ADVERTISEMENT

ಲಕ್ಷ ಮತಗಳ ಅಂತರದಿಂದ ಗೆಲುವು: ನಡಹಳ್ಳಿ ವಿಶ್ವಾಸ

10 ಗ್ರಾಮಗಳಲ್ಲಿ ₹ 58.20 ಕೋಟಿ ಅನುದಾನದ ರಸ್ತೆ, ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ 

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 15:29 IST
Last Updated 24 ಮಾರ್ಚ್ 2023, 15:29 IST
ಮುದ್ದೇಬಿಹಾಳ ತಾಲ್ಲೂಕಿನ ಅಗಸಬಾಳ ಗ್ರಾಮಸ್ಥರು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರನ್ನು ಸನ್ಮಾನಿಸಿದರು 
ಮುದ್ದೇಬಿಹಾಳ ತಾಲ್ಲೂಕಿನ ಅಗಸಬಾಳ ಗ್ರಾಮಸ್ಥರು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರನ್ನು ಸನ್ಮಾನಿಸಿದರು    

ಮುದ್ದೇಬಿಹಾಳ: ವಿರೋಧಿಗಳು ನನ್ನ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ, ಕುತಂತ್ರ ನಡೆಸಿದರೂ ನಾನು ಈ ಚುನಾವಣೆಯನ್ನು ಬಿಜೆಪಿ ಅಭ್ಯರ್ಥಿಯಾಗಿಯೇ ಎದುರಿಸಿ ಒಂದು ಲಕ್ಷ ಮತಗಳ ಅಂತರದಿಂದ ಗೆದ್ದು ಬರುತ್ತೇನೆ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.

ಹುಲ್ಲೂರು, ಹುಲ್ಲೂರು ತಾಂಡಾ, ಕೊಪ್ಪ ತಾಂಡಾ, ತಾರನಾಳ, ಹಡಲಗೇರಿ, ಬನೋಶಿ, ಗೋನಾಳ, ಕೋಳೂರ, ಹಳೇಹುನಕುಂಟಿ, ಆಲೂರ, ಅಡವಿ ಹುಲಗಬಾಳ ಗ್ರಾಮಗಳಲ್ಲಿ ಅಂದಾಜು ₹ 58.20 ಕೋಟಿ ಅನುದಾನದ ರಸ್ತೆ, ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಯಾವುದೇ ಪಕ್ಷ ಯಾರಿಗೂ ಸುಮ್ಮನೆ ಟಿಕೆಟ್ ಕೊಡಲ್ಲ. ಸರ್ವೇ ಮಾಡುತ್ತದೆ. ನಮ್ಮಂಥ ರಾಜಕಾರಣಿಗಳ ಇತಿಹಾಸ ಪಕ್ಷದ ವರಿಷ್ಠರ ಹತ್ತಿರ ಇರುತ್ತದೆ. ಅದರ ಆಧಾರದ ಮೇಲೆ ಟಿಕೆಟ್ ಕೊಡುತ್ತಾರೆ. ಯಾರು ಎಷ್ಟೇ ಕುತಂತ್ರ ಮಾಡಿದರೂ, ಪ್ರಚೋದನೆ ನೀಡಿದರೂ ನಾನು ಉತ್ತರ ಕೊಡಲು ಹೋಗೊಲ್ಲ. ನನಗೆ ನನ್ನ ಪಕ್ಷ, ವರಿಷ್ಠರ ಬಗ್ಗೆ ನನಗೆ ವಿಶ್ವಾಸ ಇದೆ ಎಂದರು.

ADVERTISEMENT

ತಾಂಡಾಗಳೂ ಸೇರಿದಂತೆ ಮೊದಲ ಹಂತದಲ್ಲಿ 62 ಹಳ್ಳಿ, 2ನೇ ಹಂತದಲ್ಲಿ 66 ಹಳ್ಳಿ ಸೇರಿ ಒಟ್ಟು 128 ಹಳ್ಳಿಗಳಿಗೆ ಮೂಲ ಸೌಕರ್ಯ ಒದಗಿಸಲು ಬದ್ಧನಾಗಿದ್ದೇನೆ ಎಂದು ಹೇಳಿದರು.

ಅಭಿವೃದ್ದಿ ಕೆಲಸ ಆಗಬಾರದು, ಕೆಲಸ ಆದರೆ ನಡಹಳ್ಳಿಯವರಿಗೆ ಒಳ್ಳೆಯ ಹೆಸರು ಬರುತ್ತದೆ ಎನ್ನುವ ಹೊಟ್ಟೆಕಿಚ್ಚಿನಿಂದ ಬಹಳ ದೊಡ್ಡ ಕುತಂತ್ರ ನಡೆಸಿದರು. ಆದರೆ, ನಾನು ಬಗ್ಗಲಿಲ್ಲ. ಜನ ನನ್ನನ್ನು ಶಾಸಕನನ್ನಾಗಿ ಮಾಡಿದ್ದಾರೆ. ಅವರಿಗೆ ನ್ಯಾಯ ಕೊಡಿಸಬೇಕಾದದ್ದು ನನ್ನ ಧರ್ಮ. ಆಲಮಟ್ಟಿ ಮುಖ್ಯ ರಸ್ತೆ ಮಾಡಿದ್ದಕ್ಕೆ ಕೆಲವರಿಗೆ ಸಂಕಟವಾಗಿದೆ. 25 ವರ್ಷ ಏನೂ ಮಾಡದವರು, ಬಡವರ ಕಷ್ಟ ಆಲಿಸದವರು, ಅಭಿವೃದ್ದಿ ಕೆಲಸ ಮಾಡದವರು ಟೀಕಿಸುತ್ತಿರುವುದು ಅವರಲ್ಲಿನ ಹತಾಸೆಗೆ ಕಾರಣವಾಗಿದೆ ಎಂದರು.

ಕೊಪ್ಪ ತಾಂಡಾದಲ್ಲಿ ಶಾಸಕರನ್ನು ಎತ್ತಿನ ಬಂಡಿಯಲ್ಲಿ ಕೂರಿಸಿ ಮೆರವಣಿಗೆ ಮಾಡಿ ಗಮನ ಸೆಳೆಯಲಾಯಿತು.
ಅಗಸಬಾಳದಲ್ಲಿ ಗ್ರಾಮಸ್ಥರು ಶಾಸಕರಿಗೆ ಆರತಿ ಎತ್ತಿ ಸ್ವಾಗತಿಸಿ, ಡೊಳ್ಳು ಮೆರವಣಿಗೆ ಮಾಡಿ, ಸನ್ಮಾನಿಸಿದರು. ₹ 5.70 ಕೋಟಿ ಅನುದಾನದ ರಸ್ತೆ, ₹ 82 ಲಕ್ಷ ಅನುದಾನದ ಕೆರೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಮುಖಂಡ ಮಹಾಂತೇಶ (ರಾಜು) ಕಾಶಿನಕುಂಟಿ, ಮಂಜುನಾಥಗೌಡ ಪಾಟೀಲ, ಸುಭಾಷ್ ಗುಡಿಮನಿ, ಶಂಕರಗೌಡ ಕಾಶಿನಕುಂಟಿ, ಬಿ.ಎಂ.ಪಾಟೀಲ, ಬಾಪುಗೌಡ ಬಿರಾದಾರ, ಶಶಿಧರಗೌಡ ಕಾಶಿನಕುಂಟಿ, ಅಯ್ಯಪ್ಪ ಪೂಜಾರಿ, ಶಂಕರ ಕುಂಬಾರ, ಶಿವನಗೌಡ ಕಾಶಿನಕುಂಟಿ, ಶಿವಮಾನ್ಯ ಪೂಜಾರಿ, ಸುರೇಶ ಕಾಶಿನಕುಂಟಿ, ಮುತ್ತು ಮಾದರ, ಶಿವಣ್ಣ ಹುಣಶಾಳ, ಬೋರಮ್ಮ ಬಿರಾದಾರ ಇದ್ದರು.

***
ಹಿಂದಿನವರು ಸರ್ಕಾರಿ ಜಮೀನನ್ನು ಕಬಳಿಸಿ ಕಂದಾಯ ಇಲಾಖೆ ಕಚೇರಿಗಳಲ್ಲಿ ದಾಖಲಾತಿ ಸಿಗದಂತೆ ಮಾಡಿ, ಮುಚ್ಚಿ ಹಾಕಿದ್ದಾರೆ. ಪುಣೆಯಿಂದ ದಾಖಲಾತಿ ತರಿಸಿ ಸರ್ಕಾರದ ಜಮೀನು ಮರಳಿ ಸರ್ಕಾರಕ್ಕೆ ಕೊಡಿಸಲು ಮುಂದಾಗಿದ್ದೇನೆ
-ಎ.ಎಸ್.ಪಾಟೀಲ ನಡಹಳ್ಳಿ, ಶಾಸಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.