
ವಿಜಯಪುರ: ವೀಣೆಯ ತಂತಿಗಳು ಮೀಟಿ ನಾದ ನಿನಾದವಾಗಿ ರಾಗ ಲಹರಿ ಸಂಗೀತದ ದಿವ್ಯಾನುಭವ ನೀಡಿದರೆ, ಅದೇ ವೇಗದಲ್ಲಿ ಪೀಟಿಲಿನಿಂದ ಹೊರಬರುವ ಸ್ವರ ಮಾಧುರ್ಯ, ಮರುಕ್ಷಣವೇ ಸಂಗೀತ ಸಂಭ್ರಮಕ್ಕೆ ಕಳೆ ಕಟ್ಟುವಂತೆ ಕೊಳಲು'ನಿಂದ ಹೊರ ಬರುವ ಇಂಪು, ಇಂಪಾದ ಸ್ವರಕ್ಕೆ ಗಟ್ಟಿಯಾದ ಮೃದಂಗದ ಭವ್ಯ ಧ್ವನಿ, ಮನಮೋಹಕವಾಗಿಸುವ ಮೋರ್ಸಿಂಗ್ ನಿನಾದ...
ಈ ಎಲ್ಲ ಸ್ವರ ಸಂಗಮದ ಗಾನ ಲಹರಿ ಶ್ರೋತೃಗಳನ್ನು ಆಪ್ತಭಾವದೊಂದಿಗೆ ಸಂಗೀತ ಯಾತ್ರೆಯನ್ನು ಯಶಸ್ವಿಯಾಗಿ ಸಾಗುವಂತೆ ಮಾಡಿ ರಾಗ, ಆಲಾಪಗಳ ಸಾಗರದಲ್ಲಿ ಈಜುವಂತೆ ಮಾಡಿತು. ಧ್ವನಿಗಳ ಆವರ್ತನ, ಏರಳಿತಗಳ ಸಂಗೀತದ ವಿದ್ವತ್ ಸಾಕ್ಷಿಕರಿಸುವಂತೆ ಕಲಾವಿದರ ಬೆರಳಿನ ನರ್ತನದಿಂದ ಹೊರಬರುವ ಸ್ವರ ಮಾಧುರ್ಯದ ಸವಿಯನ್ನು ಗುಮ್ಮಟ ನಗರಿಯ ಜನತೆ ಸವಿದರು.
ಮೂರ್ತಿ ಟ್ರಸ್ಟ್, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸರ್ವೇಕ್ಷಣ ಇಲಾಖೆ, ಭಾರತೀಯ ವಿದ್ಯಾಭವನದ ಆಶ್ರಯದಲ್ಲಿ ಗೋಳಗುಮ್ಮಟ ಆವರಣದಲ್ಲಿ ಎರಡನೇಯ ದಿನದ `ಕಲಾ ಧಾರಾ'ದಲ್ಲಿ ನಡೆದ ಕರ್ನಾಟಕ ಸಂಗೀತ ವಾದ್ಯಗೋಷ್ಠಿ ವೈಭವ ಭರಿತವಾಗಿ ನಡೆಯಿತು.
ಎರಡು ತಾಸಿಗೂ ಮಿಕ್ಕಿ ಸಂಗೀತ ಕಲಾವಿದರು ತಮ್ಮ ಅದ್ಭುತ ವಾದ್ಯಗಳಿಂದ ಸ್ವರ ಲಹರಿಯನ್ನು ಹರಿಸುವ ಮೂಲಕ ಗಾನವಿಲ್ಲದೇ ಸ್ವರಗಳಿಂದಲೇ ತಲೆಯಾಡಿಸುವಂತೆ ಮಾಡಿದರು.
ಹಂಸಾನಂದಿ, ಹಿಂದೋರಾ ಸೇರಿದಂತೆ ಅನೇಕ ರಾಗಗಳಲ್ಲಿ ಸಂಗೀತ ಸುಧೆ ವಿಜಯಪುರ ಶ್ರೋತೃಗಳಿಗೆ ದಿವ್ಯ ಸಂಗೀತಾಲಿಕೆಯ ಅನುಭವ ನೀಡುವಲ್ಲಿ ಯಶಸ್ವಿಯಾಯಿತು.
ವಿದೂಷಿ ಡಿ.ಬಾಲಕೃಷ್ಣ ಅವರು ವೀಣೆ, ಆದಿತಿ ಕೃಷ್ಣ ಪ್ರಕಾಶ ಪಿಟೀಲು, ವಂಶಿಧರ ಅವರು ಕೊಳಲು, ಅನಿರುದ್ಧ ಭಟ್ ಮೃದಂಗ, ಭಾಗ್ಯಲಕ್ಷ್ಮಿ ಭಟ್ ಮೋರ್ಸಿಂಗ್ ನುಡಿಸುವ ಮೂಲಕ ತಮ್ಮ ಸಂಗೀತ ವಿದ್ವತ್ ಮೂಲಕ ಪ್ರತಿಯೊಬ್ಬರು ತಲೆಯಾಡಿಸುವಂತೆ ಮಾಡಿದರು.
ವೀಣೆಯ ಸ್ವರ ಮಾಧುರ್ಯದೊಂದಿಗೆ ರಾಗ ಆವರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಮೃದಂಗದ ಮೂಲಕ ಹರಿದು ಬರುವ ಸದ್ದು..... ಅದೇ ಕ್ಷಣಕ್ಕೆ ಕೊಳಲಿನ ಇಂಪು, ಅದಕ್ಕೆ ಪೂರಕವಾಗಿ ಪೀಟಿಲಿನಿಂದ ಹೊರಬರುವ ಇಂಪಾದ ಸ್ವರ.... ಮನಮೋಹಕವಾದ ಮೋರ್ಸಿಂಗ್.... ಒಂದೊಮ್ಮೆ ಮೋರ್ಸಿಂಗ್ ಹಾಗೂ ಮೃದಂಗಕ್ಕೆ ಸ್ಪರ್ಧೆ ಏರ್ಪಟ್ಟರೆ, ಇನ್ನೊಮ್ಮೆ ಪೀಟಿಲು-ವೀಣೆಯ ಸ್ವರಗಳ ಏರಳಿತ, ಮಾರನೇಯ ಕ್ಷಣವೇ ನಾಲ್ಕು ವಾದ್ಯ ವೈಭವಗಳಿಂದಲೂ ಏಕಕಾಲಕ್ಕೆ ಸ್ವರಗಳು ಮೊಳಗಿ ಸ್ವರ ಸಂಗಮದ ಭಾವ ಸೃಜಿಸಿ ಸಂಗೀತ ಶೋತೃಗಳ ಮನ ತಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.