
ಮುದ್ದೇಬಿಹಾಳ: ತಾಲ್ಲೂಕಿನ ವನಹಳ್ಳಿ ಗ್ರಾಮದ ಅಂದಾಜು 4 ಕಿ.ಮೀ ರಸ್ತೆ ದುರಸ್ತಿಯ ಸಲುವಾಗಿ ಕೆ.ಆರ್.ಡಿ.ಎಲ್‌ದಿಂದ ₹2.80 ಕೋಟಿ ಅನುದಾನ ಮಂಜೂರಾತಿಗೊಂಡು ಟೆಂಡರ್ ಕೂಡ ಆಗಿದ್ದು, ಕಾಮಗಾರಿಗೂ ಅನುಮೋದನೆ ದೊರೆತಿದೆ. ಆದರೆ, ಒಂದೂವರೆ ವರ್ಷವಾದರೂ ಕೆಲಸ ಆರಂಭಗೊಂಡಿಲ್ಲ.
ಮಳೆ ಬಂದರೆ ಸಾಕು ಈ ರಸ್ತೆಯ ಇಕ್ಕೆಲದಲ್ಲಿರುವ ಜಮೀನುಗಳಿಗೆ ಹೋಗುವುದಕ್ಕೆ ರೈತರು ಹರಸಾಹಸ ಪಡಬೇಕು. ಅಲ್ಲದೇ, ಇದೇ ರಸ್ತೆಯಿಂದ ಬಳಗಾನೂರ, ಕೊಣ್ಣೂರು ಗ್ರಾಮವನ್ನು ಸಂಪರ್ಕಿಸಬಹುದಾಗಿದ್ದು ಗುತ್ತಿಗೆದಾರರು, ಅಧಿಕಾರಿಗಳು ಮಾತ್ರ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರಾದ ಶೇಖರಯ್ಯ ಹಿರೇಮಠ, ಶಾಂತೇಶ ಚಟ್ಟೇರ, ರಾಜು ತಿಳಗೂಳ, ಗ್ಯಾನಪ್ಪ ಹೊಸಮನಿ ಮತ್ತಿತರರು ದೂರಿದ್ದಾರೆ.
ಈಗ ಕಬ್ಬು ಕಟಾವಿಗೆ ಬಂದಿದ್ದು ಅದನ್ನು ಸುರಕ್ಷಿತವಾಗಿ ಕಾರ್ಖಾನೆಗೆ ಸಾಗಿಸುವುದೇ ಸಾಹಸದ ಕೆಲಸವಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಗ್ರಾಮಸ್ಥರು ಅಧಿಕಾರಿಗಳನ್ನು ಕೇಳಿದರೆ ಗುತ್ತಿಗೆದಾರರಾದ ಬಸನಗೌಡ ಪಾಟೀಲ ವಣಕ್ಯಾಳರನ್ನು ಕೇಳಿ ಎನ್ನುತ್ತಾರೆ. ಗುತ್ತಿಗೆದಾರರನ್ನು ಕೇಳಿದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿ ಮಕ್ಸೂದ ಜತ್ತ ಅವರನ್ನು ಕೇಳಿ ಎನ್ನುತ್ತಾರೆ. ಕಬ್ಬು ಬೆಳೆದು ಕೂತಿರುವ ರೈತರು ಹೇಗೆ ಕಬ್ಬು ಕಾರ್ಖಾನೆಗೆ ಸಾಗಿಸುವುದು ಎಂದು ಚಿಂತಿತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.