ADVERTISEMENT

ವಿಜಯಪುರ–ಹುಬ್ಬಳ್ಳಿ ಹೆದ್ದಾರಿ | ಅವ್ಯವಸ್ಥೆ ಆಗರ ಮುಳವಾಡ ಟೋಲ್‌ ಪ್ಲಾಜಾ

ವಿಜಯಪುರ–ಹುಬ್ಬಳ್ಳಿ ಹೆದ್ದಾರಿ ಬಳಕೆದಾರರಿಗೆ ಅನಾನುಕೂಲ

ಬಸವರಾಜ ಸಂಪಳ್ಳಿ
Published 1 ಜೂನ್ 2025, 5:29 IST
Last Updated 1 ಜೂನ್ 2025, 5:29 IST
ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮುಳವಾಡ ಟೋಲ್‌ ಫ್ಲಾಜಾದಲ್ಲಿ ಬಾಗಿಲು ತೆರೆಯದ ಶೌಚಾಲಯ 
ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮುಳವಾಡ ಟೋಲ್‌ ಫ್ಲಾಜಾದಲ್ಲಿ ಬಾಗಿಲು ತೆರೆಯದ ಶೌಚಾಲಯ    

ವಿಜಯಪುರ: ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮುಳವಾಡ ಟೋಲ್‌ ಫ್ಲಾಜಾ ಅವ್ಯವಸ್ಥೆಗೆ ವಾಹನ ಸವಾರರು, ಪ್ರಯಾಣಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಮುಳವಾಡ ಟೋಲ್‌ ಫ್ಲಾಜಾ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ವಾಹನಗಳಿಂದ ಅಧಿಕ ಶುಲ್ಕ ವಸೂಲಿ ಮಾಡುವ ಟೋಲ್‌ ಫ್ಲಾಜಾ ಸಿಬ್ಬಂದಿಯವರು ಸೌಲಭ್ಯ ಒದಗಿಸುವಲ್ಲಿ ಹಿಂದೆ ಬಿದ್ದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಮುಳವಾಡ ಟೋಲ್‌ ಫ್ಲಾಜಾದಲ್ಲಿ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯ ಇದ್ದರೂ ಬಳಕೆಗೆ ಅವಕಾಶವಿಲ್ಲ, ವೇಬ್ರಿಡ್ಜ್‌ ಇದ್ದರೂ ಉಪಯೋಗವಿಲ್ಲ ಎಂದು ದೂರಿದರು.

ADVERTISEMENT

ನೀರು, ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬಳಕೆದಾರರಿಗೆ ಅದರಲ್ಲೂ ಈ ಮಾರ್ಗವಾಗಿ ಸಂಚರಿಸುವ ಪ್ರವಾಸಿಗರಿಗೆ ತೀವ್ರ ತೊಂದರೆ ಆಗಿದೆ ಎಂದರು.

ಹೆಸರಿಗಟ್ಟೇ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಪೂರ್ಣವಾಗಿಲ್ಲ. ಈ ಬಗ್ಗೆ ಟೋಲ್‌ ಫ್ಲಾಜಾ ಸಿಬ್ಬಂದಿಯನ್ನು ವಿಚಾರಿಸಿದರೆ ಲೋಕೋಪಯೋಗಿ ಇಲಾಖೆಯವರು ಮಾಡಿಕೊಡಬೇಕಿತ್ತು. ಇನ್ನೂ ಮಾಡಿಲ್ಲ. ಎನ್ನುತ್ತಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಕಾಮಗಾರಿ ಪೂರ್ಣ ಮಾಡಿ ಟೋಲ್‌ ಫ್ಲಾಜಾ ಗುತ್ತಿಗೆದಾರರಿಗೆ ಹಸ್ತಾಂತರಿಸಿದ್ದೇವೆ ಎಂದು ಒಬ್ಬರು ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಟೋಲ್‌ ಫ್ಲಾಜಾದಲ್ಲಿ ಶೌಚಾಲಯ ಇಲ್ಲದ ಕಾರಣ ವಾಹನ ಚಾಲಕರು, ಪ್ರಯಾಣಿಕರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಹೊಲಗಳಲ್ಲಿ ಇರುವ ಕಂಟಿ, ಪೊದೆ ಬಳಿ ಹೋಗಿ ಮೂತ್ರ ವಿಸರ್ಜನೆ ಮಾಡಬೇಕಾದ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಟೋಲ್‌ ಫ್ಲಾಜಾ ಬಳಿ ವೇಬ್ರಿಡ್ಜ್‌ ನಿರ್ಮಿಸಿದ್ದರೂ ಕಾರ್ಯಾಚರಣೆ ಮಾಡುತ್ತಿಲ್ಲ, ಸಿಬ್ಬಂದಿಯೂ ಇಲ್ಲ. ಇದರಿಂದ ಸರಕು, ಸಾಗಾಟ ಮಾಡುವ ಹಾಗೂ ಕೃಷಿ ಉತ್ಪನ್ನಗಳನ್ನು ಕೊಂಡೊಯ್ಯುವ ರೈತರಿಗೆ ಅನುಕೂಲವಾಗಿದೆ. ವೇ ಬ್ರಿಡ್ಜ್‌ ಇದ್ದೂ ಇಲ್ಲದಂತಾಗಿದೆ ಎಂದು ಹೇಳಿದರು.

ಮುಳವಾಡ ಟೋಲ್‌ ಫ್ಲಾಜಾದಲ್ಲಿ ಸಮರ್ಪಕ ಮೂಲ ಸೌಲಭ್ಯ ಇಲ್ಲದಿರುವ ಬಗ್ಗೆ ಸಿಬ್ಬಂದಿಯನ್ನು ವಿಚಾರಿಸಿದರೆ ಪ್ರಯಾಣಿಕರ ಮೇಲೆ ಗುಂಡಾಗಿರಿ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಜಿಲ್ಲಾಡಳಿತ ಗಮನ ಹರಿಸಬೇಕು
–ಸೋಮನಾಥ ಕಳ್ಳಿಮನಿ ಅಹಿಂದ ಮುಖಂಡ

ಸಂಚಾರಕ್ಕೆ ಮುಕ್ತವಾಗದ ರೈಲ್ವೆ ಮೇಲ್ಸೇತುವೆ  ವಿಜಯಪುರ–ಹುಬ್ಬಳ್ಳಿ ಹೆದ್ದಾರಿಯ ಹೊನಗನಹಳ್ಳಿ ಬಳಿ ಮೂರು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿರುವ ರೈಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಸಂಸದ ರಮೇಶ ಜಿಗಜಿಣಗಿ ಅವರು 15 ದಿನಗಳ ಹಿಂದೆ ಭೇಟಿ ನೀಡಿ ಪರಿಶೀಲಿಸಿ ಆದಷ್ಟು ಶೀಘ್ರ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವಂತೆ ರೈಲ್ವೆ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರೂ ಇನ್ನೂ ಸಂಚಾರಕ್ಕೆ ಅವಕಾಶ ಕಲ್ಪಿಸಿಲ್ಲ. ಮಳೆಗಾಲ ಆರಂಭವಾಗಿದೆ. ಹಳೆಯ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಆದಷ್ಟು ಬೇಗ ಹೊನಗನಹಳ್ಳಿ ರೈಲ್ವೆ ಮೇಲ್ಸೇತುವೆನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಸೋಮನಾಥ ಕಳ್ಳಿಮನಿ ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.