
ಬೆಂಗಳೂರು: ‘ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಡಿ. 7ರಂದು ವೃಕ್ಷೋಥಾನ್-2025 ನಡೆಯಲಿದ್ದು, 15 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
‘ವೃಕ್ಷೋಥಾನ್-2025’ ಓಟದ ಭಿತ್ತಿಪತ್ರ, ಟೀ ಶರ್ಟ್, ಪದಕ ಬಿಡುಗಡೆ ಮಾಡಿ ಸೋಮವಾರ ಮಾತನಾಡಿದ ಅವರು, ‘ವೃಕ್ಷೋಥಾನ್‌ನಲ್ಲಿ ಒಟ್ಟು ₹ 10 ಲಕ್ಷ ಮೊತ್ತದ ಬಹುಮಾನ ನೀಡಲಾಗುವುದು. ವೃಕ್ಷೋಥಾನ್ ಯಾವುದೇ ವಯೋಮಿತಿಯ ನಿರ್ಬಂಧವಿಲ್ಲದೆ 5 ಕಿ.ಮೀ, 10 ಕಿ.ಮೀ. ಮತ್ತು 21 ಕಿ.ಮೀ. ವಿಭಾಗದಲ್ಲಿ ನಡೆಯಲಿದೆ’ ಎಂದರು.
‘ಸ್ವಚ್ಚ, ಸುಂದರ, ಹಸಿರು ವಿಜಯಪುರಕ್ಕಾಗಿ ಓಡಿ’ ಎಂಬ ಘೋಷ ವ್ಯಾಕ್ಯದಡಿ ನಡೆಯಲಿರುವ ಈ ಬಾರಿ ವೃಕ್ಷೋಥಾನ್ ಮೂಲಕ ವಿಜಯಪುರದ ಚಾರಿತ್ರಿಕ ತಾಣಗಳನ್ನೂ ಬೆಸೆಯಲಾಗಿದೆ. ಇದರಂತೆ ಗೋಲ್ ಗುಂಬಜ್, ಗಗನ್ ಮಹಲ್ ಸುಂದರೇಶ್ವರ ದೇವಸ್ಥಾನ, ಸೈನಿಕ್ ಸ್ಕೂಲ್, ನರಸಿಂಹಸ್ವಾಮಿ ದೇವಸ್ಥಾನ, ಸಿದ್ಧೇಶ್ವರ ದೇವಸ್ಥಾನ, ಇಬ್ರಾಹಿಂ ರೋಜಾ, ಬಾರಾ ಕಾಮಾನ್‌ಗಳನ್ನು ಇದು ಹಾದು ಹೋಗಲಿದೆ’ ಎಂದರು.
‘ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ‘ಕೋಟಿ ವೃಕ್ಷ ಅಭಿಯಾನ’ದಡಿ ಕಳೆದ ಒಂಬತ್ತು ವರ್ಷಗಳಲ್ಲಿ ಒಂದೂವರೆ ಕೋಟಿ ಸಸಿಗಳನ್ನು ನೆಡಲಾಗಿದೆ. 2030ರ ವೇಳೆಗೆ ಇನ್ನೂ 3.50 ಕೋಟಿ ಸಸಿಗಳನ್ನು ನೆಟ್ಟು, 5 ಕೋಟಿ ಸಸಿಗಳ ಗುರಿ ಸಾಧಿಸಲಾಗುವುದು’ ಎಂದರು.
‘ವಿಜಯಪುರ ಜಿಲ್ಲೆಯಲ್ಲಿ 2016ರಲ್ಲಿಕೇವಲ ಶೇ 0.17ರಷ್ಟು ಮಾತ್ರ ಅರಣ್ಯವಿತ್ತು. ಆಗ ಜಿಲ್ಲಾಡಳಿತ ಹಾಗೂ ಪಕ್ಷಾತೀತವಾಗಿ ಹಲವು ಸಂಘಸಂಸ್ಥೆಗಳು, ಬಿ.ಎಲ್.ಡಿ.ಇ. ಅಸೋಸಿಯೇಷನ್ ಮೂಲಕ ಕೋಟಿ ವೃಕ್ಷ ಅಭಿಯಾನ ರೂಪಿಸಲಾಯಿತು. ಹೀಗಾಗಿ ಈಗ ಜಿಲ್ಲೆಯಲ್ಲಿ ಹಸಿರು ಹೊದಿಕೆಯು ಶೇ 2.4ರಷ್ಟಕ್ಕೆ ವೃದ್ಧಿಸಿದೆ’ ಎಂದರು.
‘ಶುದ್ಧ ಗಾಳಿಯ ಗುಣಮಟ್ಟದಲ್ಲಿ ಇಡೀ ದೇಶದಲ್ಲಿ ವಿಜಯಪುರ ಜಿಲ್ಲೆ ತೃತೀಯ ಸ್ಥಾನದಲ್ಲಿದೆ. ಅಂರ್ತಜಲ ಮಟ್ಟ ವೃದ್ಧಿಸಿದ್ದು, ಮಣ್ಣಿನ ಸವಕಳಿ ಮತ್ತು ಮರು ಅರಣ್ಯೀಕರಣ ಸಾಧ್ಯವಾಗಿದೆ. ಅಲ್ಲದೆ, ಬಿಸಿಲಿನ ತಾಪಮಾನ ಮೊದಲಿಗಿಂತ 0.5 ಡಿಗ್ರಿ ಸೆಲ್ಸಿಯಷ್ಟು ಕಡಿಮೆಯಾಗಿದ್ದು, ಮಳೆ ಪ್ರಮಾಣವು 550 ಮಿ.ಮೀ. ಇದ್ದಿದ್ದು ಈಗ 650 ಮಿ.ಮೀ.ವರೆಗೂ ಹೆಚ್ಚಳವಾಗಿದೆ’ ಎಂದರು.
‘ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಸಿಎಸ್ಆರ್ ನಿಧಿಯಡಿ ಮೊದಲ ಐದು ವರ್ಷ ತಲಾ 10 ಲಕ್ಷ ಸಸಿಗಳನ್ನು ವಿತರಿಸಲಾಯಿತು. ರೈತರಿಗೆ ತಮಗೆ ಬೇಕಾದ ಗಿಡಗಳನ್ನು ಉಚಿತವಾಗಿ ಹಂಚಲಾಗುತ್ತಿದೆ. ಇದಕ್ಕಾಗಿ 2016ರಲ್ಲಿ ಸರ್ಕಾರದ ವಿಶೇಷ ಅನುದಾನವನ್ನೂ ಪಡೆದುಕೊಳ್ಳಲಾಗಿತ್ತು. ಇಂತಹ ಸೌಲಭ್ಯವನ್ನು ಮುಂದಿನ 5-10 ವರ್ಷಗಳಿಗೆ ವಿಸ್ತರಿಸಿಕೊಂಡು, 5 ಕೋಟಿ ಗಿಡ ನೆಡುವ ಮಹದಾಸೆ ನಮ್ಮದಾಗಿದೆ. ಈಗ ವಾರ್ಷಿಕ ಮಳೆಯ ದಿನಗಳು ಕೂಡ ಮೊದಲಿದ್ದ 20-30 ದಿನಗಳಿಂದ 40 ದಿನಗಳಿಗೆ ಹಿಗ್ಗಿದೆ’ ಎಂದರು.
‘ಕೋಟಿ ವೃಕ್ಷ ಅಭಿಯಾನದಿಂದ ವಿಜಯಪುರ ಜಿಲ್ಲೆಯಲ್ಲಿ ಜೀವವೈವಿಧ್ಯ ಪೋಷಣೆ ಸಾಧ್ಯವಾಗಿದ್ದು, 180ಕ್ಕೂ ಹೆಚ್ಚು ಬಗೆಯ ಗಿಡಗಳನ್ನು ನೆಡಲಾಗಿದೆ. ಇವುಗಳಿಗೆ ಹನಿ ನೀರಾವರಿ ಮತ್ತು ಸೌರವಿದ್ಯುತ್ ಮೂಲಕ ನೀರು ಪೂರೈಸಲಾಗುತ್ತಿದೆ. ವಿಜಯಪುರಕ್ಕೆ ನೀರು ಒದಗಿಸುವ ಭೂತನಾಳ ಕೆರೆಯ ಸುತ್ತಮುತ್ತ ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಜೊತೆಗೆ ಮಮದಾಪುರ ಕೆರೆಯ ಪ್ರದೇಶದಲ್ಲಿ 1,600 ಎಕರೆಯಲ್ಲಿ 1.27 ಲಕ್ಷ ಗಿಡ ನೆಟ್ಟು ಹಸಿರು ಹೊದಿಕೆಯನ್ನು ಸೃಷ್ಟಿಸಲಾಗಿದೆ. ಇಲ್ಲಿ ಇನ್ನೂ 20 ಸಾವಿರಕ್ಕೂ ಹೆಚ್ಚು ಗಿಡ ನೆಡಲಾಗುವುದು’ ಎಂದರು,
‘ವೃಕ್ಷೋಥಾನ್-2025’ದಲ್ಲಿ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ, ಸೇನಾ ಸಿಬ್ಬಂದಿ, ವಿಜಯಪುರ ಸೈಕ್ಲಿಂಗ್ ಗ್ರೂಪ್, ಅರಣ್ಯ ಇಲಾಖೆ, 50ಕ್ಕೂ ಹೆಚ್ಚು ಸಂಘಸಂಸ್ಥೆಗಳು ಸಕ್ರಿಯವಾಗಿ ತೊಡಗಿಕೊಳ್ಳಲಿವೆ. ಆಸಕ್ತರು www.vrukhothon.co.in ಮೂಲಕ ನೋಂದಾಯಿಸಿಕೊಳ್ಳಬಹುದು’ ಎಂದೂ ಸಚಿವರು ತಿಳಿಸಿದರು.
ಅಭಿಯಾನದ ಸಂಚಾಲಕರಾದ ಮುರುಗೇಶ್ ಪಟ್ಟಣ ಶೆಟ್ಟಿ, ಪದಾಧಿಕಾರಿಗಳಾದ ವೀರೇಂದ್ರ ಗುಚ್ಚಟ್ಟಿ, ಡಾ. ರಾಜುಯಲಗೊಂಡ, ಸೋಮು ಮಠ ಗುರೂಜಿ, ನಂದೀಶ್ ಹುಂಡೇಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.