ADVERTISEMENT

ಕೊರೊನಾ ಕತ್ತಲೆ ನಿವಾರಣೆಗೆ ಬೆಳಕಿನ ಮೊರೆ

ಮನೆಮನೆಗಳಲ್ಲಿ ಬೆಳಗಿದ ಹಣತೆ, ಲಾಟೀನು, ಮೊಬೈಲ್‌ ಟಾರ್ಚ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 15:51 IST
Last Updated 5 ಏಪ್ರಿಲ್ 2020, 15:51 IST
ವಿಜಯಪುರದಲ್ಲಿ ಭಾನುವಾರ ರಾತ್ರಿ ಮಹಿಳೆಯರು ಮನೆಯಂಗಳದಲ್ಲಿ ರಂಗೋಲಿಯಲ್ಲಿ ಭಾರತ ನಕ್ಷೆಯನ್ನು ಚಿತ್ರಿಸಿ, ಅದರಲ್ಲಿ ಹಣತೆಯನ್ನು ಬೆಳಗಿಸುವ ಮೂಲಕ ಗಮನ ಸೆಳೆದರು–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರದಲ್ಲಿ ಭಾನುವಾರ ರಾತ್ರಿ ಮಹಿಳೆಯರು ಮನೆಯಂಗಳದಲ್ಲಿ ರಂಗೋಲಿಯಲ್ಲಿ ಭಾರತ ನಕ್ಷೆಯನ್ನು ಚಿತ್ರಿಸಿ, ಅದರಲ್ಲಿ ಹಣತೆಯನ್ನು ಬೆಳಗಿಸುವ ಮೂಲಕ ಗಮನ ಸೆಳೆದರು–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ನಗರದ ಬಹುತೇಕ ಮನೆಗಳಲ್ಲಿ ಭಾನುವಾರ ರಾತ್ರಿ 9 ಗಂಟೆಗೆ ಸರಿಯಾಗಿ ಸಾರ್ವಜನಿಕರು ವಿದ್ಯುತ್‌ ದೀಪಗಳನ್ನು ಆರಿಸಿ ಮೇಣದ ಬತ್ತಿ, ಹಣತೆ, ಟಾರ್ಚ್‌, ಲಾಟೀನು, ಮೊಬೈಲ್‌ ಟಾರ್ಚ್‌ ಬೆಳಗಿಸುವ ಮೂಲಕ ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.

ಕೆಲವರು ಮನೆಯ ಹೊಸ್ತಿನಲ್ಲಿ, ಇನ್ನು ಕೆಲವರು ಮನೆಯ ಅಂಗಳದಲ್ಲಿ, ಮತ್ತೆ ಕೆಲವರು ಮನೆಯ ಬಾಲ್ಕನಿಯಲ್ಲಿ, ಹಲವರು ರಸ್ತೆಗಿಳಿದುದೀಪಬೆಳಗಿಸಿದರು.

ರಂಗೋಲಿಯಲ್ಲಿ ಭಾರತ ನಕಾಶೆ ಬಿಡಿಸಿ ಅದರಲ್ಲಿ ಹಣತೆಯನ್ನು ಇಟ್ಟು ಗಮನ ಸೆಳೆದರು. ಭಾರತ್‌ ಮಾತಾಕೀ ಜೈ, ಪ್ರಧಾನಿ ನರೇಂದ್ರ ಮೋದಿಗೆ ಜೈ ಎಂಬ ಘೋಷಣೆಗಳು ಮೊಳಗಿದವು. ಕೆಲ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾರ್ವಜನಿಕಕರಿಗೆ ಹಣತೆಯನ್ನು ಹಂಚುವ ಮೂಲಕ ದೀಪ ಬೆಳಗಿಸಲು ಪ್ರೋತ್ಸಾಹಿಸಿದರು.

ADVERTISEMENT

ಮುಖಕ್ಕೆ ಮಾಸ್ಕ್‌ ತೊಟ್ಟು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ದೀಪ ಬೆಳಗಿಸುವ ದೃಶ್ಯ ಕಂಡುಬಂದಿತು. ಬಹುತೇಕ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮುಖಕ್ಕೆ ಮಾಸ್ಕ್‌ ತೊಡದೇ ದೀಪ ಬೆಳಗಿಸುವಲ್ಲಿ ನಿರತವಾಗಿದ್ದರು. ಮನೆಗಳಲ್ಲಿ ಶ್ಲೋಕ ಪಠಣ, ಭಜನೆ ಗಾಯನ ಕೇಳಿಬಂದಿತು. ಕೆಲವು ಮನೆಗಳಲ್ಲಿ ಎಂದಿನಂತೆ ವಾತಾವರಣ ಇತ್ತು. ಪ್ರಧಾನಿ ಕರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

ವಿರೋಧ: ಕೊರೊನಾ ವಿರುದ್ಧದ ನಿರ್ಣಯಕ ಹೋರಾಟದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೀಪ ಬೆಳಗಿಸುವ ಅಭಿಯಾನಕ್ಕೆ ಕರೆ ನೀಡಿದಕ್ಕೆ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟುಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ಖಂಡಿಸಿದೆ.

ಕೊರೊನಾ ಸೋಂಕು ನಿವಾರಣೆಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಮತ್ತುದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುರೇಖಾ ಕಡಪಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.