ADVERTISEMENT

ವಿಜಯಪುರ: ಹದಗೆಟ್ಟ ರಸ್ತೆಗಳ ಗುಂಡಿ ಮುಚ್ಚಲು ಆಗ್ರಹ

ಕಾಂಗ್ರೆಸ್‌ ಮುಖಂಡ ಹಮೀದ್‌ ಮುಶ್ರೀಫ್‌ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 13:33 IST
Last Updated 26 ಸೆಪ್ಟೆಂಬರ್ 2021, 13:33 IST
ವಿಜಯಪುರ ನಗರ ವ್ಯಾಪ್ತಿಯಲ್ಲಿ ಗುಂಡಿ ಬಿದ್ದು ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸ್‌ ಮುಖಂಡ ಹಮೀದ್‌ ಮುಶ್ರೀಫ್‌ ನೇತೃತ್ವದಲ್ಲಿ ಭಾನುವಾರ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ವಿಜಯಪುರ ನಗರ ವ್ಯಾಪ್ತಿಯಲ್ಲಿ ಗುಂಡಿ ಬಿದ್ದು ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸ್‌ ಮುಖಂಡ ಹಮೀದ್‌ ಮುಶ್ರೀಫ್‌ ನೇತೃತ್ವದಲ್ಲಿ ಭಾನುವಾರ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ವಿಜಯಪುರ: ನಗರ ವ್ಯಾಪ್ತಿಯಲ್ಲಿ ಗುಂಡಿ ಬಿದ್ದು ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸ್‌ ಮುಖಂಡ ಹಮೀದ್‌ ಮುಶ್ರೀಫ್‌ ನೇತೃತ್ವದಲ್ಲಿ ಭಾನುವಾರ ಕಾಂಗ್ರೆಸ್‌ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸುವ ಮೂಲಕ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಶಾಸಕರಿಗೆ ಬಿಸಿ ಮುಟ್ಟಿಸಿದರು.

ನಗರದ ಗೋಳಗುಮ್ಮಟದ ಎದುರು ಎಂ.ಜಿ.ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಸ್ವಂತ ಖರ್ಚಿನಲ್ಲಿ ಮುಚ್ಚಲು ಮುಶ್ರೀಫ್‌ ಅವರು ಮುಂದಾದಾಗ ಮಹಾನಗರ ಪಾಲಿಕೆ ಆಯುಕ್ತ ವಿಜಯ್‌ ಮೆಕ್ಕಳಕಿ ಸ್ಥಳಕ್ಕೆ ಭೇಟಿ ನೀಡಿ, 20 ದಿನಗಳ ಒಳಗಾಗಿ ಪಾಲಿಕೆಯಿಂದ ಗುಂಡಿ ಮುಚ್ಚಿ ರಸ್ತೆ ದುರಸ್ತಿ ಮಾಡುವ ಭರವಸೆ ನೀಡಿದರು.

ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅವರ ಮಾತಿಗೆ ಬೆಲೆಕ್ಕೊಟ್ಟು ಪ್ರತಿಭಟನೆಯನ್ನು ಹಿಂಪಡೆಯಲಾಗುವುದು. ಒಂದು ವೇಳೆ ಪಾಲಿಕೆ ವತಿಯಿಂದ 20 ದಿನಗಳ ಒಳಗೆ ರಸ್ತೆ ಗುಂಡಿಗಳು ಮುಚ್ಚುವ ಕೆಲಸ ಹಾಗೂ ರಸ್ತೆ ಕಾಮಗಾರಿಗಳು ಪ್ರಾರಂಭವಾಗದೆ ಇದ್ದರೆ ನಗರದ ಜನರ ಬಳಿ ಭಿಕ್ಷೆ ಬೇಡಿಯಾದರು ರಸ್ತೆಗಳ ರಿಪೇರಿ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಹಮೀದ್‌ ಮುಶ್ರೀಫ್‌ ಎಚ್ಚರಿಕೆ ನೀಡಿದರು.

ADVERTISEMENT

ನಗರದ ಶಾಸಕರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ತಮಗೆ ಬೇಕಾದ ಕಡೆ ರಸ್ತೆ ಕಾಮಗಾರಿಗಳು ಕೈಗೊಂಡಿದ್ದು, ಸಾರ್ವಜನಿಕವಾಗಿ ತಾರತಮ್ಯ ಮಾಡುತ್ತಿರುವುದು ಖಂಡನರ್ಹ. ನಗರ ಶಾಸಕರು ತಮಗೆ ಬೇಕಾದ ಗುತ್ತಿಗೆದಾರರಿಗೆ ರಸ್ತೆ ಕಾಮಗಾರಿ ಟೆಂಡರ್‌ ಕೊಡಸಿ, ಕಮಿಷನ್ ದಂಧೆಯಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಹಿಂದುಳಿದ ಘಟಕದ ರಾಜ್ಯ ಉಪಾಧ್ಯಕ್ಷ ಕೆ ಎಫ್ ಅಂಕಲಗಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ವೈಜ್ಯನಾಥ ಕರ್ಪೂರಮಠ, ಚಾಂದಸಾಬ್‌ ಗಡಗಲಾವ, ರಾಜ್ಯ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಮಹಮ್ಮದ ರಫೀಕ್ ಠಪಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬ್ಬಿರ ಜಾಗಿರದಾರ್‌, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಅಬ್ದುಲ್‌ ರಜಾಕ್‌ ಹೊರ್ತಿ, ಇದ್ರುಷ್ ಭಕ್ಷಿ, ಅಜೀಮ್‌ ಇನಾಮದಾರ, ರವೀಂದ್ರ ಜಾಧವ, ಇರ್ಫಾನ್ ಶೇಖ್‌, ರಾಜಶ್ರೀ ಚೊಳಕೆ, ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಛಾಯಾಗೋಳ, ನಗರ ಮಹಿಳಾ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷೆ ಆಸ್ಮಾ ಕಾಲೆಬಾಗ್‌, ಭಾರತಿ ಹೊಸಮನಿ, ಅಸ್ಫಾಕ್ ಮನಗೂಳಿ, ನಜೀರ್‌, ಶಬ್ಬಿರ್ ಮನಗೂಳಿ, ತಿಪ್ಪಣ್ಣ ಕಮಲದಿನ್ನಿ, ಸುನೀಲ ಪತ್ತಾರ, ಹಾಜಿ ಪಿಂಜಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

* ಬಿಜೆಪಿ ಶಾಸಕರು ನಗರದಲ್ಲಿ ಅಭಿವೃದ್ಧಿ ಕೆಲಸ ಮಾಡದೆ ರಾಜಕಾರಣದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಇಂತಹ ಶಾಸಕರನ್ನು ಪಡೆದದ್ದು ನಗರದ ಮತದಾರರ ದುರಾದೃಷ್ಟ ಮುಂಬರುವ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ.

–ಹಮೀದ್‌ ಮುಶ್ರೀಫ್‌, ಕಾಂಗ್ರೆಸ್‌ ಮುಖಂಡ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.