ADVERTISEMENT

ಕೈಗಾರಿಕಾ ಸಂಸ್ಕೃತಿ ಜಿಲ್ಲೆಯಾಗಿ ವಿಜಯಪುರ: ಎಂ.ಬಿ. ಪಾಟೀಲ

79ನೇ ಸ್ವಾತಂತ್ರ್ಯ ದಿನವನ್ನು ಸಡಗರ, ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 3:09 IST
Last Updated 16 ಆಗಸ್ಟ್ 2025, 3:09 IST
ವಿಜಯಪುರ ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ   

ವಿಜಯಪುರ: ‘ವಿಜಯಪುರ ಅಂದರೆ ಬರಪೀಡಿತ ಪ್ರದೇಶ ಎನ್ನುವ ಕಾಲ ಆಗಿ ಹೋಯಿತು. ಈಗ ಇದು ತೋಟಗಾರಿಕೆ ಜಿಲ್ಲೆ ಎಂದು ಹೆಸರಾಗಿದೆ. ಇದರ ಜೊತೆಗೆ ವಿಜಯಪುರವನ್ನು ಕೈಗಾರಿಕಾ ಸಂಸ್ಕೃತಿಯ ಜಿಲ್ಲೆಯನ್ನಾಗಿ ಮಾಡಬೇಕೆಂಬುದು ನನ್ನ ಮಹಾದಾಸೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು. 

ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ಜಿಲ್ಲೆಯನ್ನು ಇಂಧನ ಕ್ಷೇತ್ರದ ಸಾಧನಗಳು, ಮೆಷನರಿ ಮತ್ತು ಎಕ್ವಿಪ್ ಮೆಂಟ್, ನಾನ್ ಮೆಟಲಿಕ್ ಖನಿಜ ಉತ್ಪನ್ನಗಳು, ಕೃಷಿ ಮತ್ತು ಕೃಷಿ ಆಧಾರಿತ ಉತ್ಪನ್ನಗಳು, ನ್ಯೂಟ್ರಾಸುಟಿಕಲ್ ಮೆಡಿಸಿನ್ ಮತ್ತು ಬೊಟಾನಿಕಲ್ ಉತ್ಪನ್ನಗಳು, ವಿಶೇಷ ಅಲಾಯ್ ಮತ್ತು ಲೋಹೋತ್ಪನ್ನ ವಲಯಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು’ ಎಂದರು.

ADVERTISEMENT

ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದ ಕುಸಿತಕ್ಕೆ ನಿಖರವಾದ ಕಾರಣಗಳನ್ನು ಗುರುತಿಸಲು ಮತ್ತು 2025-26ನೇ ಸಾಲಿನ ಫಲಿತಾಂಶ ವೃದ್ಧಿಗಾಗಿ ಪೂರಕವಾದ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.

ಆಯ್ದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಎನ್.ಎಸ್.ಕ್ಯೂ.ಎಫ್ ಸೆಕ್ಟರ್‌ಗಳನ್ನು ಪ್ರಾರಂಭಿಸಿ, ಕೌಶಲ ಆಧಾರಿತ ಶಿಕ್ಷಣ ನೀಡಲು ಕ್ರಮ ವಹಿಸಲಾಗಿದೆ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖಾ ವ್ಯಾಪ್ತಿಯ ಸಿ.ಎಸ್.ಆರ್ ಘಟಕಗಳ ಮೂಲಕ ಜಿಲ್ಲೆಯ ಆಯ್ದ ಸರ್ಕಾರಿ ಪ್ರಾಥಮಿಕ ಶಾಲೆಗಳ ಆವರಣದಲ್ಲಿ 1 ರಿಂದ 2 ಎಕರೆಯಷ್ಟು ಜಮೀನು ಲಭ್ಯವಿರುವ ಶಾಲೆಗಳಲ್ಲಿ ಮಕ್ಕಳ ಸ್ನೇಹಿ ಆಟದ ಪಾರ್ಕ್ ನಿರ್ಮಿಸಿ ಅಗತ್ಯ ಆಟೋಪಕರಣಗಳನ್ನು ಒದಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ವೃಕ್ಷೋಥಾನ್‌

ಡಿಸೆಂಬರ್‌ 7ಕ್ಕೆ ವಿಜಯಪುರ ಜಿಲ್ಲೆಯಲ್ಲಿ ವೃಕ್ಷ ಅಭಿಯಾನ ಜನಜಾಗೃತಿಗಾಗಿ ಪ್ರತಿವರ್ಷ ಹಮ್ಮಿಕೊಳ್ಳುವ ವೃಕ್ಷೋಥಾನ್‌ ಈ ಬಾರಿ ಬರುವ ಡಿಸೆಂಬರ್ 7 ರಂದು ಜರುಗಲಿದೆ. ಇಂದಿನಿಂದ ನೋಂದಣಿ ಆರಂಭಗೊಳ್ಳಲಿದ್ದು ತಾವೆಲ್ಲರೂ ನೋಂದಣಿ ಮಾಡಿ ಇದರಲ್ಲಿ ಭಾಗವಹಿಸುವುದರ ಜೊತೆಗೆ ಸ್ವಚ್ಚ ಸುಂದರ ಸದೃಡ ವಿಜಯಪುರಕ್ಕೆ ಕೈಜೋಡಿಸೋಣ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.