ADVERTISEMENT

ವಿಜಯಪುರ ವಿಮಾನ ನಿಲ್ದಾಣ ಮೇಲ್ದರ್ಜೆಗೆ: ಸಚಿವ ವಿ.ಸೋಮಣ್ಣ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 13:51 IST
Last Updated 25 ಡಿಸೆಂಬರ್ 2021, 13:51 IST
ವಿಜಯಪುರ ನಗರ ಸಮೀಪದ ಬುರಣಾಪುರ-ಮದಬಾವಿಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಸ್ಥಳ ಪರಿವೀಕ್ಷಣೆ ಮಾಡಿದ ಬಳಿಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಖಾತೆಯ ಸಚಿವ ವಿ.ಸೋಮಣ್ಣ, ಶಾಸಕ ರಮೇಶ ಭೂಸನೂರ ಇದ್ದಾರೆ
ವಿಜಯಪುರ ನಗರ ಸಮೀಪದ ಬುರಣಾಪುರ-ಮದಬಾವಿಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಸ್ಥಳ ಪರಿವೀಕ್ಷಣೆ ಮಾಡಿದ ಬಳಿಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಖಾತೆಯ ಸಚಿವ ವಿ.ಸೋಮಣ್ಣ, ಶಾಸಕ ರಮೇಶ ಭೂಸನೂರ ಇದ್ದಾರೆ   

ವಿಜಯಪುರ: ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣದಲ್ಲಿ ಎ.ಟಿ. ಆರ್ 72 ವಿಮಾನಗಳ ಹಾರಾಟಕ್ಕಾಗಿ ಕಾಮಗಾರಿ ನಡೆದಿದ್ದು, ಇದನ್ನು ಏರ್ ಬಸ್ 320 ವಿಮಾನಗಳ ಹಾರಾಟಕ್ಕೂ ಅನುಕೂಲವಾಗುವಂತೆ ಮೇಲ್ದರ್ಜೆಗೇರಿಸಲಾಗುವುದು ಎಂದು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಖಾತೆಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರಸಮೀಪದ ಬುರಣಾಪುರ-ಮದಬಾವಿಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಸ್ಥಳ ಪರಿವೀಕ್ಷಣೆ ಮಾಡಿ ಅವರು ಮಾತನಾಡಿದರು.

ವಿಮಾನ ನಿಲ್ದಾಣದ ಕಾಮಗಾರಿಗಳು ಭರದಿಂದ ಸಾಗಿದ್ದು, ಮೇಲ್ದರ್ಜೆಗೇರಿಸಲು ಅವಶ್ಯಕ ಅನುದಾನದ ಖರ್ಚು ವೆಚ್ಚ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ವಿಮಾನ ನಿಲ್ದಾಣದ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವ ಮೂಲಕ ತೋಟಗಾರಿಕಾ ಬೆಳೆಗಾರರಿಗೆ ಹಾಗೂ ರೈತರಿಗೆ ನೆರವಾಗಬೇಕು. ಇದರಿಂದ ತೋಟಗಾರಿಕಾ ಬೆಳೆಗಳ ರಫ್ತಿಗೆ ಹೆಚ್ಚಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ವಿಮಾನ ನಿಲ್ದಾಣದ ಮೊದಲನೇ ಹಂತದ ಕಾಮಗಾರಿಗಳು ₹ 95 ಕೋಟಿ ವೆಚ್ಚದಲ್ಲಿ ಹಾಗೂ ಎರಡನೇ ಹಂತದ ಕಾಮಗಾರಿಗಳು ₹ 125 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಮೊದಲನೇ ಹಂತದ ಶೇ 50 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆದ್ಯತೆ ಮೇಲೆ ಇನ್ನುಳಿದ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.

ಮುಂದಿನ 50 ವರ್ಷಗಳ ಮುಂದಾಲೋಚನೆಯೊಂದಿಗೆ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲು ಅವರು ಸೂಚನೆ ನೀಡಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ,ವಿಜಯಪುರ ಜಿಲ್ಲೆ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಲಿಂಬೆ ಹಣ್ಣಿಗೆ ಪ್ರಸಿದ್ಧಿ ಪಡೆದಿದ್ದು, ಇವುಗಳ ರಫ್ತಿಗೆ ಹಾಗೂ ತೋಟಗಾರಿಕಾ ಬೆಳೆಗಾರರ ಮತ್ತು ರೈತರ ಅನುಕೂಲಕ್ಕಾಗಿ ಬೆಂಗಳೂರು ಮಾದರಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಬೇಕು ಎಂದರು.

ಏರ್ ಬಸ್ 320 ಹಾಗೂ ಕಾರ್ಗೋ ವಿಮಾನಗಳ ಸೌಕರ್ಯ ಹಾಗೂ ಇನ್ನೀತರ ಮೂಲಸೌಕರ್ಯಗಳ ವೃದ್ಧಿ ಹಾಗೂ ರಾತ್ರಿ ಸಮಯದಲ್ಲಿಯೂ ವಿಮಾನ ಹಾರಾಟ ನೆರವಾಗುವ ನಿಟ್ಟಿನಲ್ಲಿ ಸೌಕರ್ಯಗಳನ್ನು ಕಲ್ಪಿಸಲು ಹಾಗೂ ಮೂರು ಸಂಪರ್ಕ ರಸ್ತೆಗಳಾದ ವಿಜಯಪುರದಿಂದ ಬುರಣಾಪೂರ ಹಾಗೂ ಮುಖ್ಯರಸ್ತೆಯಿಂದ ಮದಬಾವಿ ಬದಲಾಗಿ ಬುರಣಾಪೂರ ಹತ್ತಿರ ರಸ್ತೆ ಸಂಪರ್ಕ ಕಲ್ಪಿಸಿದ್ದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಶಾಸಕ ರಮೇಶ ಭೂಸನೂರ, ಹಿರಿಯ ಅಧಿಕಾರಿಗಳಾದ ಬಿ.ಎಚ್ ಅನೀಲಕುಮಾರ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಶಂಕರಗೌಡ ಪಾಟೀಲ, ಮೋಹನ ರಾಜು, ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ, ಬೆಳಗಾವಿ ವೃತ್ತ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಪವಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.