
ವಿಜಯಪುರ: ‘ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾನೂನು ಕುರಿತಾಗಿ ವ್ಯಾಪಕ ಜಾಗೃತಿ ಮೂಡಿಸಲು ಬೇಕರಿ, ಇಟ್ಟಿಗೆ ಭಟ್ಟಿ, ಹೋಟೆಲ್, ಡಾಬಾ ಸೇರಿದಂತೆ ವಿವಿಧ ಕಡೆಗಳಲ್ಲಿ ಕಾಯ್ದೆಯ ಕುರಿತ, ಎಲ್ಲರಿಗೂ ಕಾಣುವ ಹಾಗೆ ಮಾಹಿತಿ ಫಲಕ ಅಳವಡಿಸಿಕೊಳ್ಳಲು ಮಾಲೀಕರಿಗೆ ಅಗತ್ಯ ತಿಳಿವಳಿಕೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ಆನಂದ್ ಕೆ. ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಬಾಲ ಕಾರ್ಮಿಕ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಇನ್ನಷ್ಟು ಕ್ರಿಯಾಶೀಲವಾಗಿ ಎಲ್ಲ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪ್ರಕರಣಗಳು ಆಗದಂತೆ ನಿಗಾ ವಹಿಸಬೇಕು’ ಎಂದು ಹೇಳಿದರು.
‘ಶಾಲೆಯಿಂದ ಹೊರಗುಳಿದ ಮಕ್ಕಳು ಕಂಡು ಬಂದಲ್ಲಿ, ಮಕ್ಕಳ ಬಗ್ಗೆ ಪರಿಶೀಲನೆ ಮಾಡಿ, ಅವರನ್ನು ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ತಿಳಿವಳಿಕೆ ನೀಡಬೇಕು. ಶಾಲಾ ಮುಖ್ಯಗುರು ಒಂದು ವಾರಕ್ಕಿಂತ ಹೆಚ್ಚು ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ತೀವ್ರ ನಿಗಾವಹಿಸಿ, ಖುದ್ದು ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು’ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
‘ಜಿಲ್ಲೆಯಲ್ಲಿರುವ ಬಾಲಕಾರ್ಮಿಕರ ರಕ್ಷಣೆಗೆ ನಿಯಮಿತವಾಗಿ ಸಂಬಂಧಿಸಿದ ಇಲಾಖೆಗಳ ತಂಡಗಳನ್ನು ರಚಿಸಿಕೊಂಡು ಪ್ರತಿ ತಿಂಗಳು ತಾಲ್ಲೂಕುಮಟ್ಟದಲ್ಲಿ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಅನಿರೀಕ್ಷಿತ ದಾಳಿ ಮಾಡಿ, ರಕ್ಷಣೆ ಮಾಡಬೇಕು. ಅದರಲ್ಲೂ ತಾಲ್ಲೂಕು ಮಟ್ಟದ ಕಾರ್ಯಪಡೆ ಸಭೆಯನ್ನು ಕಾಲ-ಕಾಲಕ್ಕೆ ನಡೆಸಬೇಕು. ರಕ್ಷಣೆ ಮಾಡಿದ ಬಾಲ ಕಾರ್ಮಿಕರ ಪುನರ್ ವಸತಿಗಾಗಿ ₹20 ಸಾವಿರ ಮಾಲೀಕರಿಂದ ಪಡೆದು, ಸ್ಥಿರ ಠೇವಣಿ ಇರಿಸಿ, 18 ವರ್ಷದ ನಂತರ ಹಣ ಹಿಂದಿರುಗಿಸಲು ಕ್ರಮ ವಹಿಸಬೇಕು. ಮಕ್ಕಳಿಗೆ ಹಾಗೂ ಪೋಷಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.
ಬಾಲಕಾರ್ಮಿಕ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಶಾಲಾ ಕಾಲೇಜಿನಲ್ಲಿ ಕ್ವಿಜ್, ಪ್ರಬಂಧ ಸ್ಪರ್ಧೆ,ರಂಗೋಲಿ ಬಿಡಿಸುವ, ಬೀದಿ ನಾಟಕ ಆಯೋಜನೆ ಒಳಗೊಂಡಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅವರು ಸೂಚಿಸಿದರು.
ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಈರಯ್ಯ ಸಾಲಿಮಠ, ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ, ಜಿಲ್ಲಾ ಪಂಚಾಯಿತಿಯ ಮುಖ್ಯಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.