ADVERTISEMENT

ವಿಜಯಪುರ: ಜಾನುವಾರು ಅಕ್ರಮ ಸಾಗಾಟ ತಡೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 14:24 IST
Last Updated 15 ಜುಲೈ 2020, 14:24 IST
ವೈ.ಎಸ್.ಪಾಟೀಲ
ವೈ.ಎಸ್.ಪಾಟೀಲ   

ವಿಜಯಪುರ: ಜಿಲ್ಲೆಯಲ್ಲಿ ಜಾನುವಾರುಗಳನ್ನುಅಕ್ರಮವಾಗಿ ಸಾಗಾಟ ಮತ್ತು ಗೋ ಹತ್ಯೆಯ ಬಗ್ಗೆ ತೀವ್ರ ನಿಗಾ ಇಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬಕ್ರೀದ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಾನುವಾರು ಅಕ್ರಮ ಸಾಗಾಟ ಮತ್ತು ಗೋಹತ್ಯೆ ತಡೆಗಾಗಿ ವಿಜಯಪುರ ನಗರದಲ್ಲಿ 4 ಹಾಗೂ ಪ್ರತಿ ತಾಲ್ಲೂಕಿನಲ್ಲಿ ಒಂದರಂತೆ ಜಿಲ್ಲೆಯಲ್ಲಿ ಎಂಟು ತಂಡಗಳನ್ನು ರಚಿಸಲಾಗಿದೆ ಎಂದರು.

ADVERTISEMENT

ಜಾನುವಾರು ಅಕ್ರಮ ಸಾಗಾಟ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಅಕ್ರಮವಾಗಿ ಜಾನುವಾರು ವಧೆಗೆ ಸಂಬಂಧಿಸಿದಂತೆ ಪಶು ಸಂಗೋಪನೆ, ಪಶುವೈದ್ಯರು ಹಾಗೂ ಪಶುವೈದ್ಯ ಪರಿವೀಕ್ಷಕರು ಮತ್ತು ಪೊಲೀಸ್‌ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು.

ಮುಂಬರುವ ಬಕ್ರೀದ್ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮುಸ್ಲಿಂ ಬಾಂಧವರು ಕೂಡಾ ಕೋವಿಡ್ ಅಪಾಯದ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ಗುಂಪು-ಗುಂಪಾಗಿ ಸೇರಬಾರದು. ಸೌಹಾರ್ದ ಮತ್ತು ಶಾಂತಿಯುತವಾಗಿ ಪರಸ್ಪರ ಅಂತರ ಕಾಯ್ದುಕೊಂಡು ಕಾರ್ಯಕ್ರಮ ಆಚರಿಸಬೇಕು ಎಂದರು.

ಜಿಲ್ಲೆಯಲ್ಲಿ ಬಿಡಾಡಿ ದನಗಳು, ಜಾನುವಾರು ಮತ್ತು ಶ್ವಾನಗಳಿಗೆ ಮುಂಬರುವ 14 ದಿನಗಳ ಕಾಲ ಸರ್ಕಾರೇತರ ಸಂಘ ಸಂಸ್ಥೆಗಳ ನೆರವಿನೊಂದಿಗೆ ಮೇವು, ಆಹಾರ ವಿತರಿಸುವುದರ ಜೊತೆಗೆ ಅವಶ್ಯಕ ಕಡೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪಶು ಸಂಗೋಪನೆ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಎನ್.ಜಿ.ಒಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಮಹಾನಗರ ಪಾಲಿಕೆ ಆಯುಕ್ತ ಶ್ರೀ ಹರ್ಷ ಶೆಟ್ಟಿ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಟಿ. ವೇಣುಗೋಪಾಲ, ಹುಣಸಿಕಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.