ADVERTISEMENT

ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ಮುಹೂರ್ತ ನಿಗದಿ

35 ವಾರ್ಡ್‌ಗಳಿಗೆ ಅ.28ಕ್ಕೆ ಮತದಾನ; ವಾರ್ಡ್‌ ಮೀಸಲಾತಿ ಆಕ್ಷೇಪಿಸಿ ಹೈಕೋರ್ಟ್‌ ಪೀಠದಲ್ಲಿ ಪ್ರಕರಣ

ಬಸವರಾಜ ಸಂಪಳ್ಳಿ
Published 3 ಅಕ್ಟೋಬರ್ 2022, 19:30 IST
Last Updated 3 ಅಕ್ಟೋಬರ್ 2022, 19:30 IST
ವಿಜಯಪುರ ಮಹಾನಗರ ಪಾಲಿಕೆ ಕಚೇರಿ –ಪ್ರಜಾವಾಣಿ ಚಿತ್ರ
ವಿಜಯಪುರ ಮಹಾನಗರ ಪಾಲಿಕೆ ಕಚೇರಿ –ಪ್ರಜಾವಾಣಿ ಚಿತ್ರ   

ವಿಜಯಪುರ: ಬಹು ನಿರೀಕ್ಷಿತ ವಿಜಯಪುರ ಮಹಾನಗರ ಪಾಲಿಕೆಗೆ ಕೊನೆಗೂ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ.

ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳು ಉಳಿದಿರುವ ಈ ಹೊತ್ತಿನಲ್ಲಿ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆಯಾಗಿರುವುದು ರಾಜಕೀಯ ಪಕ್ಷಗಳಿಗೆ ಸತ್ವ ಪರೀಕ್ಷೆ ಎದುರಾಗಿದೆ. ವಿಧಾನಸಭೆ ಮುನ್ನಾ ಪಾಲಿಕೆ ಚುನಾವಣೆ ನಡೆಯುವುದು ಯಾವ ಪಕ್ಷದವರಿಗೂ ಬೇಡವಾಗಿತ್ತು. ಆದರೆ, ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವುದು ಆಡಳಿತರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್‌, ಜೆಡಿಎಸ್‌ಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಪಾಲಿಕೆ ಚುನಾವಣಾ ಫಲಿತಾಂಶವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ನಗರ ಹಾಗೂ ನಾಗಠಾಣ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು,ಶಾಸಕ ಸ್ಥಾನ ಆಕಾಂಕ್ಷಿಗಳಲ್ಲಿ ಚುನಾವಣೆಗೂ ಮೊದಲೇ ನಡುಕ ಹುಟ್ಟಿಸಿದೆ.

ADVERTISEMENT

3.2 ವರ್ಷ ನನೆಗುದಿಗೆ:

ಮಹಾನಗರ ಪಾಲಿಕೆಯ ಆಡಳಿತಾವಧಿ ಮುಗಿದು ಮೂರು ವರ್ಷ ಎರಡು ತಿಂಗಳಾಗಿದ್ದರೂ ಚುನಾವಣೆ ನಡೆದಿರಲಿಲ್ಲ. ವಾರ್ಡ್‌ ಪುನರ್ವಿಂಗಡೆ ಮತ್ತು ಮೀಸಲಾತಿ ಪ್ರಶ್ನಿಸಿ ಕೆಲವರು ಕೋರ್ಟ್‌ ಮೊರೆ ಹೋಗಿದ್ದ ಕಾರಣ ಚುನಾವಣೆ ನನೆಗುದಿಗೆ ಬಿದ್ದಿತ್ತು. ಇದೀಗ ಎಲ್ಲ ಅಡೆತಡೆಗಳು ಬಹುತೇಕ ನಿವಾರಣೆಯಾಗಿದ್ದು, ಚುನಾವಣೆಗೆ ಕಾಲ ಕೂಡಿ ಬಂದಿದೆ.

ನಗರಸಭೆಯುಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕ ಪಾಲಿಕೆಗೆ ನಡೆಯಲಿರುವ ಪ್ರಥಮ ಚುನಾವಣೆ ಇದಾಗಿದೆ.

2013ರಲ್ಲಿ ವಿಜಯಪುರ ನಗರಸಭೆ ಚುನಾವಣೆ ನಡೆದಿತ್ತು.ಬಳಿಕ 2014 ಜುಲೈನಲ್ಲಿ ರಾಜ್ಯ ಸರ್ಕಾರವು ವಿಜಯಪುರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಿತ್ತು. ಇದರಿಂದ ನಗರಸಭೆ ಸದಸ್ಯರು ಪಾಲಿಕೆ(ಕಾರ್ಪೊರೇಟರ್‌) ಸದಸ್ಯರಾಗುವ ಭಾಗ್ಯ ಒಲಿದಿತ್ತು. ಮಹಾನಗರ ಪಾಲಿಕೆ ಆಡಳಿತಾವಧಿ2019 ಜುಲೈ 30ಕ್ಕೆ ಕೊನೆಗೊಂಡಿತ್ತು.

ಕಾಂಗ್ರೆಸ್‌ ದರ್ಬಾರ್‌:

2013ರಲ್ಲಿ ನಗರಸಭೆಯ 35 ವಾರ್ಡ್‌ಗಳಿಗೆನಡೆದ ಚುನಾವಣೆಯಲ್ಲಿ 13 ವಾರ್ಡ್‌ಗಳಲ್ಲಿ ಬಿಜೆಪಿ, 10ರಲ್ಲಿ ಕಾಂಗ್ರೆಸ್‌, 8ರಲ್ಲಿ ಜೆಡಿಎಸ್‌ ಮತ್ತು ಇಬ್ಬರುಪಕ್ಷೇತರ ಹಾಗೂ ಎನ್‌ಸಿಪಿ ಮತ್ತು ಕೆಜಿಪಿ ತಲಾ ಒಂದು ಸ್ಥಾನದಲ್ಲಿ ಜಯಗಳಿಸಿದ್ದವು.

ಬಿಜೆಪಿ ಅಧಿಕ ಸದಸ್ಯರಿದ್ದರೂ ಸಹ ಪಕ್ಷದ ಬಂಡಾಯ ಸದಸ್ಯರು, ಜೆಡಿಎಸ್‌, ಎನ್‌ಸಿಪಿ, ಕೆಜಿಪಿ ಮತ್ತು ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್‌ ಐದು ವರ್ಷಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

****

ಅ.28ಕ್ಕೆ ಮತದಾನ; 30ಕ್ಕೆ ಫಲಿತಾಂಶ

ವಿಜಯಪುರ: ಮಹಾನಗರ ಪಾಲಿಕೆಯ 35 ವಾರ್ಡ್‌ಗಳಿಗೆ ಅಕ್ಟೋಬರ್‌ 28ರಂದು ಚುನಾವಣಾ ದಿನಾಂಕ ನಿಗದಿಪಡಿಸಿರಾಜ್ಯ ಚುನಾವಣಾ ಆಯೋಗ ಸೋಮವಾರ ಆದೇಶ ಹೊರಡಿಸಿದೆ.

ಅಕ್ಟೋಬರ್‌ 10 ರಂದು ಜಿಲ್ಲಾಧಿಕಾರಿ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದ ಆರಂಭಗೊಂಡು ಅ.17ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ. ಅ. 20 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ ಅ. 28ರಂದು ಬೆಳಿಗ್ಗೆ 5ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಅಗತ್ಯ ಇದ್ದರೆ ಅ.30ರಂದು ಮರು ಮತದಾನ ನಡೆಯಲಿದೆ. ಅ.31ರಂದು ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ.

ಅ.10 ರಿಂದ ಅ.31ರ ವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಈಗಾಗಲೇ ವಾರ್ಡ್‌ ವಿಂಗಡಣೆ, ಮತದಾರರ ಪಟ್ಟಿ ಹಾಗೂ ವಾರ್ಡ್‌ವಾರು ಮೀಸಲಾತಿ ನಿಗದಿಯಾಗಿದೆ. ವಾರ್ಡ್‌ವಾರು ಮೀಸಲಾತಿಗೆ ಆಕ್ಷೇಪ ವ್ಯಕ್ತಪಡಿಸಿ, ಕೆಲವರು ಕಲಬುರ್ಗಿ ಹೈಕೋರ್ಟ್‌ ಪೀಠದ ಮೆಟ್ಟಿಲೇರಿದ್ದಾರೆ. ಅ.11ರಂದು ವಿಚಾರಣೆ ನಡೆಯಲಿದೆ.

****

ಪಾಲಿಕೆ ಚುನಾವಣೆಗೆ ಬಿಜೆಪಿ ಸದಾ ಸಿದ್ಧವಿದೆ. ಕೇಂದ್ರ, ರಾಜ್ಯ ಸರ್ಕಾರ ವಿಜಯಪುರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ಶಾಸಕ ಯತ್ನಾಳ ನಗರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುತ್ತೇವೆ

–ಆರ್‌.ಎಸ್‌.ಪಾಟೀಲ ಕೂಚಬಾಳ, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ, ವಿಜಯಪುರ

***

ಪಾಲಿಕೆ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ಬಾರಿ ಕಾಂಗ್ರೆಸ್‌ ಪೂರ್ಣ ಬಹುಮತದೊಂದಿಗೆಅಧಿಕಾರ ಹಿಡಿಯುವುದು ನಿಶ್ಚಿತ.

ಪ್ರೊ.ರಾಜು ಅಲಗೂರ, ಅಧ್ಯಕ್ಷ, ಕಾಂಗ್ರೆಸ್‌ ಜಿಲ್ಲಾ ಘಟಕ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.