಂದಿರುವುದರಿಂದ ತುಂಬಾ ಖುಷಿಯಾಗಿದೆ. ಇದುವರೆಗೆ ನಾಲ್ಕು ಬಾರಿ ಪರೀಕ್ಷೆ ಬರೆದಿದ್ದೇನೆ. ಹೋದ ವರ್ಷ ಸಂದರ್ಶನದ ವರೆಗೆ ಹೋಗಿ ಬಂದಿದ್ದೆ. ಆದರೆ, ರ‍್ಯಾಂಕ್‌ ಲಭಿಸಿರಲಿಲ್ಲ ಎಂದರು.

ದೆಹಲಿಯ ವಾಜಿರಾಮ್‌ ಇನ್‌ಸ್ಟಿಟ್ಯೂಟ್‌, ಬೆಂಗಳೂರಿನ ಡಾ.ರಾಜಕುಮಾರ್‌ ಅಕಾಡೆಮಿ ಮತ್ತು ಅಕ್ಕ ಐಎಎಸ್‌ ಅಕಾಡೆಮಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗಾಗಿ ವಿಶೇಷ ತರಬೇತಿ ಪಡೆದಿದ್ದೇನೆ. ಸಂದರ್ಶನದ ವೇಳೆ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ ಓದು ನೆರವಾಯಿತು ಎಂದರು.

ಸದ್ಯದ ರ‍್ಯಾಂಕ್‌ ಪ್ರಕಾರ ಐಪಿಎಸ್‌ ಹುದ್ದೆ ಲಭಿಸಲಿದೆ. ಇನ್ನು ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಅವಕಾಶ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮವಹಿಸಿ ಐಎಎಸ್‌ ಅಧಿಕಾರಿಯಾಗಬೇಕು ಎಂಬ ಗುರಿಯಿದೆ ಎಂದು ಹೇಳಿದರು.

ಯುಪಿಎಸ್‌ಸಿಯಲ್ಲಿ ನಾನು ರ‍್ಯಾಂಕ್‌ ಬಂದಿದ್ದರೂ ಸಹ ಇದರ ಹಿಂದೆ ತಂದೆ, ತಾಯಿ ಅವರ ಶ್ರಮ ಇದೆ. ಜನಸೇವೆ ಮಾಡಬೇಕು ಎಂಬುದು ನನ್ನ ಆಶಯವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.