ವಿಜಯಪುರ: ‘ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ ವಿದ್ಯುತ್ ಅವಘಡ ಸಂಭವಿಸಿದ ಘಟನೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೇ ಹೊಣೆ’ ಎಂದು ನಗರಸಭೆ ಹಾಗೂ ವಿಡಿಎ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಕಿಡಿಕಾರಿದ್ದಾರೆ.
‘ನಾಲ್ಕೈದು ವರ್ಷಗಳ ಹಿಂದೆ ಭೂಗತ ಕೇಬಲ್ ಅಳವಡಿಸಲು ನೂರಾರು ಕೋಟಿ ರೂಪಾಯಿ ತಂದಿದ್ದೇನೆ ಎಂದು ಜಂಬ ಕೊಚ್ಚಿಕೊಂಡ ಯತ್ನಾಳ ಈ ಕಾರ್ಯ ಮಾಡಿದ್ದರೆ ಜೀವ ಉಳಿಯುತ್ತಿತ್ತಲ್ಲವೇ? ಕೇವಲ ಮಾತನಾಡುವುದು ಮಾತ್ರ ಅವರಿಗೆ ಗೊತ್ತಿದೆ’ ಎಂದು ಹೇಳಿದ್ದಾರೆ.
‘ಕೇವಲ ಹೇಳಿಕೆ ನೀಡುವಲ್ಲಿಯೇ ಶಾಸಕರು ಕಾಲಹರಣ ಮಾಡುವಲ್ಲಿ ತೊಡಗಿದ್ದಾರೆ, ನೂರಾರು ಕೋಟಿ ರೂಪಾಯಿ ತಂದು ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಮಾಡುವೆ ಎಂದು ಜಂಬ ಕೊಚ್ಚಿಕೊಂಡಿದ್ದರು. ಅದನ್ನು ಪೂರ್ಣಗೊಳಿಸಲು ಎಷ್ಟು ವರ್ಷ ಬೇಕಿತ್ತು, ಹೇಳಿಕೆ ನೀಡುವುದನ್ನು ಬಿಟ್ಟು ತಮ್ಮ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಿದರೆ ಜೀವ ಉಳಿಯುತ್ತಿತ್ತು. ಈ ಘಟನೆಗೆ ಯತ್ನಾಳರೇ ಹೊಣೆ’ ಎಂದು ಆರೋಪಿಸಿದ್ದಾರೆ.
‘ಈ ವಿಷಯದಲ್ಲಿ ನಾನು ರಾಜಕಾರಣ ಮಾಡುತ್ತಿಲ್ಲ. ಆದರೆ, ಒಬ್ಬ ಅಮಾಯಕ ಯುವಕ ಅಸುನೀಗಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಹೆತ್ತ ಮಗುವನ್ನು ಕಳೆದುಕೊಂಡ ಪಾಲಕರ ರೋಧನ ನೋಡಲಾಗುತ್ತಿಲ್ಲ’ ಎಂದರು.
‘ಸರ್ಕಾರ ಈ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ರಜಪೂತ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.