ADVERTISEMENT

ವಿಜಯಪುರ | ಸ್ಮಾರಕಗಳ ರಕ್ಷಣೆಗೆ ಜಾಗೃತಿ ಓಟ: 21 ಸಾವಿರಕ್ಕೂ ಅಧಿಕ ಮಂದಿ ಭಾಗಿ

ಬಸವರಾಜ ಸಂಪಳ್ಳಿ
Published 8 ಡಿಸೆಂಬರ್ 2025, 0:01 IST
Last Updated 8 ಡಿಸೆಂಬರ್ 2025, 0:01 IST
ವಿಜಯಪುರ ನಗರದಲ್ಲಿ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗಾಗಿ ಭಾನುವಾರ ಆಯೋಜಿಸಲಾಗಿದ್ದ ವೃಕ್ಷಥಾನ್ ಪಾರಂಪರಿಕ ಓಟದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಐತಿಹಾಸಿಕ ಗೋಳಗುಮ್ಮಟದ ಎದುರು ಹೆಜ್ಜೆ ಹಾಕಿದರು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದಲ್ಲಿ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗಾಗಿ ಭಾನುವಾರ ಆಯೋಜಿಸಲಾಗಿದ್ದ ವೃಕ್ಷಥಾನ್ ಪಾರಂಪರಿಕ ಓಟದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಐತಿಹಾಸಿಕ ಗೋಳಗುಮ್ಮಟದ ಎದುರು ಹೆಜ್ಜೆ ಹಾಕಿದರು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ‘ಗುಮ್ಮಟನಗರ’ದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಬಾಹ್ಯ ಜಗತ್ತಿಗೆ ಪರಿಚಯ, ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಿಸುವ ಆಶಯದೊಂದಿಗೆ ಭಾನುವಾರ ಇಲ್ಲಿ ಆಯೋಜಿಸಲಾಗಿದ್ದ ‘ವೃಕ್ಷಥಾನ್ ಹೆರಿಟೇಜ್ ರನ್’ ಗಮನ ಸೆಳೆಯಿತು.

ಮೈಕೊರೆಯುವ ಚಳಿಯನ್ನು ಲೆಕ್ಕಿಸದೇ ಚಿಣ್ಣರು, ತರುಣರು, ಹೆಂಗಳೆಯರು, ವೃದ್ಧರು, ಮಠಾಧೀಶರು, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ 21 ಸಾವಿರಕ್ಕೂ ಅಧಿಕ ಜನ ಸೂರ್ಯೋದಯಕ್ಕೂ ಮುನ್ನವೇ ಐತಿಹಾಸಿಕ ಸ್ಮಾರಕಗಳಾದ ಗೋಳಗುಮ್ಮಟ, ಗಗನ್‌ಮಹಲ್‌, ಜೋಡು ಗುಮ್ಮಟ, ಬಾರಾ ಕಮಾನ್‌, ಇಬ್ರಾಹಿಂರೋಜಾ, ಸೈನಿಕ್‌ ಶಾಲೆ, ಜ್ಞಾನ ಯೋಗಾಶ್ರಮ ಮಾರ್ಗದಲ್ಲಿ ಓಡಿದರು. 

ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಿಂದ ಆರಂಭವಾದ ಓಟಕ್ಕೆ ಚಾಲನೆ ನೀಡಿದ ಸಚಿವರಾದ ಎಂ.ಬಿ.ಪಾಟೀಲ ಮತ್ತು ಈಶ್ವರ ಖಂಡ್ರೆ ತಾವೂ ಹೆಜ್ಜೆ ಹಾಕಿ, ಓಟಗಾರರನ್ನು ಹುರಿದುಂಬಿಸಿದರು. 

ADVERTISEMENT

ಪುಣೆಯ ಆಸ್ಟಿನ್ ತಂಡದ ಜುಂಬಾ ಡ್ಯಾನ್ಸ್, ಕೇರಳದ ಮಹಿಳಾ ಕಲಾವಿದರಿಂದ ಫ್ಲವರ್ ಡ್ಯಾನ್ ಮತ್ತು ನವಿಲು ಕುಣಿತ, ಕೊರವ ಕುಣಿತ ಹಾಗೂ ಶೃಂಗಾರ ನೃತ್ಯ, ಶಿರಸಿಯ ಸ್ಮಾರ್ಟ್ ಡ್ಯಾನ್ಸ್ ಅಕಾಡೆಮಿಯ ಕಲಾವಿದರಿಂದ ಚಿಯರ್ ಅಪ್ ನೃತ್ಯ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯರಿಂದ ಬ್ಯಾಂಡ್ ವಾದನ, ವಿಜಯಪುರ ಸೈನಿಕ್‌ ಶಾಲಾ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆ, ಯುವತಿಯರಿಂದ ಚಿಯರ್ ಅಪ್ ನೃತ್ಯ, ಬ್ಯಾಂಜೋ ವಾದನ, ಕರಡಿ ಮಜಲು, ಕಹಳೆ ವಾದನ, ಗೊಂಬೆ ಕುಣಿತ, ಮಹಿಳೆಯರ ಡೊಳ್ಳು ಕುಣಿತ, ಹಲಗೆವಾದನ, ಗಿಟಾರ್ ವಾದನ, ಬಂಜಾರಾ ನೃತ್ಯ ಪ್ರದರ್ಶನ, ಡಿಜೆ ಸೌಂಡ್, ಕೊಳಲು ವಾದನ ಮ್ಯಾರಥಾನ್‌ಗೆ ಸಾಂಸ್ಕೃತಿಕ ಮೆರುಗು ನೀಡಿತು.

ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳು, ಪರಿಸರ, ಐತಿಹಾಸಿಕ ಸ್ಮಾರಕ ಸಂರಕ್ಷಣೆ ಕುರಿತು ನಡೆದ ಮೌಲಿಕ ವಿಚಾರಗೋಷ್ಠಿಗಳಿಂದಾಗಿ ‘ವೃಕ್ಷಥಾನ್‌ ಹೆರಿಟೇಜ್‌ ರನ್‌’ ಅರ್ಥಪೂರ್ಣವಾಯಿತು.

21, 10 ಮತ್ತು 5 ಕಿ.ಮೀ. ವೃಕ್ಷಥಾನ್ ಪಾರಂಪರಿಕ ಓಟದ 26 ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾದ ಪುರುಷ ಮತ್ತು ಮಹಿಳಾ ಓಟಗಾರರಿಗೆ ಒಟ್ಟು ₹12 ಲಕ್ಷ ನಗದು ಬಹುಮಾನ ವಿತರಿಸಲಾಯಿತು.

ವಿಜಯಪುರ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವೃಕ್ಷಥಾನ್ ಪಾರಂಪರಿಕ ಓಟದಲ್ಲಿ ಕೇರಳದ ಕಲಾವಿದರು ಫ್ಲವರ್ ಡ್ಯಾನ್ ಮೂಲಕ ಓಟಗಾರರನ್ನು ಹುರಿದುಂಬಿಸಿದರು

ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಸ್ವಚ್ಛ ಸುಂದರ ಪರಿಸರ ನಿರ್ಮಾಣ ಜೊತೆಗೆ ಮುಂದಿನ 10 ವರ್ಷಗಳಲ್ಲಿ 5 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ
ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ವಿಜಯಪುರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.