ವಿಜಯಪುರದ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ನಡೆದಶ್ವಾನ ಪ್ರದರ್ಶನದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಮುಧೋಳ ನಾಯಿಗಳನ್ನು ವೀಕ್ಷಿಸಿದರು
ವಿಜಯಪುರ: ಒಂದೆಡೆ ಮುದ್ದು, ಮುದ್ದಾದ ನಾಯಿಗಳು ತಮ್ಮ ಸೌಂದರ್ಯ, ವೈಯ್ಯಾರ, ವಿನಿಯತೆ, ಪ್ರೀತಿಯಿಂದ ನೋಡುಗರ ಮನ ಗೆದ್ದರೆ, ಇನ್ನೊಂದೆಡೆ ದೈತ್ಯಾಕಾರದ ದೇಹ, ಕೆಕ್ಕರಿಸಿದ ನೋಟ, ತೆರೆದ ಬಾಯಿ, ಚೂಪಾದ ಹಲ್ಲು, ಒಳ–ಹೊರಗೆ ಓಡುವ ಉದ್ದನೆಯ ನಾಲಿಗೆ, ಭಯ ಹುಟ್ಟಿಸುವ ಬೊಗಳುವಿಕೆ, ಮೈಮೇಲೆ ಎರಗುವಷ್ಟು ಶಕ್ತಿಸಾಲಿ ಶ್ವಾನಗಳ ಸಂಗಮಕ್ಕೆ ನಗರದ ಪೊಲೀಸ್ ಪರೇಡ್ ಮೈದಾನ ಸಾಕ್ಷಿಯಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಶ್ರಯ ದಲ್ಲಿ ಶನಿವಾರ ಆಯೋ ಜಿಸಿದ್ದ ಜಿಲ್ಲಾಮಟ್ಟದ ಶ್ವಾನ ಪ್ರದರ್ಶನದಲ್ಲಿ ಪುಟ್ಟ ಗಾತ್ರದ ಶ್ವಾನಗಳಿಂದ ಹಿಡಿದು ಬೃಹತ್ ಗಾತ್ರದ ಶ್ವಾನಗಳು ನೋಡುಗರ ಗಮನ ಸೆಳೆದವು.
ಸೈಬೀರಿಯನ್ ಹಸ್ಕಿ, ಪಮೇರಿಯನ್, ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್, ಸಿಡ್ಜ್, ಪಗ್, ಬಾಕ್ಸರ್, ಗ್ರೇಡ್ ಡೆನ್, ಡ್ಯಾಶ್‌ಹೌಂಡ್, ಮುಧೋಳ ಹೌಂಡ್, ಸೇಂಟ್ ಬರ್ನಾರ್ಡ್, ಲೋಬೋ ಅರ್ಜೆಂಟಿನಾ, ಫ್ರೆಂಚ್ ಬುಲ್ಡಾಗ್, ಬೀಗಲ್, ಐರಿಷ್, ಗೋಲ್ಡನ್ ರಿಟ್ರೀವರ್ ಸೇರಿದಂತೆ ದೇಶ, ವಿದೇಶದ ಸುಮಾರು 20ಕ್ಕೂ ಅಧಿಕ ವಿಭಿನ್ನ ತಳಿಯ 200ಕ್ಕೂ ಅಧಿಕ ಶ್ವಾನಗಳು ಅಲ್ಲಿ ಸೇರಿದ್ದವು. ನೂರಾರು ಶ್ವಾನ ಪ್ರೀಯರು ಮುದ್ದು ಶ್ವಾನಗಳನ್ನು ಕರೆತಂದು ಪ್ರದರ್ಶನ ಮಾಡಿದರು.
ಬಾಲ ಆಡಿಸುತ್ತ, ನಾಲಿಗೆ ಚಾಚುತ್ತ ಓಲಾಡುತ್ತ ಮಾಲೀಕನ ಆದೇಶಕ್ಕೆ ತಕ್ಕಂತೆ ಭಾವ–ಭಂಗಿ ಪ್ರದರ್ಶಿಸಿದ ವಿವಿಧ ತಳಿಯ, ಹಲವು ಬಗೆಯ ಶ್ವಾನಗಳು ಮೆಚ್ಚುಗೆಗೆ ಪಾತ್ರವಾದವು. ಆರೋಗ್ಯಯುತ ಹಾಗೂ ಉತ್ತಮ ನಡತೆಯುಳ್ಳ ಮತ್ತು ಚುರುಕುಮತಿಯಾದ ಶ್ವಾನಗಳಿಗೆ ನಗದು ಮತ್ತು ಟ್ರೋಪಿಯನ್ನು ತಮ್ಮ ಮುಡಿಗೇರಿಸಿಕೊಂಡವು. ದೇಶ, ವಿದೇಶ ತಳಿಗಳನ್ನು ಜನರು ವೀಕ್ಷಿಸಿ, ಮೊಬೈಲ್‌ನಲ್ಲಿ ಅವುಗಳ ಚಿತ್ರ ಸೆರೆ ಹಿಡಿದರು. ಕೆಲವರು ಶ್ವಾನಗಳ ಮಾಲೀಕರ ದೋಸ್ತಿ ಮಾಡಿ, ಶ್ವಾನಗಳ ಜೊತೆ ಅಂತೂ ಇಂತು ಸೆಲ್ಫಿ ತೆಗೆದುಕೊಂಡು ಬೀಗಿದರು.
ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಲು ಬಂದಿದ್ದ ಜಿಲ್ಲಾಧಿಕಾರಿ ಡಾ.ಆನಂದ್ ಕೆ. ಅವರಿಗೆ ಪೊಲೀಸ್ ಶ್ವಾನಗಳು ಸೆಲ್ಯಾಟ್ ಮೂಲಕ ಸ್ವಾಗತ ಕೋರಿದವು. ಅಲ್ಲದೇ, ಅಲ್ಲಿ ನೆರೆದಿದ್ದ ನೂರಾರು ಜನರ ಸಮ್ಮುಖದಲ್ಲಿ ಬಾಂಬ್ ಪತ್ತೆ, ಅಪರಾಧ ಪತ್ತೆ ಅಣಕು ಕಾರ್ಯಾಚರಣೆ ಪ್ರದರ್ಶನದ ಮೂಲಕ ಚಪ್ಪಾಳೆ ಗಿಟ್ಟಿಸಿದವು.
ಪ್ರದರ್ಶನದಲ್ಲಿ ಭಾಗವಹಿಸಿದ್ದ ಶ್ವಾನಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ಹಾಕಲಾಯಿತು. ಅಲ್ಲದೇ, ಶ್ವಾನಗಳಿಗೆ ಅಗತ್ಯವಿರುವ ಆಹಾರ, ಬಗೆಬಗೆಯ ಬೆಲ್ಟ್, ಚೈನ್ ಮತ್ತಿತರ ವಸ್ತುಗಳ ಪ್ರದರ್ಶನ ಮಾರಾಟವೂ ಇತ್ತು. ಜೊತೆಗೆ ಬಗೆಬಗೆಯ ನಾಯಿಗಳ ಮಾರಾಟವೂ ಜೋರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.