
ವಿಜಯಪುರ: ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಜನನ-ಮರಣವನ್ನು ನಿಗದಿತ ಕಾಲಾವಧಿಯೊಳಗಾಗಿ ನೋಂದಣಿಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ.ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜನನ-ಮರಣ ನೋಂದಣಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ನಿಗದಿತ 21 ದಿನಗಳೊಳಗಾಗಿ ಜನನ-ಮರಣ ನೋಂದಣಿಗೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ತಾಲ್ಲೂಕು ಮಟ್ಟದಲ್ಲಿ ತರಬೇತಿಯನ್ನು ಆಯೋಜಿಸಿ, ನೋಂದಣಿ ಸಂದರ್ಭದಲ್ಲಿ ಉಂಟಾಗುವ ತೊಡಕುಗಳ ನಿವಾರಿಸಿಕೊಂಡು ನಿರ್ವಹಿಸುವ ಕುರಿತು ಸೂಕ್ತ ತಿಳಿವಳಿಕೆ ಮೂಡಿಸಿ, ನಿಗದಿತ ಕಾಲಾವಧಿಯಲ್ಲಿ ಜನನ-ಮರಣ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ಗ್ರಾಮೀಣ ಮಟ್ಟದ ಜನನ ಮರಣ ಘಟನೆಗಳನ್ನು ಎಲ್ಲಾ ಗ್ರಾಮ ಪಂಚಾಯಿತಿಯಲ್ಲೂ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಯಲ್ಲಾದರೆ ಗ್ರಾಮ ಪಂಚಾಯಿತಿಯವರು ಪ್ರಮಾಣ ಪತ್ರ ನೀಡಬೇಕು. ದಾಖಲಿಸುವ ಅಧಿಕಾರಿ, ಸಿಬ್ಬಂದಿಗೆ ತರಬೇತಿ ಒದಗಿಸುವತ್ತ ಕ್ರಮವಹಿಸುವಂತೆ ಸೂಚಿಸಿದರು.
ಮಾಹಿತಿದಾರರ ಕಾಲಂನಲ್ಲಿ ಜನನ ಹಾಗೂ ಮರಣ ಸಂಬಂಧಿಸಿದಂತೆ ಅವರ ಸಂಬಂಧಿಕರಿಂದ ಹಾಗೂ ಹಾಗೂ ಘಟನೆ ನೋಂದಣಿ ಮಾಡುವವರು ಸಹಿ ಕಡ್ಡಾಯವಾಗಿ ಮಾಡಿರಬೇಕು. ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಾಗುವ ಜನನ-ಮರಣ ಹಾಗೂ ನಿರ್ಜೀವ ಜನನ ಘಟನೆಗಳನ್ನು ನಿಗದಿತ ಅವಧಿಯಲ್ಲಿಯೇ ದಾಖಲಿಸಿ, ಅನುಮೋದಿಸಬೇಕು ಎಂದರು.
ಜನನ ಮರಣ ಘಟನೆ ಸಂಭವಿಸಿದ 30 ದಿನಗಳ ನಂತರ 365 ದಿನಗಳ ಒಳಗಾಗಿ ದಾಖಲಿಸಬೇಕಾದರೆ ಗ್ರಾಮಾಂತರ ಪ್ರದೇಶಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಹಾಗೂ ನಗರ-ಪಟ್ಟಣ ಪ್ರದೇಶಕ್ಕೆ ಸಂಬಂಧಪಟ್ಟಲ್ಲಿ ಮಹಾನಗರ ಪಾಲಿಕೆಯ ಆಯುಕ್ತರ, ಪುರಸಭೆ-ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯವರ ಲಿಖಿತ ಅನುಮತಿ ಪಡೆದು ದಾಖಲಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ, ತಾಲ್ಲೂಕುಗಳಲ್ಲಿ ಹಾಗೂ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ನೋಂದಣಿಯಾದ ಜನನ, ಮರಣ ವಿಳಂಬ ನೋಂದಣಿಯಾಗದಂತೆ ನಿಗಾ ವಹಿಸುವಂತೆ ಸೂಚಿಸಿದರು.
ಜನನ-ಮರಣ, ನಿರ್ಜೀವ ಜನನ ಘಟನೆಗಳ ನೋಂದಣಿ ನಮೂನೆಗಳಾದ 1, 2 ಹಾಗೂ 3ರ ಕಾನೂನು ಭಾಗ ಹಾಗೂ ಸಾಂಖ್ಯಿಕ ಭಾಗದ ಎಲ್ಲ ಕಾಲಂಗಳನ್ನು ಸ್ಪಷ್ಟವಾಗಿ ಹಾಗೂ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಬೇಕು. ಗ್ರಾಮಾಂತರ ಪ್ರದೇಶದ ಎಲ್ಲಾ ನೋಂದಣಿ ಹಾಗೂ ಉಪ ನೋಂದಣಾಧಿಕಾರಿಗಳಿಂದ ಆರೋಗ್ಯ ಸಂಸ್ಥೆಗಳು, ಸಂಬಂಧಿಸಿದ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ತಿಂಗಳ 5 ರೊಳಗಾಗಿ ಸಾಂಖ್ಯಿಕ ಭಾಗದ ಮಾಹಿತಿಯನ್ನು ಸ್ವೀಕರಿಸಿ, ಆಯಾ ತಿಂಗಳ 10 ರೊಳಗಾಗಿ ಸಂಬಂಧಿಸಿದವರಿಗೆ ಸಲ್ಲಿಸಬೇಕು ಎಂದರು.
ಪಟ್ಟಣ ಪ್ರದೇಶದ ನೋಂದಣಿದಾರರು 10ನೇ ದಿನಾಂಕದೊಳಗಾಗಿ ಸಲ್ಲಿಸಬೇಕು. ಜಿಲ್ಲೆಯ ನೋಂದಣಾಧಿಕಾರಿಗಳು ಹಾಗೂ ಉಪನೋಂದಣಾಧಿಕಾರಿಗಳಿಗೆ ನಿಗದಿತ ಸಮಯದಲ್ಲಿ ಸಾಂಖ್ಯಿಕ ಭಾಗದ ಮಾಹಿತಿಯನ್ನು ಒದಗಿಸುವಂತೆಯೂ, ತಾಲ್ಲೂಕು ಮಟ್ಟದ ಸಮನ್ವಯ ಸಮಿತಿಯನ್ನು ಕಾಲ-ಕಾಲಕ್ಕೆ ನಡೆಸುವಂತೆ ಸೂಚಿಸಿದರು.
2023ನೇ ಸಾಲಿನ ಅವಧಿ ಮುಕ್ತಾಯಗೊಂಡ ಗ್ರಾಮಾಂತರ ಪ್ರದೇಶದ ಜನನ-ಮರಣ ಹಾಗೂ ನಿರ್ಜೀವ ಜನನ ಘಟನೆಗಳ ಕಾನೂನು ಭಾಗಗಳನ್ನು ಗ್ರಾಮ ಆಡಳಿತಾಧಿಕಾರಿಯವರು ಮತ್ತು ಸರ್ಕಾರಿ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಯವರು ತಹಶೀಲ್ದಾರ್ ಅವರಿಗೆ ಹಾಗೂ ಪಟ್ಟಣ-ನಗರ ಪ್ರದೇಶದ ಆರೋಗ್ಯ ಸಂಸ್ಥೆಯವರು ಕಾನೂನು ಭಾಗಗಳನ್ನು ಸಂಬಂಧಿಸಿದ ಮಹಾನಗರ ಪಾಲಿಕೆಯ ಆಯುಕ್ತರಿಗೆ, ಮುಖ್ಯಾಧಿಕಾರಿ ಪುರಸಭೆ-ಪಟ್ಟಣ ಪಂಚಾಯಿತಿ ಅವರಿಗೆ ಕಡ್ಡಾಯವಾಗಿ ಹಸ್ತಾಂತರಿಸುವ ಕುರಿತು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕೆ.ಕೆ.ಚವ್ಹಾಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಂಪತಕುಮಾರ ಗುಣಾರಿ, ಜಿಲ್ಲಾಸ್ಪತ್ರೆಯ ಉಪಮುಖ್ಯ ವೈದಾಧಿಕಾರಿ ಎ.ಜೆ. ಬಿರಾದಾರ, ಜಿಲ್ಲಾ ಸಂಖ್ಯಾ ಸಂಗ್ರಹಾಣಾಧಿಕಾರಿ ಜ್ಯೋತಿ ದೇಶಪಾಂಡೆ, ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕ ಅಲ್ತಾಫ ಅಹ್ಮದ ಬಾಶಾಲಾಲ ಮಣಿಯಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.